*ಗೋಣಿಕೊಪ್ಪ, ಏ. ೪: ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದ ಜನಾಂಗವನ್ನು ಚುನಾವಣೆ ಸಂದರ್ಭಗಳಲ್ಲಿ ಮತ ಬ್ಯಾಂಕಿಗಷ್ಟೇ ಪರಿಗಣಿಸಲಾಗುತ್ತಿದೆಯೇ ಹೊರತು ಸಮಾನತೆಯ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಜಿಲ್ಲಾ ಯರವ ಒಕ್ಕೂಟದ ಗೌರವಾಧ್ಯಕ್ಷ ಪಿ.ಎಸ್. ಮುತ್ತ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಬಂದಾಗ ಮಾತ್ರ ನಮ್ಮ ಜನಾಂಗವನ್ನು ಓಲೈಸುವ ತಂತ್ರಗಾರಿಕೆ ಪಕ್ಷಗಳಲ್ಲಿ ಮುಂದುವರಿದಿದೆ. ಉಳಿದಂತೆ ಯಾವುದೇ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಮತ್ತು ಸಮುದಾಯವನ್ನು ಸಮಾಜಮುಖಿಯಾಗಿ ಗುರುತಿಸಲು ವೇದಿಕೆ ಕಲ್ಪಿಸುವಲ್ಲಿ ಆಸಕ್ತಿ ಕಳೆದುಕೊಂಡಿದೆ ಎಂದು ಹೇಳಿದರು.
ಉಳ್ಳವರಿಗಷ್ಟೇ ಭೂಮಿಯ ಒಡೆತನವನ್ನು ಗುತ್ತಿಗೆ ಆಧಾರದಲ್ಲಿ ನೀಡುವ ನಿರ್ಣಯಕ್ಕೆ ಮುಂದಾಗಿದೆ. ಆದರೆ, ಪಾರಂಪರಿಕವಾಗಿ ಉಳಿದುಕೊಂಡು ತನ್ನದೇ ಆದ ಸಂಸ್ಕöÈತಿಯನ್ನು ಬೆಳೆಸುತ್ತಿರುವ ಆದಿವಾಸಿ ಸಮುದಾಯಕ್ಕೆ ಬದುಕುವ ಹಕ್ಕುಗಳಿಗಾಗಿ ಭೂಮಿಯನ್ನು ನೀಡದೇ ಇರುವುದು ಬಡವರ ಮೇಲಿನ ಶೋಷಣೆಯಾಗಿದೆ. ಶ್ರೀಮಂತರ ಮೇಲಿರುವ ವ್ಯಾಮೋಹ ಸರ್ಕಾರಕ್ಕೆ ಬಡವ ದೀನ ದಲಿತರ ಮೇಲೆ ಏಕೆ ಇಲ್ಲ ಇಂದು ಪ್ರಶ್ನಿಸಿದ್ದಾರೆ.
ಸಂವಿಧಾನ ಬದ್ಧವಾದ ಮತದಾನದ ಹಕ್ಕನ್ನು ಹೊಂದಿರುವ ಹೊರತು ಆದಿವಾಸಿಗಳು ಸ್ವತಂತ್ರö್ಯವಾಗಿ ಬದುಕುವ ಹಕ್ಕನ್ನೇ ಕಳೆದುಕೊಂಡಿದ್ದಾರೆ. ಸ್ವಂತ ಮನೆ, ವಿದ್ಯುತ್ ಸೌಕರ್ಯ, ರಸ್ತೆ ಸೇರಿದಂತೆ ಬದುಕಿಗೆ ಬೇಕಾದ ಯಾವುದೇ ಮೂಲಭೂತ ಸೌಕರ್ಯಗಳು ಪರಿಪೂರ್ಣವಾಗಿ ದಕ್ಕುತ್ತಿಲ್ಲ ಎಂದು ಹೇಳಿದರು.
ಮತದಾನಕಷ್ಟೇ ಬುಡಕಟ್ಟು ಸಮುದಾಯವನ್ನು ಪರಿಗಣಿಸುವ ವ್ಯವಸ್ಥೆಯಿಂದ ಹೊರಬಂದು ಸಮಾನತೆಯ ಬದುಕು ಕಟ್ಟಿಕೊಳ್ಳಲು ಪೂರಕ ವ್ಯವಸ್ಥೆಯನ್ನು ಸರ್ಕಾರ ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ. ಈ ಬಗ್ಗೆ ಅಧಿಕಾರಿಗಳು, ಸರ್ಕಾರ ಚಿಂತನೆ ಹರಿಸದೇ ಇದ್ದಲ್ಲಿ ಮುಂದಿನ ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ಆದಿವಾಸಿಗಳ ಬದುಕಿನ ಹಕ್ಕಿಗಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ. ಗೋಷ್ಠಿಯಲ್ಲಿ ಪಿ.ಟಿ. ಸುರೇಶ, ವೈ.ಸಿ. ಶಂಕರು, ವೈ.ಎಂ. ಸಿದ್ದ ಹಾಜರಿದ್ದರು.