ಪೊನ್ನಂಪೇಟೆ, ಏ. ೩: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಪೊನ್ನಂಪೇಟೆ ಗ್ರಾ. ಪಂ.ಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಪೊನ್ನಂಪೇಟೆ ಸಮೀಪದ ಕಾಟ್ರಕೊಲ್ಲಿಯ ಆಲೀರ ಎಂ. ರಶೀದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೀರಾಜಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ರಶೀದ್, ಗುರುತಿಸುವಿಕೆ ಮತ್ತು ಸನ್ಮಾನದಂತಹ ಗೌರವಗಳು ಮತ್ತಷ್ಟು ಸಮಾಜ ಸೇವೆಗೆ ಪ್ರೇರಣೆ ನೀಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಈ ಸಂದರ್ಭದಲ್ಲಿ ಮಾತನಾಡಿ, ಪ್ರತಿಯೊಬ್ಬರಿಗೂ ಸಮಾಜ ಸೇವೆ ಮಾಡುವ ಅವಕಾಶವಿದ್ದರೂ, ಶಾಸನಬದ್ಧವಾದ ಅಧಿಕಾರ ಹೊಂದಿರುವ ಸ್ಥಾನದಲ್ಲಿ ನಿಂತು ಮಾಡುವ ಸಮಾಜ ಸೇವೆ ನಿಜಕ್ಕೂ ಮೌಲ್ಯಯುತವಾದದ್ದು ಎಂದರು.
ಕೊಡವ ಮುಸ್ಲಿಂ ಅಸೋಸಿಯೇಷನ್ ಹಿರಿಯ ಉಪಾಧ್ಯಕ್ಷರಾದ ಡಾ. ಜೋಯಿಪೆರ ಎ. ಕುಂಜ್ಹಬ್ದುಲ್ಲಾ ಮಾತನಾಡಿ, ಜನಪ್ರತಿನಿಧಿಯಾದವರಿಗೆ ಜಾತಿ, ಮತ, ಧರ್ಮ ಭಾಷೆಗಳನ್ನು ಮೀರಿ ಸಮಾಜ ಸೇವೆಗೈಯುವ ಅವಕಾಶವಿದೆ ಎಂದರು.
ವೇದಿಕೆಯಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು, ಸಂಸ್ಥೆಯ ಮಾಜಿ ನಿರ್ದೇಶಕರು ಮತ್ತು ನಿವೃತ್ತ ಉಪ ತಹಶೀಲ್ದಾರರಾದ ಚಿಮ್ಮಿಚ್ಚಿರ ಎ. ಅಬ್ದುಲ್ಹಾ ಹಾಜಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೆಎಂಎ ಆಡಳಿತ ಮಂಡಳಿ ಪದಾಧಿಕಾರಿಗಳಾದ ಚಿಮ್ಮಿಚ್ಚಿರ ಕೆ. ಇಬ್ರಾಹಿಂ, ಮಂಡೆAಡ ಎ. ಮೊಯ್ದು, ಪುದಿಯತ್ತಂಡ ಹೆಚ್. ಸಂಶುದ್ದೀನ್, ಪೊಯಕೆರ ಎಸ್. ಮೊಹಮ್ಮದ್ ರಫೀಕ್, ಪುದಿಯಾಣೆರ ಎಂ. ಹನೀಫ್, ಕುಪ್ಪೋಡಂಡ ಎ. ಅಬ್ದುಲ್ ರಶೀದ್ ಮೊದಲಾದವರು ಹಾಜರಿದ್ದರು.
ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಎಂ.ಎA. ಇಸ್ಮಾಯಿಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಫೀಕ್ ತೂಚಮಕೇರಿ ಕಾರ್ಯಕ್ರಮ ನಿರ್ವಹಿಸಿದರು. ಜಂಟಿ ಕಾರ್ಯದರ್ಶಿ ಮುಸ್ತಫ ವಂದಿಸಿದರು.