ಮಡಿಕೇರಿ, ಏ. ೩: ಮಡಿಕೇರಿ ಸಮೀಪದ ಗಾಳಿಬೀಡಿನಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ ೩೨ ವರ್ಷಗಳ ಕಾಲ ವಿದ್ಯಾಲಯದ ಭೋಜನಾಲಯದಲ್ಲಿ ಬಾಣಸಿಗರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎನ್. ಶ್ರೀನಿವಾಸ ಮತ್ತು ಮಂಜ ಶೆಟ್ಟಿ ಅವರಿಗೆ ಬೀಳ್ಕೊಡುಗೆ-ಸನ್ಮಾನ ಕಾರ್ಯಕ್ರಮ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀನಿವಾಸ್ ಅವರು ತಮ್ಮ ವೃತ್ತಿ ಬದುಕಿನ ಪ್ರಾರಂಭದ ದಿನಗಳನ್ನು ಮೆಲಕು ಹಾಕಿದರು. ಅವರು ಭೋಜನಾಲಯದ ಅಗತ್ಯಗಳನ್ನು ಪೂರೈಸುತ್ತಾ ಕಾಲಕಾಲಕ್ಕೆ ಸಹಕರಿಸಿದ ಎಲ್ಲಾ ಪ್ರಾಚಾರ್ಯರನ್ನೂ ವೃತ್ತಿಯ ಪ್ರಾರಂಭದ ದಿನಗಳಲ್ಲಿ ತಮಗೆ ಸಹಕರಿಸಿದ್ದ ಸ್ಥಾಪಕ ಪ್ರಾಚಾರ್ಯರಾದ ಕೆ.ಎಸ್.ಎನ್. ಭಟ್, ಭೋಜನಾಲಯದ ಸುಧಾರಣೆಗೆ ಹಣದ ನೆರವು ನೀಡಿದ ಹಳೆಯ ವಿದ್ಯಾರ್ಥಿಗಳು, ಪಾಲಕರನ್ನು ನೆನಪಿಸಿಕೊಂಡರು. ನವೋದಯ ವಿದ್ಯಾಲಯದ ಪ್ರಾಚಾರ್ಯರಾದ ಓ.ಎಂ. ಪಂಕಜಾಕ್ಷನ್ ಅವರು ಈರ್ವರ ಸಮರ್ಪಿತ ಕಾರ್ಯವೈಖರಿಯನ್ನೂ, ಸಮಯಪಾಲನೆಯನ್ನೂ ಹೊಗಳಿದರು. ಉಪಪ್ರಾಚಾರ್ಯರಾದ ಸುಧಾಮಣಿ ಪಂಕಜಾಕ್ಷನ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾದ ಸರ್ವರನ್ನೂ ಸ್ವಾಗತಿಸಿದರು. ಗಂಗಾಧರ ಕೆ ಅವರು ವಂದನಾರ್ಪಣೆ ಮಾಡಿದರು. ಗಣೇಶ ಹೆಗಡೆ ಅವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

ಈ ಕಾರ್ಯಕ್ರಮದಲ್ಲಿ ನವೋದಯ ವಿದ್ಯಾಲಯ ಸಮಿತಿಯ ಪೂನಾ ವಲಯದ ಉಪ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಮತ್ತು ಇದೇ ವಿದ್ಯಾಲಯದ ಸ್ಥಾಪಕ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ್ದ ಕೆ.ಎಸ್.ಎನ್. ಭಟ್, ಈ ವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ್ದ ಚಂದ್ರಶೇಖರ ರೆಡ್ಡಿ, ಇಲ್ಲಿ ಭೌತಶಾಸ್ತç ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದ ಈಗ ರಾಮನಗರದ ವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿರುವ ಕುಮಾರ್, ವಿದ್ಯಾಲಯದಲ್ಲಿ ಓದಿದ್ದ ಹಳೆಯ ವಿದ್ಯಾರ್ಥಿಗಳು, ಪಾಲಕವರ್ಗದವರು, ಪಾಲಕ ಶಿಕ್ಷಕ ಪರಿಷತ್ತಿನ ಸದಸ್ಯರೂ ಹಾಜರಿದ್ದರು.