ಮಡಿಕೇರಿ, ಮಾ. ೨೮: ಯಾವದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಸೇರುವದಿಲ್ಲ. ತಾನು ಹಾಗೂ ಬೆಂಬಲಿಗರು ಯಾವ ಪಕ್ಷಕ್ಕೂ ಸೇರದೆ ತಟಸ್ಥವಾಗಿರುವದಾಗಿ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನಿಂದ ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಸೋಲು ಕಾಣುವಂತಾಯಿತು. ಸಮರ್ಥ ಅಭ್ಯರ್ಥಿಯಿಲ್ಲದ ಕಾರಣ ನಾವೆಲ್ಲರೂ ಅಂದು ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದೆವು. ಜೆಡಿಎಸ್ನಿಂದಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುವಂತಾಯಿತು. ಸೋಲಿನ ನೈತಿಕ ಹೊಣೆ ಹೊತ್ತು ತಾನು ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆ. ಈ ಸಂದರ್ಭ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ತನ್ನನ್ನು ಬೆಂಗಳೂರಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದು, ಕಾಂಗ್ರೆಸ್ಗೆ ಕೆಲಸ ಮಾಡುವಂತೆ ಆಹ್ವಾನ ನೀಡಿದ್ದರು. ಆದರೆ ತಾನು ಇಂದಿಗೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಲ್ಲ, ಸೇರುವದೂ ಇಲ್ಲವೆಂದು ಹೇಳಿದರು. ಕೆಲವು ಕಾಂಗ್ರೆಸ್ ಮುಖಂಡರು ತನ್ನ ಬಗ್ಗೆ ಟೀಕೆ ಮಾಡುತ್ತಿದ್ದು, ತಾನು ಎಂದೂ ಕಾಂಗ್ರೆಸ್ನವರ ಮನೆ ಬಾಗಿಲಿಗೆ ಹೋಗಿಲ್ಲ, ಕಾಂಗ್ರೆಸ್ನವರೇ ತನ್ನ ಮನೆ ಬಾಗಿಲಿಗೆ ಬಂದಿರುವದು ಎಂದು ಹೇಳಿದ ಅವರು, ಯಾವದೇ ಪಕ್ಷಕ್ಕೆ ಸೇರ್ಪಡೆಗೊಳ್ಳದೆ ತಟಸ್ಥವಾಗಿರುವದಾಗಿ ಹೇಳಿದರು.
ಗೋಷ್ಠಿಯಲ್ಲಿ ಜೆಡಿಎಸ್ನ ಮಾಜಿ ಪದಾಧಿಕಾರಿಗಳಾದ ಆದಿಲ್ ಪಾಷ, ಡೆನ್ನಿ ಬರೋಸ್, ಸಿ.ಎನ್.ಸುನಿಲ್, ಕೆ.ಪಿ.ಗಣೇಶ್, ಜಗನ್ ಇದ್ದರು.