ಕುಶಾಲನಗರ, ಮಾ. ೨೮: ಜೀವನದಿ ಕಾವೇರಿಯಲ್ಲಿ ಒಂದೆಡೆ ನೀರಿನ ಹಾಹಾಕಾರ ಎದುರಾಗಿದ್ದು, ಇನ್ನೊಂದೆಡೆ ನದಿಯಲ್ಲಿ ಈಜಲು ತೆರಳಿದ ಕೆಲವು ಯುವಕರ ಪಾಲಿಗೆ ಕಾವೇರಿ ಮರಣ ಮೃದಂಗವಾಗಿ ಪರಿಣಮಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಘಟನೆಗಳು ಮರುಕಳಿಸುತ್ತಿರುವುದು ಕಂಡಾಗ ಕುಶಾಲನಗರ ವ್ಯಾಪ್ತಿಯಲ್ಲಿ ಮಾತ್ರ ಕಾವೇರಿ ಮುನಿಸಿದ ಹಾಗೆ ಕಂಡು ಬರುತ್ತಿದೆ ಎಂದರೆ ತಪ್ಪಾಗಲಾರದು.!!

ಕೇವಲ ಒಂದು ತಿಂಗಳ ಅವಧಿಯಲ್ಲಿ ಕುಶಾಲನಗರ ಮತ್ತು ಸಮೀಪದ ಬೈಲುಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಧಿಯಲ್ಲಿ ಒಟ್ಟು ಎಂಟು ಮಂದಿ ಯುವಕರು ನದಿಯಲ್ಲಿ ಪ್ರಾಣ ಕಳೆದು ಕೊಂಡಿರುವುದು ಅಂಕಿ ಅಂಶಗಳ ಮೂಲಕ ಕಾಣಬಹುದು.

ಬಿರು ಬೇಸಿಗೆ ನಡುವೆ ಹೆಚ್ಚಿನ ಮಕ್ಕಳು ಸ್ನಾನದ ಹೆಸರಿನಲ್ಲಿ ನದಿಯನ್ನು ಅವಲಂಬಿಸುತ್ತಿರುವುದು ಸಾಮಾನ್ಯ ಸಂಗತಿ.

ಆದರೆ ಇದರ ನಡುವೆ ಕೆಲವು ಯುವಕರು ಗಾಂಜಾ ಮದ್ಯ ಸೇವನೆ ಮತ್ತಿತರ ಅಮಲು ಪದಾರ್ಥಗಳನ್ನು ಸೇವಿಸಿ ನದಿಯಲ್ಲಿ ಇಳಿಯುತ್ತಿ ರುವುದು ಇತ್ತೀಚಿನ ಬೆಳವಣಿಗೆಯಾಗಿದೆ.

ದುಬಾರೆ ಸಮೀಪ ದಾಸವಾಳ ಬಳಿ ಸಮೀಪದ ಚೆಟ್ಟಳ್ಳಿ ಬಳಿಯ ಕಂಡಕೆರೆ ಯುವಕ ನೀರುಪಾಲಾದರೆ, ಅದಕ್ಕೂ ಹಿಂದೆ ಫೆಬ್ರವರಿ ತಿಂಗಳಲ್ಲಿ ಬಿಳಿಕೆರೆಯ ವಿದ್ಯಾರ್ಥಿಯೊಬ್ಬ ಕಣಿವೆ ರಾಮಲಿಂಗೇಶ್ವರ ದೇವಾ ಲಯ ಬಳಿ ನೀರು ಪಾಲಾಗಿರುವುದನ್ನು ಗಮನಿಸಬಹುದು.

ಈ ನಡುವೆ ಕೊಪ್ಪ ಭಾಗದ ಯುವಕನೊಬ್ಬ ಈಜಲು ತೆರಳಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದ. ಹೊಸಕೋಟೆ ಸಮೀಪದ ತೊಂಡೂರು ಬಳಿಯ ಯುವಕನೊಬ್ಬ ಗುಡ್ಡೆಹೊಸೂರು ಸಮೀಪದ ಬಾಳುಗೋಡು ಬಳಿ ಕಾವೇರಿ ನದಿಯ ಇನ್ನೊಂದು ಭಾಗಕ್ಕೆ ತೆರಳಿ ನೀರಿಗೆ ಧುಮುಕಿದಾಗ ನದಿಯಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಗೆ ಸಿಲುಕಿ ಪ್ರಾಣ ತೆತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಕಾವೇರಿ ನದಿಯಲ್ಲಿ ಮೋಜು ಮಸ್ತಿ ಮಾಡಲು ತೆರಳಿದ ನಾಲ್ವರು ಯುವಕರ ತಂಡ ಕೋವಿಯಲ್ಲಿ ಆಟವಾಡಲು ಹೋಗಿ ಓರ್ವ ಯುವಕ ಗುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೂಡ ಇನ್ನು ನೆನಪಿನಿಂದ ಮಾಸಿಲ್ಲ.ಮಳೆಗಾಲದ ಅವಧಿಯಲ್ಲಿ ತುಂಬಿ ಹರಿಯುವ ನದಿಯಲ್ಲಿ ಯಾವುದೇ ರೀತಿಯಲ್ಲಿ ಜನ ಜಾನುವಾರುಗಳ ಪ್ರಾಣ ಹಾನಿಗೆ ಕಾವೇರಮ್ಮ ಅವಕಾಶ ನೀಡದಿರುವುದನ್ನು ನಾವು ಸರ್ವೇ ಸಾಮಾನ್ಯವಾಗಿ ಕಾಣಬಹುದು.

ಆದರೆ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಸ್ಥಗಿತಗೊಂಡ ಸಂದರ್ಭ ಈ ರೀತಿಯ ಅನಾಹುತ ಗಳು ಕುಶಾಲನಗರ ವ್ಯಾಪ್ತಿಯಲ್ಲಿ ಆಗಾಗ್ಗೆ ಮರುಕಳಿಸುತ್ತಿರುವುದು ಮಾತ್ರ ಆತಂಕಕಾರಿ ಬೆಳವಣಿಗೆಯಾಗಿದೆ.

ಕುಶಾಲನಗರದ ಕೆಲವು ಕಾಲೇಜಿನ ವಿದ್ಯಾರ್ಥಿಗಳು ಸಮವಸ್ತçದಲ್ಲಿ ಬಂದು ಈ ರೀತಿಯ ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಕೂಡ ಇತ್ತೀಚಿನ ದಿನಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತಿದೆ.

ಕಾಲೇಜಿಗೆ ತೆರಳುವ ನೆಪದಲ್ಲಿ ವಿದ್ಯಾರ್ಥಿಗಳು ತರಗತಿಗೆ ಗೈರು ಹಾಜರಾಗಿ ಸ್ನೇಹಿತರೊಂದಿಗೆ ಇಂತಹ ಮೋಜು ಮಸ್ತಿಯಲ್ಲಿ ತೊಡಗುತ್ತಿರುವುದು ಕೂಡ ಅಪಾಯಕಾರಿ ಬೆಳವಣಿಗೆಯಾಗಿದೆ.

ನೀರಿನ ಅಪಾಯದ ಬಗ್ಗೆ ಪೋಷಕರು ತಮ್ಮ ಮಕ್ಕಳಿಗೆ ಅರಿವು, ಜಾಗೃತಿ ಹಾಗೂ ಎಚ್ಚರಿಕೆ ಮೂಡಿಸಬೇಕಾಗಿರುವುದು ಪ್ರಮುಖ ಜವಾಬ್ದಾರಿಯಾಗಿದೆ.

ಹೆಚ್ಚಿನ ಘಟನೆಗಳಲ್ಲಿ ಬಹುತೇಕ ಯುವಕರು ಅಮಲು ಪದಾರ್ಥ ಸೇವಿಸಿ ನಂತರ ನದಿಗೆ ಈಜಲು ತೆರಳುವ ದುಸ್ಸಾಹಸ ಮಾಡುತ್ತಿ ರುವುದು ಅಪಾಯದ ಸಂಕೇತ ಎಂದು ಕುಶಾಲನಗರ ಪೊಲೀಸ್ ವೃತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಅವರು ಪತ್ರಿಕೆಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ಈ ಸಂಬAಧ ಪ್ರತಿಯೊಬ್ಬರು ಅಪಾಯಕ್ಕೆ ಆಹ್ವಾನ ಕಲ್ಪಿಸದೆ ತಮ್ಮ ಅಮೂಲ್ಯ ಜೀವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಇದೀಗ ಪರೀಕ್ಷಾ ದಿನಗಳು ಕಳೆಯುತ್ತಿದ್ದು ರಜಾದಿನಗಳನ್ನು ನದಿ ತಟಗಳಲ್ಲಿ ಕಾಲ ಕಳೆಯುವ ಮಕ್ಕಳ ಬಗ್ಗೆ ಪ್ರತಿ ಮನೆಯಲ್ಲಿ ಪೋಷಕರು ಹೆಚ್ಚಿನ ಗಮನ ಹರಿಸುವುದರೊಂದಿಗೆ ಮುಂಜಾಗ್ರತೆ ವಹಿಸುವುದು ಪ್ರಮುಖ ದಿನಚರಿಯಾಗಬೇಕು ಎನ್ನುವುದು ‘ಶಕ್ತಿ'ಯ ಕಿವಿ ಮಾತಾಗಿದೆ.

- ಎಂ.ಎನ್. ಚಂದ್ರಮೋಹನ್