ಚರ್ಮಗಂಟು ರೋಗ

ಗುಡ್ಡೆಹೊಸೂರು, ಮಾ. ೨೬: ಈ ಭಾಗದ ಕೆಲವು ರೈತರ ಜಾನುವಾರುಗಳಿಗೆ ಚರ್ಮಗಂಟು ರೋಗ ವ್ಯಾಪಕವಾಗಿ ಹರಡುವ ಭೀತಿಯಲ್ಲಿದೆ. ಕೆಲವು ರೈತರ ದನಗಳು ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿವೆ. ಈ ರೋಗವು ಉತ್ತಮ ತಳಿಯ ಹಸುಗಳಲ್ಲಿ ಮೊದಲು ಬರುತ್ತಿದ್ದು, ಈ ರೋಗದ ಮೊದಲ ಲಕ್ಷಣವೆಂದರೆ ದನಗಳ ದೇಹದ ಮೇಲೆ ಸಣ್ಣ ಸಣ್ಣ ಗುಳ್ಳೆಗಳು ಪ್ರಾರಂಭವಾಗಿ ಈ ಗುಳ್ಳೆಗಳು ಒಡೆದು ರಕ್ತ ಸ್ರಾವವಾಗುತ್ತದೆ. ಗುಳ್ಳೆಗಳು ಹಲವು ದಿನಗಳ ತನಕ ಹಾಗೆಯೆ ಇದ್ದು, ನಂತರ ರೋಗ ಉಲ್ಬಣವಾಗುತ್ತದೆ. ಈ ಭಾಗದಲ್ಲಿ ಹಲವು ರೈತರು ಹೈನುಗಾರಿಕೆಯಲ್ಲಿ ತೊಡಗಿದ್ದು, ಇದೀಗ ಈ ಕಾಯಿಲೆಯಿಂದ ಭಯಭೀತರಾಗಿದ್ದಾರೆ. ಇಲ್ಲಿನ ರೈತರಾದ ಪುಲಿಯಂಡ ರಾಮ್ ದೇವಯ್ಯ ಅವರಲ್ಲಿ ೪೦ ದನಗಳಿದ್ದು, ಹಲವು ಹಸುಗಳು ಈ ರೋಗಕ್ಕೆ ತುತ್ತಾಗಿವೆ. ಸೂಕ್ತ ಚಿಕಿತ್ಸೆ ದೊರಕಿಸುವಂತೆ ಈ ಭಾಗದ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಈ ಸಂಬAಧ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ನಿಯಂತ್ರಣಕ್ಕೆ ಕ್ರಮವಹಿಸಬೇಕಾಗಿದೆ. -ಗಣೇಶ್ ಕುಡೆಕ್ಕಲ್