ಸಿದ್ದಾಪುರ, ಮಾ. ೨೭: ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿ ಪಕ್ಷವಾದ ಜೆಡಿಎಸ್ ಪಕ್ಷವನ್ನು ಕ್ಷೇತ್ರ ಹಂಚಿಕೆ ವಿಷಯದಲ್ಲಿ ಬಿಜೆಪಿ ಕಡೆಗಣಿಸಿದೆ ಎಂಬ ಆರೋಪದೊಂದಿಗೆ ರಾಜ್ಯ ರಾಜಕೀಯದಲ್ಲಿ ಮೈತ್ರಿ ಕೂಟದ ಹೊಂದಾಣಿಕೆ ಕೊರತೆ ಇದೀಗ ಕೊಡಗು ಜಿಲ್ಲೆಯ ರಾಜಕೀಯದಲ್ಲೂ ಪರಿಣಾಮ ಬೀರಿದೆ. ಇದಕ್ಕೆ ಪೂರಕವೆಂಬAತೆ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಸಭೆಗಳೂ ನಡೆಸದೇ ಅಂತರ ಕಾಯ್ದುಕೊಂಡಿದೆ.
ಕರ್ನಾಟಕದ ಒಟ್ಟು ೨೮ ಲೋಕಸಭಾ ಕ್ಷೇತ್ರದ ಪೈಕಿ ಮಂಡ್ಯ, ಕೋಲಾರ, ಹಾಸನ ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಸ್ಪರ್ಧಿಸುತ್ತಿದೆ. ಉಳಿದ ೨೫ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಬಿಜೆಪಿಗೆ ಬೆಂಬಲವನ್ನು ಸೂಚಿಸಬೇಕೆಂದು ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಕೊಡಗು ಜಿಲ್ಲೆಯು ಬಿಜೆಪಿ ಭದ್ರ ಕೋಟೆ ಎಂದೇ ಬಿಂಬಿತವಾಗಿದ್ದರೂ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನ ಎರಡು ಕ್ಷೇತ್ರದಲ್ಲಿ ಬಿಜೆಪಿ ಪರಾಭವಗೊಂಡಿರುವುದು ಬಿಜೆಪಿ ಭದ್ರಕೋಟೆ ವಿಚಲಿತಗೊಂಡಿರುವುದು ಕಂಡುಬರುತ್ತಿದೆ.
ಇದೀಗ ಎನ್ಡಿಎ ಮೈತ್ರಿ ಕೂಟದೊಂದಿಗೆ ಚುನಾವಣಾ ಅಖಾಡಕ್ಕಿಳಿದ ಬಿಜೆಪಿ ಪಕ್ಷವು ಜಿಲ್ಲೆಯಲ್ಲಿ ಹಲವೆಡೆ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಆದರೆ ಮೈತ್ರಿ ಪಕ್ಷವಾದ ಜೆಡಿಎಸ್ ಕಾರ್ಯಕರ್ತರು ಚುನಾವಣಾ ಪ್ರಚಾರ ಸಭೆಗಳಲ್ಲಿ ಎಲ್ಲೂ ಕಾಣಿಸದೇ ಇರುವುದು ಕಂಡುಬರುತ್ತಿದೆ.
ಚುನಾವಣಾ ಕಣದಲ್ಲಿ ಜೆಡಿಎಸ್ ನಾಪತ್ತೆ
ಬಿಜೆಪಿ ಪಕ್ಷವು ಕೊಡಗು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ತಯಾರಿಯಲ್ಲಿ ನಿರತವಾಗಿದೆ. ಆದರೆ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಯಾವುದೇ ಸಭೆಯಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳದೆ ಇರುವುದು ಹಲವು ಸಂಶಯಕ್ಕೆ ಎಡೆಮಾಡಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ವೈರಿಗಳಾಗಿದ್ದವು. ಅಲ್ಲದೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಸೋಲಿಗೆ ಜೆಡಿಎಸ್ ಕಾರಣ ಎಂಬ ದೂರು ಕೂಡ ಬಿಜೆಪಿ ವಲಯದಲ್ಲಿ ಕಂಡುಬAದಿತ್ತು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಕೂಡ ಕೊಡಗು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಚುನಾವಣಾ ಪ್ರಚಾರಕ್ಕೆ ಧುಮುಕದೇ ಮೌನವಹಿಸಿದೆ. ಅಲ್ಲದೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪಕ್ಷ ತೊರೆದು ಬಹಿರಂಗವಾಗಿ ಮೈತ್ರಿಯನ್ನು ವಿರೋಧಿಸಿದ್ದರು. ಅಲ್ಪಸಂಖ್ಯಾತ ಕಾರ್ಯಕರ್ತರು ಕೂಡ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.
ನಾವಿಕನಿಲ್ಲದ ಜೆಡಿಎಸ್
ಜಿಲ್ಲೆಯಲ್ಲಿ ಕೆ.ಎಂ.ಬಿ. ಗಣೇಶ್ ಜೆಡಿಎಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ತೊರೆದ ನಂತರ ಜಿಲ್ಲೆಯಲ್ಲಿ ಜೆಡಿಎಸ್ ಅಧ್ಯಕ್ಷರಿಲ್ಲದೆ ತಟಸ್ಥವಾಗಿದೆ. ಈ ಹಿನ್ನೆಲೆ ಯಾವುದೇ ತೀರ್ಮಾನಕ್ಕೂ ವರಿಷ್ಠರನ್ನೇ ಅವಲಂಬಿಸಬೇಕಾಗಿದೆ.
ಸಭೆಗೆ ಆಹ್ವಾನಿಸದ ಬಿಜೆಪಿ
ಮೈತ್ರಿ ಕೂಟದ ಅಭ್ಯರ್ಥಿಯ ಗೆಲುವಿಗೆ ಕಾರ್ಯತಂತ್ರ ರೂಪಿಸಲು ಬಿಜೆಪಿ ಪಕ್ಷದ ವತಿಯಿಂದ ಜೆಡಿಎಸ್ ಮುಖಂಡರಿಗೆ ಆಹ್ವಾನ ನೀಡದೆ ಇರುವುದು ಮೇಲ್ನೋಟಕ್ಕೆ ಹೊಂದಾಣಿಕೆಯ ಕೊರತೆ ಇರುವುದು ಕಂಡುಬರುತ್ತಿದೆ ಎನ್ನಲಾಗುತ್ತಿದೆ.
- ವಾಸು ಎ.ಎನ್.