ಮಡಿಕೇರಿ, ಮಾ. ೨೭: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಸೂರ್ಯ - ಚಂದ್ರರಷ್ಟೆ ಸತ್ಯವಾಗಿದ್ದು, ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ; ಇದನ್ನು ತಡೆಯಲು ಯಾವ ದುಷ್ಟ ಶಕ್ತಿಗಳಿಂದಲೂ ಸಾಧ್ಯವಿಲ್ಲ. ಮೈಸೂರು - ಕೊಡಗು ಕ್ಷೇತ್ರದಲ್ಲೂ ಕೂಡ ಬಿಜೆಪಿ ಅಭ್ಯರ್ಥಿ ದಾಖಲೆಯ ಮತಗಳ ಅಂತರದಿAದ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಗರದ ಕ್ರಿಸ್ಟಲ್ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು, ಉದ್ಘಾಟನೆ ಬಳಿಕ ಅವರು ಮಾತನಾಡಿದರು. ದೇಶದಲ್ಲಿ ಮೋದಿ ಹಾಗೂ ಬಿಜೆಪಿ ಪರವಾದ ವಾತಾವರಣವಿದೆ. ಮೋದಿಯವರ ಜನಪ್ರಿಯತೆ ಇನ್ನೂ ಕೂಡ ಕಡಿಮೆ ಆಗಿಲ್ಲ. ಇದಕ್ಕೆ ಮೋದಿಯವರ ಉತ್ತಮವಾದ ಆಡಳಿತವೇ ಕಾರಣವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಾಕಷ್ಟು ಭ್ರಷ್ಟಾಚಾರ ಹಗರಣಗಳು ನಡೆದಿದ್ದವು. ದೇಶದ ಪ್ರಜೆಗಳಿಗೆ ದೇಶದ ಭವಿಷ್ಯದ ಬಗ್ಗೆ ಭರವಸೆ ಕಡಿಮೆಯಾಗುತ್ತಿದ್ದ ಸಂದರ್ಭದಲ್ಲಿ ಪ್ರಧಾನಿಯಾಗಿ ಆಯ್ಕೆ ಆದ ನರೇಂದ್ರ ಮೋದಿಯವರು ದೇಶದ ಜನರಿಗೆ ಭಾರತಕ್ಕೂ ಭವಿಷ್ಯವಿದೆ ಎಂಬುದನ್ನು ತೋರಿಸಿಕೊಟ್ಟರು.

ಒಂದೇ ಒಂದು ಭ್ರಷ್ಟಾಚಾರದ ಆರೋಪ ಕೇಂದ್ರದ ಬಿಜೆಪಿ ಸರ್ಕಾರದ ಮೇಲಿಲ್ಲ ಎಂದು ನುಡಿದ ವಿಜಯೇಂದ್ರ ಎಲ್ಲಾ ರಾಜಕಾರಣಿ ಗಳು, ರಾಜಕೀಯ ಪಕ್ಷಗಳು ಚುನಾವಣೆ ಬಗ್ಗೆ ಯೋಚನೆ ಮಾಡಿದರೆ; ನರೇಂದ್ರ ಮೋದಿಯವರು ದೇಶದ ಭವಿಷ್ಯದ ಬಗ್ಗೆ ಯೋಚಿಸುತ್ತಿ ದ್ದಾರೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಯಾಗಿದುವ ನಿಟ್ಟಿನಲ್ಲಿ ದೇಶ ಕಾಯುವ ಯೋಧರಂತೆ ಬಿಜೆಪಿ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಪರವಾಗಿ ಹಗಲಿರುಳು ಶ್ರಮಿಸ ಬೇಕೆಂದು ವಿಜಯೇಂದ್ರ ಕರೆ ನೀಡಿದರು.

ರಾಜ್ಯದಲ್ಲಿ ದರಿದ್ರ ಸರ್ಕಾರ

ಪಕ್ಷದ ಅಧ್ಯಕ್ಷನಾಗಿ ಒಪ್ಪಿ ಕೊಳ್ಳುತ್ತೇನೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮದೇ ಆದಂತಹ ತಪ್ಪಿನಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಒಂದೇ ಸುಳ್ಳನ್ನು ನೂರು ಬಾರಿ ಹೇಳಿ ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಹರಿಸಿಲ್ಲ. ರಾಜ್ಯದ ಯಾವೊಂದು ಕ್ಷೇತ್ರಗಳಿಗೂ ಅಭಿವೃದ್ಧಿಗಾಗಿ ಒಂದು ರೂಪಾಯಿ ಯನ್ನು ಕೊಡದ ದರಿದ್ರ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ ಎಂದು ವಿಜಯೇಂದ್ರ ಟೀಕಿಸಿದರು. ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗಿದ್ದು, ರೈತರ ಆತ್ಮಹತ್ಯೆ ಪ್ರಕರಣಗಳೂ ನಡೆಯುತ್ತಿವೆ. ರಾಜ್ಯದ ಖಜಾನೆಯಿಂದ ಹಣವನ್ನು ರಾಜ್ಯದ ಸಂಕಷ್ಟಕ್ಕೆ ಕೊಡಲಾಗದ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ವಿರುದ್ಧ ಬೊಟ್ಟು ಮಾಡುತ್ತಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ಜನ ಶಾಪ ಹಾಕುತ್ತಿದ್ದಾರೆ. ಕೊಡಗಿನ ಅಭಿವೃದ್ಧಿ ಬಗ್ಗೆಯೂ ಸರ್ಕಾರ ಚಿಂತನೆ ಮಾಡಿಲ್ಲ ಎಂದು ಅವರು ಹೇಳಿದರು.

ಗೆಲುವಿನ ಸಂಕಲ್ಪ

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಜೆಡಿಎಸ್ ಅಭ್ಯರ್ಥಿಗಳು ರಾಜ್ಯದ ೨೮ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಬೇಕು. ಮುಂದೆ ವಿಧಾನಸಭಾ ಚುನಾವಣೆಯಲ್ಲೂ ೧೩೦ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕೆಂಬುದು ತನ್ನ ಸಂಕಲ್ಪವಾಗಿದೆ. ಲೋಕಸಭಾ ಚುನಾವಣೆ ಪ್ರಚಾರ ಸಂಬAಧ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಸದ್ಯದಲ್ಲಿಯೇ ಬರಲಿದ್ದಾರೆ. ಕೊಡಗಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕರೆಸುವ ನಿಟ್ಟಿನಲ್ಲಿ ಚಿಂತನೆ ಮಾಡಲಾಗುತ್ತಿದೆ ಎಂದು ವಿಜಯೇಂದ್ರ ನುಡಿದರು.

ಪ್ರತಾಪ್ ಸಿಂಹಗೆ ಉತ್ತಮ ಭವಿಷ್ಯವಿದೆ

ಕಳೆದ ೧೦ ವರ್ಷಗಳಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಟಿಕೆಟ್ ತಪ್ಪಿದೆ ಎನ್ನುವುದಕ್ಕಿಂತ ರಾಜ್ಯ ರಾಜಕಾರಣದಲ್ಲಿ ಅವರಿಗೆ ಉತ್ತಮ ಭವಿಷ್ಯ ಇದೆ ಎಂದು ಹೇಳುತ್ತೇನೆ ಎಂದ ವಿಜಯೇಂದ್ರ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದಾಗ ಪ್ರತಾಪ್ ಸಿಂಹ ಯಾವ ರೀತಿ ಕೆಲಸ ಮಾಡಿದ್ದಾರೆ ಎಂಬುದನ್ನು ತಾನು ಹತ್ತಿರದಿಂದ ಬಲ್ಲವನಾಗಿದ್ದೇನೆ. ತನ್ನ ಅಧಿಕಾರಾವಧಿಯಲ್ಲಿ ಅವರ ಭವಿಷ್ಯದ ದೃಷ್ಟಿಯಿಂದ ಚಿಂತನೆ ಮಾಡುತ್ತೇನೆ ಎಂದು ಹೇಳಿದರು.

ನಡ್ಡಾ - ಮೋದಿ - ಶಾ ತೀರ್ಮಾನ

ರಾಜ ವಂಶಸ್ಥರಾದ ಯದುವೀರ್ ರಾಜಕಾರಣಕ್ಕೆ ಬರಬೇಕೆಂದು ಅಂದುಕೊAಡವರಲ್ಲ. ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರುಗಳ ತೀರ್ಮಾನದಂತೆ ಯದುವೀರ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು. ಮಹಾರಾಜರ ದೂರದೃಷ್ಟಿತ್ವ, ವಿವಿಧ ಕ್ಷೇತ್ರಗಳಿಗೆ ಅವರ ಕೊಡುಗೆ ಅಪಾರವಾಗಿದೆ. ಮಹಾರಾಜರು ಯಾವುದೇ ಜಾತಿಗೆ ಸೀಮಿತವಾದವರಲ್ಲ ಎಂದು ಅವರು ಹೇಳಿದರು.

ಸಿಎಂ - ಡಿಸಿಎಂ ಆಹ್ವಾನ

ಯದುವೀರ್ ಅವರು ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂಬ ಮಾಹಿತಿ ತಿಳಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯದುವೀರ್ ಅವರನ್ನು ಸಂಪರ್ಕಿಸಿ ‘ನಿಮಗೆ ರಾಜಕಾರಣದಲ್ಲಿ ಆಸಕ್ತಿ ಇದೆ ಎಂದು ಗೊತ್ತಿರಲಿಲ್ಲ; ಆಸಕ್ತಿ ಇದೆ ಎನ್ನುವುದಾದರೆ ಕಾಂಗ್ರೆಸ್‌ಗೆ ಬನ್ನಿ ನಾವು ನಿಮ್ಮನ್ನು ಅಭ್ಯರ್ಥಿಯಾಗಿ ಮಾಡುತ್ತೇವೆ’ ಎಂದು ಆಹ್ವಾನ ನೀಡಿದ್ದರು. ಆದರೆ ಅದನ್ನು ತಿರಸ್ಕರಿಸಿದ ಯದುವೀರ್ ಮೋದಿಯವರ ಅಪೇಕ್ಷೆಯಂತೆ ಬಿಜೆಪಿಯಿಂದ ಸ್ಪರ್ಧಿಸುವುದಾಗಿ ಅವರಿಗೆ ತಿಳಿಸಿದ್ದರು ಎಂದು ವಿಜಯೇಂದ್ರ ಮಾಹಿತಿಯಿತ್ತರು.

ಯದುವೀರ್‌ಗೂ ಪ್ರೀತಿಕೊಡಿ - ಪ್ರತಾಪ್‌ಸಿಂಹ

ವಿಶ್ವದ ಪ್ರತಿಷ್ಠಿತ ನಾಯಕರಲ್ಲಿ ಮೋದಿ ಅವರು ಕೂಡ ಒಬ್ಬರಾಗಿದ್ದಾರೆ. ಸದೃಢ ರಾಷ್ಟç ಕಟ್ಟುವುದು ನಮ್ಮ ಉದ್ದೇಶ. ಕೊಡಗು - ಮೈಸೂರು ಕ್ಷೇತ್ರದಲ್ಲಿ ಕಳೆದ ಬಾರಿಗಿಂತಲೂ ಅತ್ಯಧಿಕ ಮತಗಳ ಅಂತರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದ ಜನತೆ ಯದುವೀರ್ ಅವರನ್ನು ಬೆಂಬಲಿಸಬೇಕು; ನನಗೆ ಕೊಟ್ಟ ಪ್ರೀತಿಯನ್ನು ಯದುವೀರ್ ಅವರಿಗೆ ಕೊಡಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ತನ್ನ ಅವಧಿಯಲ್ಲಿ ಕೊಡಗಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ನೀರು, ರಸ್ತೆ, ಕಾರ್ಖಾನೆ ಸೇರಿದಂತೆ ರಾಜವಂಶ ದೇಶಕ್ಕೆ ಹಲವಾರು ಕೊಡುಗೆಗಳನ್ನು ಕೊಟ್ಟಿದೆ ಎಂದ ಅವರು, ಕಾರ್ಯಕರ್ತರು ಮೈ ಮರೆಯದೆ ಬಿಜೆಪಿ ಅಭ್ಯರ್ಥಿಯ ಗೆಲುವಿಗಾಗಿ ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಮುಂದೆ ಕ್ಷೇತ್ರ ವಿಂಗಡಣೆ ಸಂದರ್ಭ ಕೊಡಗಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರಕ್ಕಾಗಿ ಎಲ್ಲರೂ ಹೋರಾಟ ಮಾಡಬೇಕು ಎಂದ ಅವರು ಮುಂದಿನ ದಿನಗಳಲ್ಲಿ ಯದುವೀರ್ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲಿ. ತಾನು ಕಾರ್ಯಕರ್ತರೊಂದಿಗೆ ಪಕ್ಷಕಟ್ಟುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಮೋದಿ ಆಶೀರ್ವಾದದಿಂದ ಸ್ಪರ್ಧೆ

ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆ ಹಾಗೂ ಆಶೀರ್ವಾದದಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಅಭ್ಯರ್ಥಿ ಯದುವೀರ್ ಹೇಳಿದರು. ನಾವು ಧಾರ್ಮಿಕ ಹಾಗೂ ಆರ್ಥಿಕ ದೃಷ್ಟಿಕೋನದಲ್ಲಿ ಕಾವೇರಿಯನ್ನು ಅವಲಂಭಿಸಿದ್ದೇವೆ. ಇಂತಹ ನೆಲದಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದ್ದು, ಗೆದ್ದರೆ ಮಡಿಕೇರಿ ಹಾಗೂ ಮೈಸೂರಿನಲ್ಲಿ ಕಚೇರಿ ಇರುತ್ತದೆ. ಅಲ್ಲಿ ಜನರ ಸಂಪರ್ಕಕ್ಕೆ ಸಿಗುತ್ತೇನೆ. ಯಾರೂ ಕೂಡ ತಮ್ಮ ಕೆಲಸ ಕಾರ್ಯಗಳಿಗಾಗಿ ನನ್ನನ್ನು ಅರಮನೆಗೆ ಹುಡುಕಿಕೊಂಡು ಬರುವ ಪ್ರಮೇಯ ಬರುವುದಿಲ್ಲ. ಕಾರ್ಯಕರ್ತರೆ ಪಕ್ಷದ ಆತ್ಮ ಹಾಗೂ ಹೃದಯ ಎಂದ ಯದುವೀರ್ ಸಂಸದ ಪ್ರತಾಪ್‌ಸಿಂಹ ಅವರ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇನೆ. ಅವರ ಸಲಹೆ ಸಹಕಾರ ಪಡೆದು ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಮಾಜಿ ಸಚಿವ ಎಸ್. ರಾಮದಾಸ್ ಮಾತನಾಡಿ, ನೂರಾರು ಯೋಜನೆಗಳ ಮೂಲಕ ರಾಜ್ಯವನ್ನು ಬೆಳೆಸಿದ, ದೇಶಕ್ಕೆ ಹಲವು ಕೊಡುಗೆ ಕೊಟ್ಟ ರಾಜವಂಶದ ಕುಡಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮೋದಿಯವರು ದೇಶವನ್ನು ಆರ್ಥಿಕವಾಗಿ ಬಲಪಡಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಾಪ್‌ಸಿಂಹ ಅವರು ತಮ್ಮ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದು, ಪ್ರಸ್ತುತ ನಮ್ಮೊಂದಿಗೆ ಮುಂದುವರಿಯುತ್ತಿದ್ದಾರೆ ಎಂದು ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರವಿಕಾಳಪ್ಪ, ಕೇಂದ್ರ ಬಿಜೆಪಿ ಸರ್ಕಾರದ ಯೋಜನೆಗಳನ್ನು ಮನೆಮನೆಗಳಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಕೊಡಗಿನಲ್ಲಿ ಬಿಜೆಪಿ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದ್ದು, ಬಿಜೆಪಿ ಅಭ್ಯರ್ಥಿಯನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.

ಕಾರ್ಯಕ್ರಮಕ್ಕೂ ಮುನ್ನಾ ವಿಜಯೇಂದ್ರ ಅವರು, ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಗುಡ್ಡೆಮನೆ ಅಪ್ಪಯ್ಯಗೌಡ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ವಿಜಯೇಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್, ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾಕುಶಾಲಪ್ಪ, ಮಾಜಿ ಸದಸ್ಯರುಗಳಾದ ಎಂ.ಪಿ. ಸುನಿಲ್ ಸುಬ್ರಮಣಿ, ಎಸ್.ಜಿ. ಮೇದಪ್ಪ, ರಾಜ್ಯ ಕೃಷಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಬಿ.ಸಿ. ನವೀನ್‌ಕುಮಾರ್, ಶಿಸ್ತು ಸಮಿತಿಯ ರೀನಾ ಪ್ರಕಾಶ್, ಬಿಜೆಪಿ ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ಬಿಜೆಪಿ ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಶರಣ್, ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಮಂಜುಳಾ, ಪಕ್ಷದ ಪ್ರಮುಖರಾದ ವಸಂತ್‌ಕುಮಾರ್ ಮತ್ತಿತರರು ಇದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ನಿರೂಪಿಸಿ, ವೀಣಾ ಹೊಳ್ಳ ತಂಡ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಸ್ವಾಗತಿಸಿ, ನೆಲ್ಲಿರ ಚಲನ್ ವಂದಿಸಿದರು.