ಮಂಡ್ಯ: ಕಾವೇರಿ ನದಿಯಲ್ಲಿ ನಾಲ್ವರು ಜಲಸಮಾಧಿ

ಮಂಡ್ಯ, ಮಾ. ೨೬: ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಯುವಕರ ಪೈಕಿ ನಾಲ್ವರು ಜಲಸಮಾಧಿಯಾಗಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಮುಳುಗಿ ಮೃತಪಟ್ಟವರನ್ನು ಮೈಸೂರು ಮೂಲದ ೪೦ ವರ್ಷದ ನಾಗೇಶ್, ೧೭ ವರ್ಷದ ಭರತ್, ೩೨ ವರ್ಷದ ಗುರು ಮತ್ತು ೧೬ ವರ್ಷದ ಮಹದೇವ್ ಎಂದು ಗುರುತಿಸಲಾಗಿದೆ. ಮೈಸೂರಿನಿಂದ ಮಂಡ್ಯದ ಮಳವಳ್ಳಿ ತಾಲೂಕಿನ ಮುತ್ತತ್ತಿಗೆ ೪೦ ಜನರ ತಂಡ ಒಂದೇ ಬಸ್‌ನಲ್ಲಿ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ನಾಲ್ವರು ಕಾವೇರಿ ನದಿಯಲ್ಲಿ ಈಜಾಡಲು ಹೋಗಿದ್ದು, ಓರ್ವ ನೀರಿನಲ್ಲಿ ಮುಳುಗಿದ್ದಾನೆ. ಕೂಡಲೇ ಆತನನ್ನು ರಕ್ಷಿಸಲು ಮುಂದಾದ ಮೂವರು ನೀರಿನಲ್ಲಿ ಮುಳುಗಿ ದುರಂತ ಅಂತ್ಯ ಕಂಡಿದ್ದಾರೆ.

ರೂ. ೨೩ ಲಕ್ಷ ಹಣಕ್ಕಾಗಿ ಬಾಲಕನನ್ನು ಅಪಹರಿಸಿ ಕೊಲೆ!

ಮುಂಬಯಿ, ಮಾ. ೨೬: ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದ ವಿದ್ಯಾರ್ಥಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟçದ ಥಾಣೆಯಲ್ಲಿ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿ ಸಲ್ಮಾನ್ ಮೌಲ್ವಿ ಎಂದು ತಿಳಿದುಬಂದಿದೆ. ಈತ ಹೊಸ ಮನೆ ಕಟ್ಟಲು ಯೋಜಿಸಿದ್ದ. ಅದಕ್ಕಾಗಿ ಹಣ ಬೇಕಿತ್ತು. ಸಲ್ಮಾನ್ ಮೌಲ್ವಿ ಇದ್ದ ಪ್ರದೇಶದಲ್ಲೇ ವಾಸವಾಗಿದ್ದ ಟೈಲರ್ ಸಲ್ಮಾನ್‌ನಿಂದ ರೂ. ೨೩ ಲಕ್ಷ ಸುಲಿಗೆ ಮಾಡುವ ಉದ್ದೇಶದಿಂದ ಆತನ ಮಗನನ್ನು ಅಪಹರಿಸಿದ್ದ. ಮನೆ ಕಟ್ಟಲು ಹಣಕಾಸಿನ ಅಗತ್ಯತೆಯಿಂದ ಈ ಹೇಯ ಕೃತ್ಯ ನಡೆಸುವ ಉದ್ದೇಶ ಹೊಂದಿದ್ದ. ಸಂಜೆಯ ಪ್ರಾರ್ಥನೆಯ ನಂತರ ಬಾಲಕ ಮನೆಗೆ ಹಿಂತಿರುಗಿರಲಿಲ್ಲ. ಇದರಿಂದ ಅನುಮಾನಗೊಂಡ ಪೋಷಕರು ಹುಡುಕಾಟ ನಡೆಸಿದ್ದರು. ಅದೇ ವೇಳೆಗೆ ನಿಮ್ಮ ಮಗ ಇಬಾದ್ ಸುರಕ್ಷಿತವಾಗಿ ಮನೆಗೆ ವಾಪಸ್ ಆಗಬೇಕೆಂದರೆ ಹಣ ಕೊಡಬೇಕು ಎಂದು ಬೆದರಿಕೆ ಕರೆ ಬಂದಿತ್ತು. ಈ ವಿಚಾರವನ್ನು ಮುದ್ದಾಸಿರ್ ಪೊಲೀಸರಿಗೆ ತಿಳಿಸಿದರು. ಸೋಮವಾರ ಮಧ್ಯಾಹ್ನ ಪೊಲೀಸರು ಆರೋಪಿ ಸಲ್ಮಾನ್ ನಿವಾಸದ ಸ್ಥಳವನ್ನು ಪತ್ತೆಹಚ್ಚಿದರು. ಅಷ್ಟೊತ್ತಿಗಾಗಲೇ ಬಾಲಕನ ಹತ್ಯೆಯಾಗಿತ್ತು. ಇಬಾದ್‌ನ ದೇಹವನ್ನು ಗೋಣಿಚೀಲದಲ್ಲಿ ತುಂಬಿ, ಮನೆಯ ಹಿಂದೆ ಮುಚ್ಚಿಡಲಾಗಿತ್ತು. ಸಲ್ಮಾನ್ ಹಾಗೂ ಸಹೋದರ ಸಫುವಾನ್ ಮೌಲ್ವಿಯನ್ನು ಅಪಹರಣ, ಕೊಲೆಗೆ ಸಂಬAಧಿಸಿದAತೆ ಬಂಧಿಸಲಾಗಿದೆ.

ಕೇಜ್ರಿವಾಲ್ ಬಂಧನ ಖಂಡಿಸಿ ಎಎಪಿ ಪ್ರತಿಭಟನೆ: ಹಲವರು ವಶಕ್ಕೆ

ನವದೆಹಲಿ, ಮಾ. ೨೬: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಖಂಡಿಸಿ ಎಎಪಿ ಮುಖಂಡರು ಮತ್ತು ಕಾರ್ಯಕರ್ತರು ಮಂಗಳವಾರ ರಾಷ್ಟç ರಾಜಧಾನಿಯಲ್ಲಿ ಬೀದಿಗಿಳಿದಿದ್ದು, ಪಟೇಲ್ ಚೌಕ್‌ನ ಲೋಕ ಕಲ್ಯಾಣ್ ಮಾರ್ಗ್ದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈವೇಳೆ ದೆಹಲಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಆಮ್ ಆದ್ಮಿ ಪಕ್ಷದ (ಎಎಪಿ) ದೆಹಲಿ ಘಟಕದ ಸಂಚಾಲಕ ಗೋಪಾಲ್ ರೈ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನಗರದಾದ್ಯಂತ ಸೆಕ್ಷನ್ ೧೪೪ ಜಾರಿ ಮಾಡಿದೆ. ದೆಹಲಿಯನ್ನು "ಪೊಲೀಸ್ ರಾಜ್ಯವಾಗಿ" ಮಾರ್ಪಡಿಸಿದೆ ಎಂದು ಆರೋಪಿಸಿದರು. ಆಪ್ ಕಾರ್ಯಕಾರ್ತರು ಇಂಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗುತ್ತ ಕೇಂದ್ರದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಪ್ ಹಿರಿಯ ನಾಯಕ ಸೋಮನಾಥ್ ಭಾರ್ತಿ, ದೆಹಲಿ ಅಸೆಂಬ್ಲಿ ಉಪ ಸ್ಪೀಕರ್ ರಾಖಿ ಬಿರ್ಲಾ ಮತ್ತು ಪಂಜಾಬ್ ಸಚಿವ ಹರ್ಜೋತ್ ಸಿಂಗ್ ಬೇನ್ಸ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. "ದೆಹಲಿ ಪೊಲೀಸರು ಯಾವುದೇ ಕಾರಣವಿಲ್ಲದೆ ಡೆಪ್ಯೂಟಿ ಸ್ಪೀಕರ್ ರಾಖಿ ಬಿರ್ಲಾ ಮತ್ತು ಎಎಪಿಯ ಅನೇಕ ಕಾರ್ಯಕರ್ತರನ್ನು ಮತ್ತು ಅರವಿಂದ್ ಕೇಜ್ರಿವಾಲ್ ಬೆಂಬಲಿಗರನ್ನು ವಶಕ್ಕೆ ಪಡೆದಿದ್ದಾರೆ. ದೆಹಲಿ ಪೊಲೀಸರು ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ಎಎಪಿ ಬೆಂಬಲಿಗರನ್ನು ಬಂಧಿಸುತ್ತಿರುವುದು ಆಘಾತಕಾರಿ" ಎಂದು ಸೋಮನಾಥ್ ಭಾರ್ತಿ ಪೋಸ್ಟ್ ಮಾಡಿದ್ದಾರೆ. ಏತನ್ಮಧ್ಯೆ, ಮುಖ್ಯಮಂತ್ರಿ ಕೇಜ್ರಿವಾಲ್ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯ ದೆಹಲಿ ಘಟಕದ ಮುಖಂಡರು ಮತ್ತು ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಬಾಂಬ್ ದಾಳಿಯಲ್ಲಿ ೬ ಮಂದಿ ದುರ್ಮರಣ

ನವದೆಹಲಿ, ಮಾ. ೨೬: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಆತ್ಮಾಹುತಿ ದಾಳಿಯಲ್ಲಿ ಆರು ಚೀನೀ ಪ್ರಜೆಗಳು ಸಾವನ್ನಪ್ಪಿದ್ದಾರೆ. ದಾಳಿಕೋರರು ಚೀನಿ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಶಾಂಗ್ಲಾದಲ್ಲಿ ಆತ್ಮಾಹುತಿ ಬಾಂಬರ್ ನಡೆಸಿದ ಬಾಂಬ್ ಸ್ಫೋಟದಲ್ಲಿ ಆರು ಚೀನೀ ಪ್ರಜೆಗಳು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ದಾಳಿಕೋರರು ನೌಕಾ ವಾಯು ನೆಲೆಯ ಮೇಲೆ ದಾಳಿ ಮಾಡಿದ್ದು ಇದರಲ್ಲಿ ಒಬ್ಬ ಯೋಧ ಸಹ ಸಾವನ್ನಪ್ಪಿದ್ದಾರೆ. ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೆ ಈ ವಾಯುನೆಲೆ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದಲ್ಲಿ ಪ್ರತಿದಿನ ಭಯೋತ್ಪಾದಕ ದಾಳಿಗಳು ನಡೆಯುತ್ತಿವೆ.