"ಈ ಜಗವೇ ಒಂದು ಬಯಲು ರಂಗ ಮಂದಿರ, ಆ ದೇವರೇ ಸೂತ್ರಧಾರ, ಆತನು ಆಡಿಸಿದಂತೆ ಆಡುವ ಪಾತ್ರಧಾರಿಗಳು ನಾವೆಲ್ಲ" ಇದು ಬದುಕು ಹಾಗೂ ರಂಗಭೂಮಿಗೆ ಇರುವ ನೈಜ ಸಂಬAಧವನ್ನು ತಿಳಿಸುವ ಸಾಲುಗಳು. ದೈನಂದಿನ ಬದುಕಿನ ಖುಷಿ, ದುಃಖ, ಆಸರಿಕೆ ಬೇಸರಿಕೆಗಳನ್ನು ಅತಿ ಪರಿಣಾಮಕಾರಿಯಾಗಿ ಚಿತ್ರಿಸಬಲ್ಲ ಮಾಧ್ಯಮವೆಂದರೆ ಅದು ರಂಗಭೂಮಿ.

"ರAಗಭೂಮಿಯಷ್ಟು ಪ್ರಭಾವಶಾಲಿಯಾಗಿ ಜೀವನ ಸತ್ಯವನ್ನು ಯಾವ ಪುಸ್ತಕವೂ, ಯಾವ ಬೇರೊಂದು ಕಲೆಯೂ ಭಾಷಣವೂ, ಯಾವ ವಿದ್ಯಾ ವಿಧಾನವೂ ತಿಳಿಸಿಕೊಡಲಾರದು" ಇದು ಹೆಸರಾಂತ ರಂಗ ವಿಮರ್ಶಕ ಹೆನ್ರಿ ಆರ್ಥರ್ ಜೋನ್ಸ್ ಅವರ ಅಭಿಪ್ರಾಯ. ಸಾಮಾಜಿಕ ಸದ್ಭಾವನೆಗಳನ್ನು ಪ್ರಚೋದಿಸಿ ಜನಜೀವನವನ್ನು ಸುಸಂಸ್ಕೃತಗೊಳಿಸುವಲ್ಲಿ ರಂಗ ಭೂಮಿಗೆ ಇರುವ ಶಕ್ತಿ ಸತ್ವಗಳು ಮತ್ಯಾವ ಸಾಹಿತ್ಯ ಕಲೆಗಳಿಗೂ ಮೈಗೂಡಿ ಬರಲಿಲ್ಲ. ಒಂದು ಪುಸ್ತಕ ಮಾಡುವುದಕ್ಕಿಂತ ನೂರು ಪಾಲು ಹೆಚ್ಚಿನ ಸಾಧನೆಯನ್ನು ನಾಟಕ ಮಾಡಬಲ್ಲುದು. ವಿಚಾರವಂತನಿಗೆ ಬದುಕಿನ ರಹಸ್ಯವನ್ನು, ಸಾಮಾನ್ಯನಿಗೆ ಜೀವನ ತತ್ವವನ್ನು, ಕಲಾವಿದನಿಗೆ ಕಲ್ಪನಾ ಸೃಷ್ಟಿಯ ವೈಭವವನ್ನು, ತಾಮಸಿಗೆ ಭಾಷೆಯ ಬೆಡಗುಗಳನ್ನು, ಅರಸಿಕನಿಗೆ ಬಾಳಿನ ವಿನೋದವನ್ನು ಉಣಬಡಿಸುವುದು ರಂಗಭೂಮಿ.

೧೯೬೧ರಲ್ಲಿ ಇಂಟರ್ ನ್ಯಾಷನಲ್ ಥಿಯೇಟರ್ ಇನ್ಸಿ÷್ಟಟ್ಯೂಟ್ (ಐಟಿಐ) ಮಾರ್ಚ್ ೨೭ನೇ ದಿನವನ್ನು ವಿಶ್ವ ರಂಗಭೂಮಿ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ರಂಗಭೂಮಿ ಕಲೆಗಳ ಸಾರ, ಸೌಂದರ್ಯದ ಪ್ರಾಮುಖ್ಯತೆ ಹಾಗೂ ನಶಿಸುತ್ತಿರುವ ರಂಗ ಕಲೆಯನ್ನು ಜೀವಂತವಾಗಿಡುವ ಪ್ರಯತ್ನವೇ ಇದರ ಆಚರಣೆಯ ಮೂಲ ಉದ್ದೇಶವಾಗಿದೆ.

ರಂಗಭೂಮಿಯ ಮೂಲಬೇರು ಇರುವುದು ಗ್ರೀಕ್‌ನಲ್ಲಿ. ಗ್ರೀಕ್ ಸಾಹಿತ್ಯದ ಸಾಪೊಕ್ಲಿಸ್, ಈಡಿಪಸ್ ಮತ್ತು ಈಸ್ಕಿಲಸ್ ಈ ಮೂವರು ನಾಟಕ ರಚನೆಯಾಗಲು ಧಾರ್ಮಿಕ ಆಚರಣೆಗಳೇ ಕಾರಣ ಎಂದು ಪ್ರತಿಪಾದಿಸಿದರು. ತನ್ನ ಕಲ್ಪನೆ ಹಾಗೂ ಸಮಾಜ ಪ್ರಜ್ಞೆಯ ಮೂಲಕ ರಮ್ಯ ಐತಿಹಾಸಿಕ ನಾಟಕಗಳನ್ನು ರಚಿಸಿದ ಷೇಕ್ಸ್ಪಿಯರ್ ರಂಗಭೂಮಿಯ ಸಾರ್ವಕಾಲಿಕ ಮೇಲ್ಪಂಕ್ತಿಯ ನಾಟಕಕಾರ. ಕನ್ನಡ ರಂಗಭೂಮಿಯಲ್ಲಿ ಉಪಲಬ್ಧವಾದ ಮೊದಲ ನಾಟಕ ಸಿಂಗಾರಾರ್ಯನ ಮಿತ್ರಾವಿಂದ ಗೋವಿಂದ. ಮುಂದೆ ಆದ್ಯ ರಂಗಾಚಾರ್ಯ, ಟಿ.ಪಿ. ಕೈಲಾಸಂ ಮತ್ತಿತರ ಮೇರು ನಾಟಕಕಾರರಿಂದ ಕನ್ನಡ ರಂಗಭೂಮಿ ಸಶಕ್ತವಾಗಿ ಬೆಳೆಯಿತು.

ಸಮಾಜದ ಅಂಕುಡೊAಕುಗಳನ್ನು ತಿದ್ದುವ ಮೂಲಕ ನವ ಸಮಾಜ ನಿರ್ಮಾಣದಲ್ಲಿ ರಂಗಭೂಮಿಯ ಪಾತ್ರ ಅತ್ಯಂತ ಮಹತ್ತರವಾದದ್ದು. ಪುರಾತನ ಕಾಲದಲ್ಲಿ ಸಮಾಜದಲ್ಲಿ ಮನೆ ಮಾಡಿದ್ದ ಮೌಢ್ಯವನ್ನು ನಾಟಕಗಳ ಮೂಲಕ ಎತ್ತಿ ತೋರಿಸಲಾಗುತ್ತಿತ್ತು. ಕಾವ್ಯೇಷು ನಾಟಕಂ ರಮ್ಯಂ ಎನ್ನುವಂತೆ ಕಾವ್ಯಪ್ರಕಾರಗಳಲ್ಲಿ ನಾಟಕಕ್ಕೆ ಪ್ರಥಮ ಸ್ಥಾನ ನೀಡಲಾಗಿತ್ತು. ನಾಟಕವನ್ನು ಕಾವ್ಯವೆಂದೇ ಪರಿಗಣಿಸಲಾಗಿತ್ತು. ಮಾನವ ಸಂಬAಧಗಳನ್ನು ಬೆಸೆಯುವ ಶಕ್ತಿ ರಂಗಭೂಮಿಗಿದೆ. ಸಾತ್ವಿಕ ಗುಣಗಳನ್ನು ಉನ್ನತೀಕರಿಸಿ ಮಾನವತೆಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಕಾರ್ಯ ರಂಗಭೂಮಿಯದ್ದು. ಇಲ್ಲಿ ಸಹೃದಯಿ ಪ್ರೇಕ್ಷಕರ ಪ್ರಭಾವ ಬಹಳಷ್ಟಿರುತ್ತದೆ. ಆಧುನಿಕ ದೃಶ್ಯ ಮಾಧ್ಯಮಗಳ ಭರಾಟೆಯ ನಡುವೆಯೂ ತನ್ನದೇ ಆದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿರುವ ರಂಗಭೂಮಿ ಕಲಾಸಕ್ತರನ್ನು ತನ್ನತ್ತ ಸೆಳೆಯಲು ನೂತನ ಪ್ರಯೋಗಗಳೊಂದಿಗೆ ಮೂಡಿಬರುತ್ತಿದೆ. ಯಕ್ಷಗಾನ ಬಯಲಾಟ, ಸೂತ್ರದ ಗೊಂಬೆಯಾಟ ಹೀಗೆ ರಂಗಭೂಮಿಯ ಬೇರೆ ಬೇರೆ ರೂಪಗಳು ಈಗಲೂ ಜನಮನ್ನಣೆಗೆ ಪಾತ್ರವಾಗಿವೆ. ರಂಗಭೂಮಿಯಲ್ಲಿ ಜಾನಪದ ರಂಗಭೂಮಿ, ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ ಇವು ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಚಲನಚಿತ್ರರಂಗದಲ್ಲಿ ಹೆಸರು ಮಾಡಿದ ಅನೇಕ ನಟ ನಟಿಯರ ನಟನಾ ಕೌಶಲ್ಯಕ್ಕೆ ಭದ್ರ ಬುನಾದಿಯನ್ನು ಒದಗಿಸಿದ್ದು ರಂಗಭೂಮಿ ಎನ್ನುವುದು ಸತ್ಯ ಸಂಗತಿ.

ನಮ್ಮ ಕೊಡಗು ಜಿಲ್ಲೆಯ ರಂಗಭೂಮಿಗೂ ಸುಮಾರು ಒಂದು ಶತಮಾನದಷ್ಟು ಕಾಲದ ದೀರ್ಘ ಇತಿಹಾಸವಿದೆ. ಕೊಡವ ರಂಗಭೂಮಿಯ ಬೆಳವಣಿಗೆಯಲ್ಲಿ ಹರದಾಸ ಅಪ್ಪಚ್ಚ ಕವಿಯ ಕೊಡುಗೆ ಸ್ಮರಣೀಯವಾದುದು. ಇಂದು ಕೆಲವೊಂದು ಸಂಘ-ಸAಸ್ಥೆಗಳ ಆಯೋಜನೆಯಡಿಯಲ್ಲಿ ರಂಗಭೂಮಿಯ ನಾಟಕ ಪ್ರದರ್ಶನಗಳು ಏರ್ಪಡುತ್ತಿರುವುದು ಅಭಿನಂದನೀಯ ವಿಚಾರ. ಮಾಧವಿ, ಶಿವದೂತ ಗುಳಿಗ ನಾಟಕ ಪ್ರದರ್ಶನಗಳು ಜನರನ್ನು ರಂಗಭೂಮಿಯತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಪ್ರಸಕ್ತ ವಿದ್ಯಮಾನದಲ್ಲಿ ಶಿಕ್ಷಣದಲ್ಲಿ ರಂಗಭೂಮಿ ಕಲೆಯನ್ನು ಒಂದು ಭಾಗವಾಗಿಸಿಕೊಂಡಲ್ಲಿ ವಿದ್ಯಾರ್ಥಿಗಳಲ್ಲಿ ನಿರೀಕ್ಷಿತ ಗುಣಮಟ್ಟದ ಮಾನವೀಯ ಮೌಲ್ಯಗಳನ್ನು ಬೆಳೆಸಲು ಪ್ರಭಾವೀ ಮಾಧ್ಯಮವಾಗಬಲ್ಲದು.

ಕೇವಲ ಚಲನಚಿತ್ರ, ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ ಮೋಹಕ್ಕೆ ಸಿಲುಕಿರುವ ಯುವ ಪೀಳಿಗೆಗೆ ನೈಜಕಲೆಯ ದರ್ಶನವಾಗಬೇಕಾದರೆ ಅದು ರಂಗಭೂಮಿ ಬಗೆಗೆ ಆಸಕ್ತಿ ತಾಳುವಂತಾದಾಗ ಮಾತ್ರವೇ ಸಾಧ್ಯ. ರಂಗವೇದಿಕೆಯಲ್ಲಿ ಕಲಾವಿದನ ನೈಜ ಕಲಾ ಪ್ರೌಢಿಮೆಯ ಅಭಿವ್ಯಕ್ತಿಗೆ ಹೆಚ್ಚಿನ ಅವಕಾಶವಿರುತ್ತದೆ. ಪ್ರೇಕ್ಷಕರ ಗಮನವನ್ನು ದೀರ್ಘಾವಧಿಯವರೆಗೂ ಹಿಡಿದಿಡುವ ಸಾಮರ್ಥ್ಯ ಕಲಾವಿದನ ನಟನೆಯಿಂದ ಮಾತ್ರ ಸಾಧ್ಯವಾಗುವಂತದ್ದು. ಅದೊಂದು ಅಪೂರ್ವ ಅದ್ಭುತ ಅನುಭವ. ಇದರೊಂದಿಗೆ ಸಹವಾದ್ಯ ಕಲಾವಿದರ ಸಾಥ್ ನೋಡುಗರನ್ನು ಇನ್ಯಾವುದೋ ಲೋಕಕ್ಕೆ ಕೊಂಡೊಯ್ಯುತ್ತದೆ.

ನಮ್ಮ ಯುವ ಜನತೆಗೆ ನಮ್ಮ ಸಂಸ್ಕೃತಿಯ ಬಗ್ಗೆ ಅಭಿರುಚಿ ಮೂಡಿಸುವ ಪ್ರಯತ್ನವಾಗಬೇಕು. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ರಂಗ ಚಟುವಟಿಕೆಗಳ ಆಸಕ್ತಿ ಹುಟ್ಟಿಸುವ ತರಬೇತಿ ಶಿಬಿರಗಳು ಆಯೋಜನೆಗೊಳ್ಳಬೇಕು. ದೂರದರ್ಶನ, ಆಕಾಶವಾಣಿ ಮತ್ತಿತರ ಮಾಧ್ಯಮಗಳ ಮೂಲಕ ಅವುಗಳ ಪ್ರಸಾರ-ಪ್ರಚಾರ ನಡೆಯಬೇಕು. ನಾಟಕದ ಕುರಿತ ಆಧುನಿಕ ತಂತ್ರಗಳು, ಅಭಿನಯ, ನಿರ್ದೇಶನ ಮುಂತಾದ ವಿಚಾರಗಳಲ್ಲಿ ಯುವ ಜನರಿಗೆ ತರಬೇತಿಯನ್ನು ನೀಡಬೇಕು. ಜೊತೆಗೆ ಸಾಮಾನ್ಯ ಪ್ರೇಕ್ಷಕರೂ ಕಲಾಸಕ್ತಿಯನ್ನು ಬೆಳೆಸಿಕೊಂಡು ಪ್ರೋತ್ಸಾಹ ನೀಡುವ ಪರಿಸರ ನಿರ್ಮಾಣವಾಗಬೇಕು.

- ಪ್ರತಿಮಾ ಹರೀಶ್ ರೈ, ಉಪನ್ಯಾಸಕರು,

ಸೈಂಟ್ ಆನ್ಸ್ ಪದವಿ ಕಾಲೇಜು, ವೀರಾಜಪೇಟೆ.