ಗೋಣಿಕೊಪ್ಪಲು, ಮಾ. ೨೬: ಕಾಲಜ್ಞಾನಿ ಕೈವಾರ ಶ್ರೀ ಯೋಗಿನಾರೇಯಣ ಯತೀಂದ್ರರ ೨೯೮ ನೇ ಜಯಂತೋತ್ಸವವನ್ನು ಹೋಳಿ ಹುಣ್ಣಿಮೆಯಂದು ಕೊಡಗಿನ ವಿವಿಧೆಡೆ ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಿರುವದಾಗಿ ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ತಿಳಿಸಿದ್ದಾರೆ.

ಕೈವಾರ ತಾತಯ್ಯ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಘೋಷಣೆ ಮಾಡಿದ ನಂತರ ಕೊಡಗು ಜಿಲ್ಲೆಯಲ್ಲಿಯೂ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಆಚರಿಸುತ್ತಾ ಬಂದಿದೆ.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಕೊಡಗು ಬಲಿಜ ಸಮಾಜ ವತಿಯಿಂದ ಸರಳವಾಗಿ ಮಾ.೨೫ ರಂದು ಆಚರಿಸಲು ನಿರ್ಧರಿಸಲಾಗಿತ್ತು.

ದಕ್ಷಿಣ ಕೊಡಗಿನ ಪಾಲಿಬೆಟ್ಟ, ಸಿದ್ದಾಪುರ, ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹಾಗೂ ಸೋಮವಾರಪೇಟೆ, ಮಡಿಕೇರಿ ತಾಲೂಕಿನ ನಾಪೋಕ್ಲುವಿನಲ್ಲಿ ಕೈವಾರ ತಾತಯ್ಯ ಜಯಂತಿ ಆಚರಣೆ ನಡೆಯಿತು.

ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷೆ ಹಾಗೂ ಕೊಡಗು ಬಲಿಜ ಸಮಾಜ ಉಪಾಧ್ಯಕ್ಷೆ ಗೀತಾ ಹರೀಶ್, ಸೋಮವಾರಪೇಟೆಯ ಸಮಾಜದ ನಿರ್ದೇಶಕ ಟಿ.ಎ.ಪ್ರಕಾಶ್, ನಾಪೋಕ್ಲುವಿನ ನಿರ್ದೇಶಕಿ ಟಿ.ವಿ. ಭವಾನಿ, ಪಾಲಿಬೆಟ್ಟದ ಕೊಡಗು ಬಲಿಜ ಸಮಾಜ ಪ್ರಧಾನ ಕಾರ್ಯದರ್ಶಿ ಗೀತಾ ನಾಯ್ಡು ಹಾಗೂ ವೀರಾಜಪೇಟೆ ಯೋಗೀಶ್ ನೇತೃತ್ವದಲ್ಲಿ ಸಿದ್ದಾಪುರದಲ್ಲಿ ಜಯಂತಿ ಆಚರಿಸಲಾಗಿದೆ.

ಮಡಿಕೇರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿಯೂ ಕೈವಾರ ತಾತಯ್ಯ ಜಯಂತಿಯನ್ನು ಆಚರಿಸಲಾಗಿದೆ.

ಕೈವಾರ ತಾತಯ್ಯ ಜಯಂತಿ ಆಚರಣೆ ಮೂಲಕ ಜನ ಸಾಮಾನ್ಯರಲ್ಲಿ ಸಾತ್ವಿಕತೆ ಬೆಳೆಸಲು, ಅಧ್ಯಾತ್ಮ ಚಿಂತನೆಯತ್ತ ಒಲವು ಬೆಳೆಸಲು ಕಳೆದ ೫ ವರ್ಷದಿಂದ ಕೊಡಗಿನಲ್ಲಿ ಕಾರ್ಯಕ್ರಮ ಆಚರಿಸುತ್ತಾ ಬಂದಿರುವದಾಗಿ ಟಿ.ಎಲ್. ಶ್ರೀನಿವಾಸ್ ತಿಳಿಸಿದ್ದಾರೆ.