ಮಡಿಕೇರಿ, ಮಾ. ೨೬: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನಾಪೋಕ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ನಾಪೋಕ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ದಿ. ಶಾಂತಮಲ್ಲ ಸ್ವಾಮಿಗಳ ದತ್ತಿ ಮತ್ತು ದಿ. ಎಂ.ಜಿ. ಪದ್ಮನಾಭ ಕಾಮತ್ ದತ್ತಿ ಕಾರ್ಯಕ್ರಮ ತಾ. ೨೭ ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ನಾಪೋಕ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ಅಧ್ಯಕ್ಷತೆಯನ್ನು ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ವಹಿಸಲಿದ್ದು, ಉದ್ಘಾಟನೆಯನ್ನು ನಾಪೋಕ್ಲು ಸ.ಪ್ರ.ದ. ಕಾಲೇಜಿನ ಪ್ರಾಂಶುಪಾಲೆ ಡಾ. ಕಾವೇರಿ ಪ್ರಕಾಶ್ ನೆರವೇರಿಸಲಿದ್ದಾರೆ.

ದತ್ತಿ ದಾನಿಗಳಾದ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಉಪಸ್ಥಿತರಿರುತ್ತಾರೆ. ಕೊಡಗಿನ ವೀರಶೈವ ಅರಸರು ಕುರಿತಾದ ದತ್ತಿ ಉಪನ್ಯಾಸ ನಡೆಯಲಿದ್ದು, ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಿ.ವಿ. ಶಿವಪ್ಪ ಉಪನ್ಯಾಸ ನೀಡಲಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ ಸಾಂಸ್ಕೃತಿಕ ಕಾರ್ಯಗಳಿಗೆ ದುಡಿದ ಉದ್ಯಮಿಗಳ ಕುರಿತಾದ ದತ್ತಿ ಉಪನ್ಯಾಸದಲ್ಲಿ ಮಡಿಕೇರಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ, ‘ಶಕ್ತಿ’ ಉಪಸಂಪಾದಕ ಸಂತೋಷ್ ಕುಡೆಕಲ್ ಉಪನ್ಯಾಸ ನೀಡಲಿದ್ದಾರೆ. ಕಸಾಪ ಗೌರವ ಕಾರ್ಯದರ್ಶಿಗಳಾದ ಎಸ್.ಐ. ಮುನೀರ್ ಅಹ್ಮದ್, ರೇವತಿ ರಮೇಶ್, ಗೌರವ ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ನಾಪೋಕ್ಲು ಸ.ಪ್ರ.ದ. ಕಾಲೇಜಿನ ಐಕ್ಯುಸಿ ಸಂಚಾಲಕ ನಂದೀಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.