ಸೋಮವಾರಪೇಟೆ, ಮಾ. ೨೪: ನಾವು ಪ್ರತಿಷ್ಠಾನದ ವತಿಯಿಂದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶುಂಠಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ವೆಟರ್ ಮತ್ತು ಛತ್ರಿಯನ್ನು ವಿತರಿಸಲಾಯಿತು.

ಪ್ರತಿಷ್ಠಾನದ ಸಂಸ್ಥಾಪಕರಾದ ಸುಮನಾ ಮ್ಯಾಥ್ಯೂ ಮಾತನಾಡಿ, ಚಿಲ್ಡçನ್ಸ್ ಮೂವ್‌ಮೆಂಟ್ ಫಾರ್ ಸಿವಿಕ್ ಅವೇರ್‌ನೆಸ್, ಪ್ರಕೃತಿ ಫೌಂಡೇಶನ್, ನಾವು ಪ್ರತಿಷ್ಠಾನದ ಸಹಯೋಗದಲ್ಲಿ ಕಳೆದ ನವೆಂಬರ್‌ನಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಶಾಲೆಯ ಶ್ರೀನಿಧಿ ಎಂಬ ವಿದ್ಯಾರ್ಥಿ ಮಳೆಗಾಲದಲ್ಲಿ ದೂರದೂರಿನಿಂದ ಶಾಲೆಗೆ ಬರಲು ಕಷ್ಟವಾಗುತ್ತಿದೆ. ಚಳಿಯೂ ಹೆಚ್ಚಿರುತ್ತದೆ. ಆದ್ದರಿಂದ ಇವೆರಡನ್ನು ಕೊಡಿಸಿಕೊಡಿ ಎಂದು ಮನವಿ ಮಾಡಿದ್ದ, ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಎನ್ವಿರಾನ್ಮೆಂಟ್‌ಲ್ ಅಸೋಸಿಯೇಷನ್ ಆಫ್ ಬೆಂಗಳೂರು ಸಂಸ್ಥೆಯವರು ಉಚಿತವಾಗಿ ಸ್ವೆಟರ್ ಮತ್ತು ಛತ್ರಿ ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಒಂದು ಗ್ರಾಮಕ್ಕೆ ಸರ್ಕಾರಿ ಶಾಲೆ ಕಳಸವಿದ್ದಂತೆ, ಸರ್ಕಾರಿ ಶಾಲೆ ಮುಚ್ಚದಂತೆ ಸಮಾಜ ನೋಡಿ ಕೊಳ್ಳಬೇಕು. ಸಹಭಾಗಿತ್ವದಿಂದ ಸರ್ಕಾರಿ ಶಾಲೆಯ ಮಕ್ಕಳ ಬೇಡಿಕೆಗಳನ್ನು ಈಡೇರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಪ್ರತಿಷ್ಠಾನದ ಪ್ರಮುಖರಾದ ಗೌತಮ್ ಕಿರಗಂದೂರು ಹೇಳಿದರು.

ಕಾರ್ಯಕ್ರಮದಲ್ಲಿ ಗೌಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ರೋಹಿಣಿ, ಎಸ್.ಡಿ.ಎಂ.ಸಿ. ಸದಸ್ಯ ಕೆ.ವಿ. ದಿವಾಕರ್, ಶುಂಠಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಜೀವಿತ್, ಅಂಗನವಾಡಿ ಕಾರ್ಯಕರ್ತೆ ಸುಜಾತ, ಮುಖ್ಯ ಶಿಕ್ಷಕ ಎನ್.ಸಿ. ಮಂಜಪ್ಪ, ಶಿಕ್ಷಕ ಜಿ.ಎಂ. ದಯಾನಂದ, ಪ್ರತಿಷ್ಠಾನದ ಪೊನ್ನಪ್ಪ ಇದ್ದರು.