ಮಡಿಕೇರಿ, ಮಾ. ೨೪: ಸರಕಾರ ಬಡವರಿಗೆ ಭೂಮಿ ಭಾಗ್ಯ ನೀಡದೆ ಉಳ್ಳವರಿಗೆ ಜಮೀನು ಗುತ್ತಿಗೆ ನೀಡುವ ಆದೇಶ ಹೊರಡಿಸಿದ್ದು, ಇದನ್ನು ಹಿಂದಕ್ಕೆ ಪಡೆಯದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಭೂಗುತ್ತಿಗೆ ವಿರೋಧಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಹೆಚ್.ಬಿ. ರಮೇಶ್ ರಾಜ್ಯ ಸರ್ಕಾರದ ಪ್ಲಾಂಟೇಶನ್ ಬೆಳೆಗಳ ಜಮೀನು ಗುತ್ತಿಗೆ ಆದೇಶವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಕೊಡಗು ಜಿಲ್ಲೆಯಲ್ಲಿ ಸಹಸ್ರಾರು ಕಾರ್ಮಿಕರು ಸೂರಿಲ್ಲದೆ, ವಿವಿಧ ತೋಟಗಳ ಲೈನ್ ಮನೆಗಳಲ್ಲಿ ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಪ್ರಸ್ತಾಪಿಸಿದ್ದ ಪ್ಲಾಂಟೇಶನ್ ಬೆಳೆಗಳ ಭೂಮಿಯನ್ನು ಗುತ್ತಿಗೆ ನೀಡುವ ಪ್ರಸ್ತಾಪವನ್ನು ಈಗಿನ ಕಾಂಗ್ರೆಸ್ ಸರ್ಕಾರ ಕಾರ್ಯರೂಪಕ್ಕೆ ತರುವ ಮೂಲಕ ಶ್ರಮಿಕ ವರ್ಗಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಸರ್ಕಾರ ತಾ. ೧೨ ರಂದು ಹೊರಡಿಸಿರುವ ಆದೇಶದಲ್ಲಿ ೨೫ ಎಕರೆ ವರೆಗಿನ ಪ್ಲಾಂಟೇಶನ್ ಮಾಡಿದ ಸರ್ಕಾರಿ ಜಾಗವನ್ನು ಭೂ ಹಿಡುವಳಿದಾರರಿಗೆ ನೀಡಲು ಮುಂದಾಗಿದೆ. ಬಡ ವರ್ಗದ ಮಂದಿಗೆ ಇದೇ ಜಾಗವನ್ನು ಹೆಚ್ಚಿನ ಗುತ್ತಿಗೆ ಮೊತ್ತಕ್ಕೆ ನೀಡಲಿ ನಾವೇ ಅದನ್ನು ಪಡೆಯುತ್ತೇವೆ ಎಂದು ಹೇಳಿದರು.
ಕಳೆದ ಹಲವಾರು ವರ್ಷಗಳಿಂದ ಕೂಲಿ ಕಾರ್ಮಿಕರು, ಲೈನ್ ಮನೆಯಲ್ಲಿ ನೆಲೆಸಿರುವ ಕಾರ್ಮಿಕರು ನಿವೇಶನಕ್ಕಾಗಿ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದು, ಈ ಎಲ್ಲಾ ಸಂದರ್ಭಗಳಲ್ಲಿ ಅಗತ್ಯ ಸರ್ಕಾರಿ ಜಾಗವಿಲ್ಲವೆನ್ನುವ ಕಾರಣಗಳನ್ನು ನೀಡುತ್ತಾ ಬಂದಿರುವ ಸರ್ಕಾರ, ಇದೀಗ ಒತ್ತುವರಿ ಮಾಡಿಕೊಂಡು ಪ್ಲಾಂಟೇಶನ್ ಮಾಡಿದ ಜಾಗವನ್ನು ಉಳ್ಳವರಿಗೆ ಗುತ್ತಿಗೆ ನೀಡಲು ಮುಂದಾಗಿದೆ ಎಂದರು.
ಮತ್ತೋರ್ವ ಸಂಚಾಲಕ ವೈ.ಕೆ. ಗಣೇಶ್ ಮಾತನಾಡಿ, ಉಳ್ಳವರಿಗೆ ಮತ್ತೆ ಸರ್ಕಾರಿ ಪ್ಲಾಂಟೇಶನ್ ಜಾಗವನ್ನು ಗುತ್ತಿಗೆ ನೀಡುತ್ತಿರುವ ಸರ್ಕಾರಕ್ಕೆ ಆದಿವಾಸಿಗಳು ಹಾಗೂ ಬಡ ಕೂಲಿ ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲ ಎಂದು ದೂರಿದರು.
ಸಿಪಿಐ ಜಂಟಿ ಕಾರ್ಯದರ್ಶಿ ರಮೇಶ್ ಮಾಯಮುಡಿ ಮಾತನಾಡಿ, ಜಿಲ್ಲೆಯಲ್ಲಿ ೬೫ ಸಾವಿರಕ್ಕೂ ಹೆಚ್ಚಿನ ಬಡ ಕುಟುಂಬಗಳಿದ್ದು, ಇವರಲ್ಲಿ ಬಹುತೇಕ ಮಂದಿ ಆಯಾ ಗ್ರಾಮ ಪಂಚಾಯಿತಿಗಳಿಗೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದ್ದರಿಂದ ಸರ್ಕಾರ ತನ್ನ ಆದೇಶವನ್ನು ರದ್ದುಗೊಳಿಸಿ, ಒತ್ತುವರಿ ಸರ್ಕಾರಿ ಪ್ಲಾಂಟೇಶನ್ ಜಾಗವನ್ನು ನಿವೇಶನ ರಹಿತ ಕಾರ್ಮಿಕರಿಗೆ ನೀಡಬೇಕೆಂದು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದದ ಜಿಲ್ಲಾ ಸಂಚಾಲಕ ಹೆಚ್.ಆರ್.ಶಿವಣ್ಣ ಮಾತನಾಡಿ, ಸರ್ಕಾರ ತನ್ನ ಆದೇಶ ಹಿಂದಕ್ಕೆ ಪಡೆಯದಿದ್ದಲ್ಲಿ, ಕೊಡಗನ್ನು ಒಳಗೊಂಡAತೆ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ವಿಭಾಗದ ಕಾರ್ಮಿಕರನ್ನು ಸೇರಿಸಿ ಹೋರಾಟ ನಡೆಸಲಾಗುವುದು ಎಂದರು.
ದಸAಸ ವಿಭಾಗೀಯ ಸಂಚಾಲಕ ಹೆಚ್.ಎಸ್.ಕೃಷ್ಣಪ್ಪ ಮಾತನಾಡಿ, ಸರ್ಕಾರ ಉಳ್ಳವರ ಪರವಾಗಿರುವ ಆದೇಶ ಹಿಂಪಡೆಯದಿದ್ದಲ್ಲಿ ವಿಧಾನ ಸೌಧ ಚಲೋ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ದಸಂಸ ಸಂಚಾಲಕ ಹೆಚ್.ಆರ್. ಪರಶುರಾಮ್ ಮಾತನಾಡಿ, ಲೋಕಸಭಾ ಚುನಾವಣೆಗೂ ಮೊದಲು ಸರಕಾರ ತನ್ನ ಆದೇಶವನ್ನು ಹಿಂದಕ್ಕೆ ಪಡೆದು ನಿವೇಶನ ರಹಿತರಿಗೆ ಭೂಮಿ ನೀಡಬೇಕು. ಇಲ್ಲವಾದರೆ ಮತದಾನದ ವಿಚಾರದಲ್ಲಿ ನಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.