ಕಣಿವೆ, ಮಾ. ೨೩: ಜಾನುವಾರುಗಳ ಮೇವಿಗೆಂದು ಸಂಗ್ರಹಿಸಿ ಇಟ್ಟಿದ್ದ ಭತ್ತದ ಹುಲ್ಲಿನ ಮೆದೆಗೆ ಬೆಂಕಿ ತಗುಲಿದೆ.
ಹುಲುಸೆ ಗ್ರಾಮದ ಕೃಷಿಕ ನಾಗಣ್ಣ ಎಂಬವರಿಗೆ ಸೇರಿದ ಹುಲ್ಲಿನ ಮೆದೆ ಇದಾಗಿದ್ದು, ಸುಮಾರು ೫೦ ಸಾವಿರ ಮೌಲ್ಯದ ಹುಲ್ಲು ಬೆಂಕಿಗೆ ಆಹುತಿಯಾಗಿದ್ದು ಅಪಾರ ಪ್ರಮಾಣದ ನಷ್ಟವಾಗಿದೆ.
ಹುಲ್ಲಿನ ಮೆದೆಗೆ ಆವರಿಸಿದ ಬೆಂಕಿ ಸನಿಹದ ಶರತ್ ಎಂಬವರಿಗೆ ಸೇರಿದ ಶುಂಠಿಯ ಬಿತ್ತನೆಯ ಹೊಲಕ್ಕೂ ವ್ಯಾಪಿಸಿದ್ದು ಭತ್ತದ ಹುಲ್ಲು, ಜೋಳದ ಕಡ್ಡಿಯನ್ನು ಮುಚ್ಚಿದ್ದ ಪಟಗಳು ಬೆಂಕಿಗೆ ಆಹುತಿಯಾಗುತ್ತಿದ್ದಂತೆಯೇ ಸುತ್ತಲಿನ ಕೃಷಿಕರು ಬಂದು ಜಮೀನಿಗೆ ಅಳವಡಿಸಿದ್ದ ನೀರಿನ ಪೈಪ್ಗಳ ಸಹಾಯದಿಂದ ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದರಾದರೂ ಅಷ್ಟರಲ್ಲಿ ಹುಲ್ಲಿನ ಮೆದೆ ಸಂಪೂರ್ಣ ಭಸ್ಮವಾಗಿತ್ತು. ಪ್ರಕೃತಿ ವಿಕೋಪದಡಿ ಪರಿಹಾರ ನೀಡಬೇಕೆಂದು ನೊಂದ ಕೃಷಿಕ ನಾಗಣ್ಣ ಕಂದಾಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.