ಮಡಿಕೇರಿ, ಮಾ. ೨೩: ಕಳೆದ ೧೦ ತಿಂಗಳ ಅವಧಿಯಲ್ಲಿ ರಾಜ್ಯ ಸರಕಾರ ಹಾಗೂ ವಿವಿಧ ಇಲಾಖೆಗಳ ಮೂಲಕ ವೀರಾಜಪೇಟೆ ಕ್ಷೇತ್ರಕ್ಕೆ ರೂ. ೨೫೧.೯೭ ಕೋಟಿ ಮಂಜೂರಾಗಿದೆ ಎಂದು ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಮಾಹಿತಿ ನೀಡಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಶ್ವೇತಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕ್ಷಣದಿಂದ ಜನಪರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ರಾಜ್ಯ ಸರಕಾರ ಸೇರಿದಂತೆ ವಿವಿಧ ಇಲಾಖೆಗಳ ಮೂಲಗಳಿಂದ ಕ್ಷೇತ್ರದ ಹಲವೆಡೆ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದೇನೆ. ೫೮ ಗ್ರಾ.ಪಂ. ಹಾಗೂ ೧ ಪುರಸಭೆ ವ್ಯಾಪ್ತಿಯಲ್ಲಿ ಹಲವಷ್ಟು ಕೆಲಸಗಳಿಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಈ ಪೈಕಿ ಹಲವು ಕಾಮಗಾರಿಗಳು ಪೂರ್ಣ ಗೊಂಡು ಉದ್ಘಾಟನೆ ಯಾಗಿವೆೆ. ಕೆಲವು ಪ್ರಗತಿಯ ಹಂತದಲ್ಲಿದ್ದು, ಮತ್ತಷ್ಟು ಕೆಲಸಗಳನ್ನು ಆರಂಭಿಸ ಬೇಕಾಗಿದೆ. ೧೦ ತಿಂಗಳಿನಲ್ಲಿ ಜಿಲ್ಲೆಯಲ್ಲಿ ೨,೫೦೦ ಕಿ.ಮೀ.ಗೂ ಹೆಚ್ಚು ಸಂಚಾರ ಮಾಡಿ ಜನರ ಬೇಕು-ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯೋನ್ಮು ಖಗೊಂಡಿದ್ದೇನೆ ಎಂದರು.
ಕಾವೇರಿ ನೀರಾವರಿ ನಿಗಮದ ಮೂಲಕ ಭಾಗಮಂಡಲ ಕ್ಷೇತ್ರದಲ್ಲಿ ರೂ. ೨ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೆಲಸಕ್ಕೆ ಮುಂದಾಗಿದ್ದೇನೆ. ಮೇಲ್ಸೇತುವೆ ಕೆಲಸವೂ ಬಹುತೇಕ ಮುಗಿದಿದ್ದು, ಚುನಾವಣೆ ನಂತರ ಉಪಮುಖ್ಯ ಮಂತ್ರಿಯನ್ನು ಕರೆಸಿಕೊಂಡು ಪರಿಶೀಲನೆ ಕಾರ್ಯ ನಡೆಸಲಾಗುವುದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ರೂ. ೨೫ ಕೋಟಿ ಬಿಡುಗಡೆಯಾಗಿದ್ದು, ಈ ಪೈಕಿ ರೂ. ೧೨ ಕೋಟಿ ಹಣವನ್ನು ಗ್ರಾಮೀಣ ರಸ್ತೆಗಾಗಿ ಬಳಸಿಕೊಳ್ಳಲಾಗಿದೆ. ಮಳೆಹಾನಿ ಕೆಲಸಕ್ಕೆ ರೂ. ೫ ಕೋಟಿ, ಹೋಬಳಿ ಮಟ್ಟದ ಮೈದಾನಗಳ ಪುನಶ್ಚೇತನಕ್ಕೆ ರೂ. ೨ ಕೋಟಿ ಮೀಸಲಿಡಲಾಗಿದೆ. ಇದರೊಂದಿಗೆ ದೇವಾಲಯಗಳ ಅಭಿವೃದ್ಧಿಗೆ ರೂ. ೪ ಕೋಟಿ, ರೂ. ೩.೮೦ ಕೋಟಿ ಮಸೀದಿ, ರೂ. ೨ ಕೋಟಿ ಚರ್ಚ್ ಅಭಿವೃದ್ಧಿ ಕಾರ್ಯಕ್ಕೆ ನೀಡಲಾಗಿದೆ. ವೀರಾಜಪೇಟೆಗೆ ಶಾಶ್ವತವಾಗಿ ಕುಡಿಯುವ ನೀರು ಒದಗಿಸಬೇಕೆಂಬ ಉದ್ದೇಶದಿಂದ ರೂ. ೫೮ ಕೋಟಿ ವೆಚ್ಚದಲ್ಲಿ ಕಾರ್ಯಕ್ರಮ ಹಮ್ಮಿ ಕೊಂಡಿದ್ದೇವೆ. ವೀರಾಜಪೇಟೆಯಲ್ಲಿ ಉದ್ಯಾನವನ, ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ತಾವರೆಕೆರೆ ಪುನಶ್ಚೇತನ, ಫುಟ್ಪಾತ್ ನಿರ್ಮಾಣ, ನಾಗರಕಟ್ಟೆ ನಿರ್ಮಾಣ ಹೀಗೆ ಅನೇಕ ಕೆಲಸಗಳನ್ನು ನಡೆಸಲಾ ಗಿದೆ. ಇನ್ನೂ ರೂ. ೯ ಕೋಟಿಯಷ್ಟು ವೆಚ್ಚದ ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಿ, ಕೆಲವು ಟೆಂಡರ್ ಕೂಡ ಆಗಿವೆ ಎಂದು ವಿವರಿಸಿದರು.
ನೀತಿ ಸಂಹಿತೆ ಜಾರಿಗೂ ಮುನ್ನವೇ ಅನುದಾನ ಬಿಡುಗಡೆಗೊಳಿ ಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ. ಇದರಿಂದ ವೇಗವಾಗಿ ಕೆಲಸಗಳು ನಡೆದು ಹಲವು ಕಾಮಗಾರಿಗಳು ಉದ್ಘಾಟನೆಯಾಗಿವೆ. ಮಳೆಗಾಲಕ್ಕೆ ಮುನ್ನ ಉಳಿದ ಕೆಲಸಗಳನ್ನು ಮುಗಿಸಲಾಗುವುದು. ಕಳಪೆ ಕಾಮಗಾರಿ ನಡೆಸಿದ್ದಲ್ಲಿ ತಕ್ಷಣ ಕ್ರಮವನ್ನು ಕೈಗೊಳ್ಳುವ ಕೆಲಸ ಮಾಡಲಾಗುತ್ತಿದೆ.
೯೪ಸಿ ಅಡಿ ಹಕ್ಕುಪತ್ರ ನೀಡಲಾ ಗಿದೆ. ಅಕ್ರಮ-ಸಕ್ರಮ ಅಡಿ ಜಿಲ್ಲೆಯಲ್ಲಿ ೬ ಸಾವಿರ ಅರ್ಜಿಗಳು ಬಾಕಿ ಇದ್ದವು. ಇವೆಲ್ಲವನ್ನು ವಿಲೇವಾರಿ ಮಾಡುವ ಕೆಲಸವಾಗಿದೆ. ವನ್ಯಜೀವಿಯಿಂದ ಸಂಭವಿಸಿದ ಬೆಳೆನಾಶ ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. ಜೀವಹಾನಿಗೂ ರೂ. ೧೫ ಲಕ್ಷ ಪರಿ ಹಾರ ನೀಡಿದ್ದೇವೆ. ದಾಳಿಗೆ ತುತ್ತಾದವರಿಗೆ ಉಚಿತ ಚಿಕಿತ್ಸೆಯೊಂ ದಿಗೆ ಪರಿಹಾರವನ್ನೂ ಒದಗಿಸಲಾಗಿದೆ ಎಂದು ತಿಳಿಸಿದರು.
ನಿವೇಶನ ವ್ಯವಸ್ಥೆ - ೬ ವಿದ್ಯುತ್ ಉಪಕೇಂದ್ರ
ವೀರಾಜಪೇಟೆಯ ಬಾಳು ಗೋಡುವಿನಲ್ಲಿ ವಸತಿ ರಹಿತರಿಗೆ ೪೮ ನಿವೇಶನಗಳನ್ನು ತಯಾರು ಮಾಡಿ ಹಂಚಿಕೆ ಕಾರ್ಯ ನಡೆದಿದೆ. ತೆರಾಲುವಿನಲ್ಲಿ ನಿವೇಶನ ನೀಡಲು ಕ್ರಮವಹಿಸಲಾಗಿದೆ. ಕ್ಷೇತ್ರದಲ್ಲಿ ನಿವೇಶನ ರಹಿತರಿಗೆ ಜಾಗ ಒದಗಿಸುವ ಕೆಲಸ ನಡೆಯುತ್ತಿದೆ. ಅರಣ್ಯ ಹಕ್ಕು ಕಾಯ್ದೆಯಡಿ ೫೦೦ ಹಾಡಿ ನಿವಾಸಿಗಳಿಗೆ ಸಮುದಾಯ ಹಕ್ಕು ಪತ್ರ ನೀಡಲಾಗಿದೆ. ಸಾಮಾಜಿಕ ಭದ್ರತೆಗೆ ಆದ್ಯತೆ ನೀಡಲಾಗುತ್ತಿದ್ದು, ಅದನ್ನು ಕಾರ್ಯರೂಪಕ್ಕೆ ತರುವ ಕೆಲಸ ನಮ್ಮಿಂದಾಗಿದೆ ಎಂದು ಪೊನ್ನಣ್ಣ ಹೇಳಿದರು. ಮೂರ್ನಾಡು, ಬಾಳೆಲೆ, ಹುದಿಕೇರಿ, ಸಿದ್ದಾಪುರ, ಕಾಟಕೇರಿ, ಭಾಗಮಂಡಲದಲ್ಲಿ ೬೬ ಕೆ.ವಿ. ವಿದ್ಯುತ್ ಉಪಕೇಂದ್ರ ಸ್ಥಾಪನೆ ಸಾಕಾರಗೊಳಿಸಿದ್ದೇವೆ. ಇದರಿಂದ ಬಹುತೇಕ ಕಡೆ ವಿದ್ಯುತ್ ಸಮಸ್ಯೆ ಬಗೆಹರಿ ಯಲಿದೆ. ೧೦ ತಿಂಗಳಿನಲ್ಲಿ ಮಾಡಿದ ಕೆಲಸದ ಬಗ್ಗೆ ಸಾರ್ಥಕತೆ ಇದೆ. ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಇನ್ನೂ ಸಾಕಷ್ಟು ಕೆಲಸ ಮಾಡಬೇಕಾಗಿದೆ ಎಂದರು.
ಬಿಜೆಪಿ ವಿರುದ್ಧ ಟೀಕೆ
ಬಿಜೆಪಿ ಕಾರ್ಯಕರ್ತರು ತಾನು ಕಚೇರಿಯಲ್ಲಿ ಇಲ್ಲದ ಸಂದರ್ಭ ಬಂದು ಪ್ರಶ್ನೆ ಮಾಡಿದ್ದಾರೆ. ತಾನಿದ್ದ ಸಂದರ್ಭ ಬಂದರೆ ಎಲ್ಲಾ ಪ್ರಶ್ನೆಗೂ ಉತ್ತರವನ್ನು ನೀಡುವೆ. ತನ್ನನ್ನು ಪ್ರಶ್ನಿಸುವ ಅಧಿಕಾರ ಎಲ್ಲರಿಗೂ ಇದೆ ಎಂದು ಹೇಳಿದ ಪೊನ್ನಣ್ಣ ಬಿಜೆಪಿ ವಿರುದ್ಧ ಕಿಡಿಕಾರಿದರು.
ಗೋಷ್ಠಿಯಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಪಂಚಾಯತ್ ರಾಜ್ ಸಂಘಟನೆಗಳ ಜಿಲ್ಲಾಧ್ಯಕ್ಷ ತೆನ್ನೀರ ಮೈನಾ, ಸಾಮಾಜಿಕ ಜಾಲತಾಣ ಘಟಕದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಕೆ.ಡಿ.ಪಿ. ಸದಸ್ಯ ಬಾಚಮಂಡ ಲವ ಚಿಣ್ಣಪ್ಪ ಹಾಜರಿದ್ದರು.