ಸಿದ್ದಾಪುರ, ಮಾ. ೨೨: ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ನೆಲ್ಲಿಹುದಿ ಕೇರಿ ಗ್ರಾಮದಲ್ಲಿ ನಡೆದಿದೆ. ನೆಲ್ಲಿಹುದಿ ಕೇರಿ ಗ್ರಾಮದ ಅತ್ತಿಮಂಗಲದ ಮೇರಿ ಲ್ಯಾಂಡ್ ತೋಟದಲ್ಲಿ ಇಂದು ಮಧ್ಯಾಹ್ನ ಮರದ ಮೇಲೆ ಕರಿಮೆಣಸು ಕುಯ್ಲು ಮಾಡುತ್ತಿದ್ದ ಅಣ್ಣಾಮಲೈ (೫೦) ಎಂಬಾತನೇ ಕಾಡಾನೆ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡ ವ್ಯಕ್ತಿ. ಮೂಲತಃ ತಮಿಳುನಾಡಿನ ಸೇಲಂ ನಿವಾಸಿ ಅಣ್ಣಾಮಲೈ ಇತರ ಕಾರ್ಮಿಕರೊಂದಿಗೆ ನೆಲ್ಲಿಹುದಿಕೇರಿ ಅತ್ತಿಮಂಗಲದ ಮೇರಿಲ್ಯಾಂಡ್ ಕಾಫಿ ತೋಟದಲ್ಲಿ ಏಣಿ ಮೂಲಕ ಮರವನ್ನೇರಿ ಕರಿಮೆಣಸು ಬಳ್ಳಿಯಿಂದ ಕರಿಮೆಣಸು ಕುಯ್ಲು ಮಾಡುತ್ತಿದ್ದ ಎನ್ನಲಾಗಿದೆ.
ಈ ವೇಳೆ ಕಾಫಿ ತೋಟದೊಳಗೆ ಹಠಾತ್ತನೆ ಬಂದ ಕಾಡಾನೆಯೊಂದು ಏಣಿಯನ್ನು ಎಳೆದಾಡಿದೆ. ಕೆಲಕಾಲ ಮರದಲ್ಲೆ ಗಟ್ಟಿಯಾಗಿ ನಿಂತಿದ್ದ ಅಣ್ಣಾಮಲೈಯನ್ನು ಏಣಿಯೊಂದಿಗೆ ಸೊಂಡಲಿನಿAದ ನೆಲಕ್ಕೆ ಬೀಳಿಸಿದೆ. ನಂತರ ತೊಡೆಯ ಭಾಗಕ್ಕೆ ದಂತದಿAದ ತಿವಿದಿದೆ. ಈ ಸಂದರ್ಭ ಗಾಯಾಳು ಅಣ್ಣಾಮಲೈ ಕಿರುಚಿಕೊಂಡಾಗ ಸಮೀಪದಲ್ಲಿದ್ದ ಕಾರ್ಮಿಕರು ಕೂಡ ಬೊಬ್ಬೆ ಹಾಕಿದ್ದರಿಂದ ಕಾಡಾನೆ ಅಲ್ಲಿಂದ ತೆರಳಿದೆ ಎಂದು ತೋಟದ ಮಾಲೀಕರು ತಿಳಿಸಿದ್ದಾರೆ. ಗಾಯಾಳು ಅಣ್ಣಾಮಲೈಗೆ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಕಾಡಾನೆ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡಿರುವ ಗಾಯಾಳುವಿನ ಯೋಗಕ್ಷೇಮವನ್ನು ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ವಿಚಾರಿಸಿದರು. ಕಾಡಾನೆ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಮೇರಿ ಲ್ಯಾಂಡ್ ತೋಟದ ಮಾಲೀಕ ಲಿಸ್ಲಿ ಫಿಂಟೋ ಕಾಫಿ ತೋಟದೊಳಗೆ ಕಳೆದ ಕೆಲವು ತಿಂಗಳುಗಳಿAದ ಕಾಡಾನೆಗಳು ಬೀಡು ಬಿಟ್ಟು ದಾಂಧಲೆ ನಡೆಸುತ್ತಿವೆ. ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿವೆ. ಅಲ್ಲದೆ ಮನೆಯ ಅಂಗಳದಲ್ಲಿ ನಮ್ಮ ಎರಡು ಕಾರುಗಳ ಮೇಲೂ ದಾಳಿ ನಡೆಸಿ ಈ ಹಿಂದೆ ಹಾನಿಗೊಳಿಸಿದೆ. ಅರಣ್ಯ ಇಲಾಖೆ ಕಾಡಾನೆ ದಾಳಿ ತಡೆಗೆ ಶಾಶ್ವತ ಯೋಜನೆ ರೂಪಿಸದೆ ನಿರ್ಲಕ್ಷö್ಯ ವಹಿಸುತ್ತಿದೆ ಎಂದು ಆರೋಪಿಸಿದರು. ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. - ವಾಸು