ಮಡಿಕೇರಿ, ಮಾ. ೧೯: ಕೊಡಗು ಜಿಲ್ಲೆಯಲ್ಲಿ ದಿನೇ ದಿನೇ ಬಿಸಿಲಿನ ತಾಪ ಹೆಚ್ಚುತ್ತಿದ್ದು, ಜನತೆ ಮಳೆಗಾಗಿ ಕಾಯುವಂತಾಗಿದೆ. ಕಳೆದ ಒಂದೆರಡು ದಿನಗಳಿಂದ ಒಂದಷ್ಟು ಮೋಡ ಆವರಿಸುತ್ತಿರುವುದು ಜನತೆಗೆ ಆಶಾಭಾವನೆ ಮೂಡುತ್ತಿದೆ. ನಿನ್ನೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಒಂದಷ್ಟು ಮಳೆಯಾಗಿರುವುದೂ ಸಂತಸ ಮೂಡಿಸಿದೆ. ಆದರೆ, ಕೆಲವು ಪ್ರದೇಶಗಳಲ್ಲಿ ಮಾತ್ರ ಮಳೆಯಾಗಿದ್ದು, ಇನ್ನಿತರ ಕಡೆಗಳ ಜನರು ಆಗಸದತ್ತ ದಿಟ್ಟಿಸುವಂತಾಗಿದೆ. ಈಗಾಗಲೇ ಬಿಸಿಲ ಧಗೆಯಿಂದ ನೀರಿನ ಮೂಲಗಳು ಬರಿದಾಗುತ್ತಿದ್ದು, ನೀರಿಗಾಗಿ ತೀರಾ ಸಮಸ್ಯೆ ಎದುರಾಗುತ್ತಿರುವುದು ಒಂದೆಡೆಯಾಗಿದೆ. ಕಾಫಿ ತೋಟ ಸೇರಿದಂತೆ ಕರಿಮೆಣಸು ಬಳ್ಳಿಗಳಿಗೂ ಪ್ರಸ್ತುತ ನೀರು ಅತ್ಯಗತ್ಯವಾಗಿದ್ದು, ಎಲ್ಲೆಡೆ ನೀರಿನ ಸಮಸ್ಯೆ ಉದ್ಭವಿಸುತ್ತಿದೆ. ಈ ನಡುವೆ ಜಿಲ್ಲಾಡಳಿತವೂ ನದಿ ಹಾಗೂ ನದಿ ಮೂಲಗಳಿಂದ ಅನ್ಯ ಉದ್ದೇಶಕ್ಕೆ ನೀರು ಬಳಸಲು ನಿಷೇಧ ವಿಧಿಸಿರುವುದೂ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಜಿಲ್ಲೆಯಲ್ಲಿ ಒಂದಷ್ಟು ಗೊಂದಲಕ್ಕೂ ಕಾರಣವಾಗಿದೆ. ಈ ಬಗ್ಗೆ ಆಕ್ಷೇಪ- ಪ್ರತಿಭಟನೆಗಳು ಕೂಡ ನಡೆದಿವೆ. ಇದು ಏನೇ ಇದ್ದರೂ ನೀರೇ ಇಲ್ಲದಿದ್ದಲ್ಲಿ ಸಮಸ್ಯೆಗಂತೂ ಪರಿಹಾರವಿಲ್ಲ... ಈ ನಿಟ್ಟಿನಲ್ಲಿ ನೈಸರ್ಗಿಕವಾಗಿ ಬೇಸಿಗೆಯ ಸಂದರ್ಭದಲ್ಲಿ ಆಗುವ ಅಡ್ಡ ಮಳೆ ಅನಿವಾರ್ಯವಾಗಿದೆ. ಇದೀಗ ಕೊಡಗು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಒಂದಷ್ಟು ಮಳೆಯಾಗಲಿದೆ ಎಂಬುದಾಗಿ ಹವಾಮಾನ ಇಲಾಖೆಯ ಮಾಹಿತಿಗಳು ತಿಳಿಸಿದ್ದು, ಜನರು ಇದರ ಆಶಾಭಾವನೆಯಲ್ಲಿದ್ದಾರೆ.