ಗುಡ್ಡೆಹೊಸೂರು, ಮಾ. ೨೦: ಇಲ್ಲಿಗೆ ಸಮೀಪದ ರಸಲ್ಪುರ ಬಾಳುಗೋಡುವಿನಲ್ಲಿ ಕಾವೇರಿ ನದಿಯಲ್ಲಿ ಮುಳುಗಿ ತೊಂಡೂರು ಗ್ರಾಮದ ನಿವಾಸಿ ಸುರೇಶ್ ಎಂಬುವವರ ಪುತ್ರ ಪ್ರದೀಪ್ (೨೨) ಎಂಬಾತ ಸಾವನ್ನಪ್ಪಿದ್ದಾನೆ.
ಮೃತ ಯುವಕ ಸೇರಿದಂತೆ ಹೊಸಕೋಟೆ ಸಮೀಪದ ತೊಂಡೂರು ಗ್ರಾಮದ ನಾಲ್ವರು ಯುವಕರು ಕಳೆದ ಮೂರು ದಿನಗಳಿಂದ ಈ ಭಾಗದ ಕಾವೇರಿ ನದಿಯ ಕಡೆ ಸಂಚರಿಸುತ್ತಿದ್ದರು. ಇಂದು ಒಟ್ಟು ೪ ಮಂದಿ ತೊಂಡೂರಿನಿAದ ಇಲ್ಲಿಗೆ ಆಗಮಿಸಿದ್ದಾರೆ. ಪ್ರದೀಪ್ ಮೊದಲಿಗೆ ನೀರಿಗೆ ಇಳಿದಿದ್ದಾನೆ. ಆ ಭಾಗದಲ್ಲಿ ಕಾವೇರಿ ನದಿ ೪ ವಿಭಾಗವಾಗಿ ಹಂಚಿಹೋಗಿದೆ. ಈ ಯುವಕರ ತಂಡ ಕೊನೆಯ ಭಾಗದಲ್ಲಿ ಈಜಲು ತೆರಳಿದ್ದಾರೆ. ಮೀನು ಹಿಡಿಯುವ ಗಾಳದ ದಾರವನ್ನು ಕುತ್ತಿಗೆ ಮತ್ತು ಕೈ ಭಾಗಕ್ಕೆ ಸಿಕ್ಕಿಕೊಂಡು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಮೃತದೇಹ ಕಾವೇರಿ ನದಿಯ ಇನ್ನೊಂದು ಭಾಗ ಅಂದರೆ ಮೈಸೂರು ಜಿಲ್ಲೆಗೆ ಸೇರುವುದರಿಂದ ಬೈಲಕುಪ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿ ನದಿಯಿಂದ ದೇಹ ಹೊರ ತೆಗೆಯಲಾಯಿತು. ಈ ಭಾಗದಲ್ಲಿ ಯುವಕರ ತಂಡ ನಿರಂತರವಾಗಿ ನದಿಯಲ್ಲಿ ಮೋಜು ಮಸ್ತಿ ಮಾಡಲು ಕಾವೇರಿ ನದಿಯತ್ತ ಪ್ರಯಾಣಿಸುವುದು ಕಂಡು ಬಂದಿದೆ. ಕುಶಾಲನಗರದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮೃತ ದೇಹವನ್ನು ಹೊರ ತೆಗೆದರು.