vಮಡಿಕೇರಿ, ಮಾ. ೧೯: ಭಾರತೀಯ ನೌಕಾಪಡೆಯ ತಂಡವೊAದು ಕರ್ನಾಟಕ ಪರಂಪರೆ ರ್ಯಾಲಿ (ಕರ್ನಾಟಕ ಹೆರಿಟೇಜ್ ರ್ಯಾಲಿ) ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಮೂಲಕ ಅಗ್ನಿಪಥ್ ಯೋಜನೆಯ ಮಾಹಿತಿ, ದೇಶಸೇವೆಯ ಮಹತ್ವ ಹಾಗೂ ಕರ್ನಾಟಕದ ಪರಂಪರೆಯನ್ನು ಪರಿಚಯಿಸುವ ಪ್ರಯತ್ನಕ್ಕೆ ಮುಂದಾಗಿದೆ. ಮಾರ್ಚ್ ೧೬ರಿಂದ ಭಾರತೀಯ ನೌಕಾಪಡೆಯ ೩೦ ಮಂದಿ ಅಧಿಕಾರಿಗಳ ತಂಡ ಈ ಕಾರ್ಯದಲ್ಲಿ ತೊಡಗಿದೆ. ಕಾರವಾರದ ನೌಕಾನೆಲೆಯಿಂದ ಈ ಕೆಲಸವನ್ನು ಪ್ರಾರಂಭಿಸಲಾಗಿದೆ. ಸಂಯೋಜಕರು ಮತ್ತು ಅಧಿಕಾರಿಗಳಾದ ಕಮಾಂಡರ್ ರವೀಂದ್ರ ಕುಮಾರ್, ಕಮಾಂಡರ್ ಎಸ್.ಎಸ್.ಪಿ. ಸಿಂಗ್, ಲೆಫ್ಟಿನೆಂಟ್ ಕಮಾಂಡರ್ ಕೊಡಗಿನವರಾದ ಕುಂಚೆಟ್ಟಿರ ಸುಬ್ಬಯ್ಯ ಸೇರಿ ೩೦ ಮಂದಿ ಅಧಿಕಾರಿಗಳು ಹಾಗೂ ಕುಟುಂಬದವರು ವಾಹನದ ಮೂಲಕ ಈ ರ್ಯಾಲಿಯನ್ನು ಆಯೋಜಿಸುತ್ತಿದ್ದಾರೆ.
ಈಗಾಗಲೇ ಈ ತಂಡ ಬಿಜಾಪುರದ ಗೋಲ್ ಗುಂಬಜ್, ಸೈನಿಕ ಶಾಲೆ, ನವಲಗುಂದ, ಪಟ್ಟದಕಲ್ಲು, ಹಂಪಿ ಮತ್ತಿತರ ಕಡೆಗಳಲ್ಲಿ ಈ ಪ್ರಚಾರಾಂದೋಲನ ನಡೆಸಿದೆ.
ಈ ತಂಡ ತಾ. ೨೧ರಿಂದ ೨೩ರ ತನಕ ಕೊಡಗಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಕಮಾಂಡರ್ ಕುಂಚೆಟ್ಟಿರ ಸುಬ್ಬಯ್ಯ ಮಾಹಿತಿ ನೀಡಿದ್ದಾರೆ. ತಾ. ೨೧ರಂದು ಜಿಲ್ಲೆಗೆ ಈ ತಂಡ ಆಗಮಿಸುತ್ತಿದ್ದು, ಅಂದು ಕೂಡಿಗೆಯ ಸೈನಿಕ್ ಶಾಲೆಯಿಂದ ಕಾರ್ಯಕ್ರಮ ಪ್ರಾರಂಭಿಸಲಾಗುತ್ತಿದೆ. ಅಲ್ಲಿ ಅಗ್ನಿಪಥ್ ಕುರಿತಾಗಿ ಮಕ್ಕಳೊಂದಿಗೆ ಸಂವಾದ, ಬಳಿಕ ದುಬಾರೆ, ಕಾವೇರಿ ನಿಸರ್ಗಧಾಮ, ಗೋಲ್ಡನ್ ಟೆಂಪಲ್ ಭೇಟಿ ಕಾರ್ಯಕ್ರಮವಿದೆ. ತಾ. ೨೨ರಂದು ಮಡಿಕೇರಿಯಲ್ಲಿ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಮೇಜರ್ ಮಂಗೇರಿರ ಮುತ್ತಣ್ಣ, ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆ ಸ್ಥಳದಲ್ಲಿ ಕಾರ್ಯಕ್ರಮ, ಬಳಿಕ ಬಾಲಭವನಕ್ಕೆ ಭೇಟಿ ನೀಡಲಾಗುತ್ತದೆ. ಅಂದು ಸಂಜೆ ಕ್ಯಾಪಿಟಲ್ ವಿಲೇಜ್ನಲ್ಲಿ ಜಿಲ್ಲೆಯ ನಿವೃತ್ತ ಸೇನಾಧಿಕಾರಿಗಳು, ಸಾರ್ವಜನಿಕ ಪ್ರಮುಖರೊಂದಿಗೆ ಸಮಾಲೋಚನಾ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಕೊಡಗಿನ ಬಗ್ಗೆ ಕೊಡಗಿನ ನಿವೃತ್ತ ಸೈನಿಕರ ಸ್ಥಿತಿಗತಿಯ ಕುರಿತ ವಿವರವನ್ನು ತಂಡ ಪಡೆದುಕೊಳ್ಳಲಿದೆ. ತಾ. ೨೩ರಂದು ನಿಗದಿತ ಪ್ರದೇಶಕ್ಕೆ ಭೇಟಿಯಿತ್ತು ತಾ. ೨೪ರಂದು ಈ ತಂಡ ಮತ್ತೆ ಕಾರವಾರ ನೌಕಾನೆಲೆಯ ಮೂಲಕ ಮರಳಲಿದೆ ಎಂದು ಸುಬ್ಬಯ್ಯ ಅವರು ತಿಳಿಸಿದ್ದಾರೆ. ಅಗ್ನಿಪಥ್ನ ಕುರಿತ ಮಾಹಿತಿಯೊಂದಿಗೆ ಸೇನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಭಾರತ ರಾಜ್ಯಗಳ ಅಧಿಕಾರಿಗಳು ಇರುವುದರಿಂದ ಅವರಿಗೆ ಕರ್ನಾಟಕದ ಇತಿಹಾಸ- ಪರಂಪರೆ ಹಾಗೂ ವಿವಿಧ ತಾಣಗಳನ್ನು ಪರಿಚಯಿಸುವ ಉದ್ದೇಶವೂ ಇವರಲ್ಲಿ ಇರುವುದಾಗಿ ತಿಳಿಸಿದ ಸುಬ್ಬಯ್ಯ ಅವರು, ಇದು ಭಾರತೀಯ ನೌಕಾದಳದ ಚಿಂತನೆಯಾಗಿದೆ ಎಂದು ವಿವರಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ೬೩೬೩೪೫೩೭೬೨ / ೮೯೭೦೪೧೭೩೫೩ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.