ಮಡಿಕೇರಿ, ಮಾ. ೧೯: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿರುವ ಹೊಟೇಲ್ ಮತ್ತು ವಸತಿ ಗೃಹಗಳ ಮಾಲೀಕರಿಗೆ ಸೇರಿದ ಹೊಟೇಲ್ ಮತ್ತು ವಸತಿ ಗೃಹದ ತ್ಯಾಜ್ಯ ನೀರನ್ನು ನೇರವಾಗಿ ಸಾರ್ವಜನಿಕರ ಚರಂಡಿಗೆ ಹರಿಯ ಬಿಟ್ಟಿರುವುದು ಕಂಡು ಬಂದಿದೆ.

ಅದರಲ್ಲೂ ವಾರಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಾಗಿ ವಸತಿಗೃಹದಲ್ಲಿ ಉಳಿದುಕೊಳ್ಳುವ ಸಂದರ್ಭ ಹೆಚ್ಚಾಗಿ ನೇರವಾಗಿ ಸಾರ್ವಜನಿಕರ ಚರಂಡಿಗೆ ಹರಿದು, ಮಲೀನ ನೀರು ಕಾವೇರಿ ನದಿಗೆ ಸೇರಿ, ನದಿ ನೀರು ಕಲುಷಿತಗೊಳ್ಳುತ್ತಿರುವುದರಿಂದ ಸಾರ್ವಜನಿಕರು ಕುಡಿಯಲು ಯೋಗ್ಯ ಇಲ್ಲದಿರುವ ಹಿನ್ನೆಲೆ ಹಾಗೂ ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಇದು ಕರ್ನಾಟಕ ಪುರಸಭಾ ಅಧಿನಿಯಮ ೧೯೬೪ರ ನಿಯಮಗಳ ಸಂಬAಧಿಸಿದ ಪ್ರಕರಣಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಕ್ರಿಮಿನಲ್ ಅಪರಾಧವಾಗಿದೆ.

ಆದ್ದರಿಂದ ತಮ್ಮ ಉದ್ದಿಮೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ವಿಲೇವಾರಿ ಮಾಡುವ ಬಗ್ಗೆ ಕ್ರಮವಹಿಸಲು ಸೂಚಿಸಿದೆ. ತಪ್ಪಿದಲ್ಲಿ ಸಾರ್ವಜನಿಕ ಚರಂಡಿಗೆ ಹರಿಯ ಬಿಟ್ಟಿರುವ ಕೊಳಚೆ ನೀರಿನ ಪೈಪ್‌ಗಳನ್ನು ಪುರಸಭೆಯಿಂದ ತೆರವುಗೊಳಿಸಲಾಗುವುದು/ ಮುಚ್ಚಲಾಗುವುದು ಮತ್ತು ನಿಯಮಗಳಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ತಿಳಿಸಿದ್ದಾರೆ.