ಸೋಮವಾರಪೇಟೆ, ಮಾ. ೧೮: ತಾಲೂಕು ಆಡಳಿತ ಸೌಧದಲ್ಲಿರುವ ತಾಲೂಕು ದಂಡಾಧಿಕಾರಿಗಳೂ ಆಗಿರುವ ತಹಶೀಲ್ದಾರ್ರನ್ನು ಸಾರ್ವಜನಿಕರು ಭೇಟಿ ಮಾಡಲು ಮಧ್ಯಾಹ್ನ ೩.೩೦ ರಿಂದ ಸಂಜೆ ೫.೩೦ರ ಸಮಯ ನಿಗದಿ ಪಡಿಸಿರುವ ಕ್ರಮಕ್ಕೆ ಕೆಂಡಾಮAಡಲರಾಗಿರುವ ಮಾಜಿ ಶಾಸಕ ಅಪ್ಪಚ್ಚು ರಂಜನ್, ಅಧಿಕಾರಿಗಳ ಕ್ರಮದ ವಿರುದ್ಧ ಸಚಿವರಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿರುವ ತಹಶೀಲ್ದಾರ್ ಕಚೇರಿಯ ಹೊರ ಭಾಗದಲ್ಲಿ ತಹಶೀಲ್ದಾರ್ ಭೇಟಿಗೆ ೩.೩೦ರಿಂದ ೫.೩೦ರ ಸಮಯ ನಿಗದಿಪಡಿಸಿ ಫಲಕ ಅಳವಡಿಸಿದ್ದು, ಈ ಕ್ರಮದ ವಿರುದ್ಧ ಸಾರ್ವಜನಿಕರು ಮಾಜೀ ಶಾಸಕರಲ್ಲಿ ವಿಷಯ ಪ್ರಸ್ತಾಪಿಸಿದ ಮೇರೆ, ತಕ್ಷಣ ಜಿಲ್ಲಾಧಿಕಾರಿಗಳು, ಕಂದಾಯ ಇಲಾಖಾ ಸಚಿವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗಗಳಿಂದ ಆಗಮಿಸುವ ಮಂದಿ ತಹಶೀಲ್ದಾರ್ ಭೇಟಿಗೆ ಸಂಜೆಯವರೆಗೂ ಕಚೇರಿಯಲ್ಲಿ ಕಾಯುತ್ತಿರಬೇಕೇ? ಇದುವರೆಗೂ ಇಲ್ಲದ ನಿಯಮವನ್ನು ಈಗ ಅಳವಡಿಸಿರುವುದು ಏಕೆ? ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಚೇರಿ ಅವಧಿಯಲ್ಲಿ ಅಧಿಕಾರಿಗಳು ತಮ್ಮ ಸ್ಥಾನದಲ್ಲಿರಬೇಕು. ದೂರದ ಗ್ರಾಮಗಳಿಂದ ಬರುವ ಮಂದಿಯ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು. ಇದನ್ನು ಬಿಟ್ಟು ಸಂಜೆ ವೇಳೆ ಭೇಟಿಗೆ ಸಮಯ ನಿಗದಿಪಡಿಸಿರುವುದು ಸರಿಯಲ್ಲ ಎಂದು ಮೇಲಧಿಕಾರಿಗಳ ಗಮನಕ್ಕೆ ತರಲಾಯಿತು.
ಗ್ರಾಮೀಣ ಭಾಗದಲ್ಲಿ ಸಂಜೆ ವೇಳೆಗೆ ಸಮರ್ಪಕ ವಾಹನ ವ್ಯವಸ್ಥೆಗಳಿಲ್ಲ. ಅದೂ ಅಲ್ಲದೇ ವನ್ಯಪ್ರಾಣಿ, ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಇಂತಹ ಸಂದರ್ಭದಲ್ಲಿ ತಾಲೂಕು ಕಚೇರಿಯಿಂದ ಕೆಲಸ ಮುಗಿಸಿಕೊಂಡು ಸಂಜೆ ವೇಳೆಗೆ ಮನೆ ತಲುಪಲು ಸಾಧ್ಯವೇ? ಅಧಿಕಾರಿಗಳ ಇಂತಹ ಕ್ರಮ ಸರಿಯಲ್ಲ. ಎಲ್ಲಾ ಸಮಯದಲ್ಲೂ ಜನಸಾಮಾನ್ಯರ ಕೈಗೆ ಅಧಿಕಾರಿಗಳು ಸಿಗುವಂತಾಗಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರ ಆಗ್ರಹಕ್ಕೆ ಸಹಮತ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಸಚಿವರು ತಕ್ಷಣ ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ರಂಜನ್, ಸರ್ಕಾರಿ ಅಧಿಕಾರಿಗಳು ಜನ ಸೇವಕರಂತೆ ಕೆಲಸ ಮಾಡಬೇಕು. ತಹಶೀಲ್ದಾರ್ರಿಗೆ ಜವಾಬ್ದಾರಿ ಹೆಚ್ಚಿದ್ದು, ಕಚೇರಿ ಕೆಲಸ ಕಾರ್ಯಗಳ ನಡುವೆಯೂ ಜನಸಾಮಾನ್ಯರ ಭೇಟಿಗೆ ಸಮಯ ನೀಡಬೇಕು. ಸಮಸ್ಯೆಗಳನ್ನು ಬಗೆಹರಿಸಿ ಸರ್ಕಾರದ ಕೆಲಸಗಳನ್ನು ಮಾಡಿಕೊಡುವುದೇ ಅಧಿಕಾರಿಗಳ ಕರ್ತವ್ಯ. ಇಂತಹ ಸನ್ನಿವೇಶದಲ್ಲಿ ದಿನದಲ್ಲಿ ಕೇವಲ ೨ ಗಂಟೆ; ಅದರಲ್ಲೂ ಸಂಜೆ ವೇಳೆಯಲ್ಲಿ ಸಾರ್ವಜನಿಕರ ಭೇಟಿಗೆ ಸಮಯ ಮೀಸಲಿಟ್ಟಿರುವುದು ಸರಿಯಲ್ಲ. ಈ ಬಗ್ಗೆ ಸಾರ್ವಜನಿಕರು ತಮ್ಮಲ್ಲಿ ಅಳಲು ತೋಡಿಕೊಂಡ ಮೇರೆ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖಾ ಸಚಿವರ ಗಮನಕ್ಕೆ ತರಲಾಗಿದೆ ಎಂದರು.