ಸೋಮವಾರಪೇಟೆ, ಮಾ. ೧೮: ಸಮಾಜದಲ್ಲಿ ಬೇರೂರಿದ್ದ ಕಂದಾಚಾರ, ಮೂಢನಂಬಿಕೆ, ಜಾತೀಯತೆಗಳನ್ನು ಹೋಗಲಾಡಿಸಿ ಸಮ ಸಮಾಜ ನಿರ್ಮಾಣ ಮಾಡುವಲ್ಲಿ ವಚನ ಸಾಹಿತ್ಯದ ಪಾತ್ರ ಪ್ರಮುಖವಾದುದು ಎಂದು ಇಲ್ಲಿನ ಬಿಟಿಸಿಜಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ.ಎನ್. ಧನಲಕ್ಷಿö್ಮ ಹೇಳಿದರು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಯಜಮಾನ್ ಪುಟ್ಟಮಲ್ಲಪ್ಪ ಚೆನ್ನವೀರಮ್ಮ ಸ್ಮರಣಾರ್ಥ ಕಾಫಿ ಬೆಳೆಗಾರ ಸೋಮವಾರಪೇಟೆಯ ಎ.ಪಿ. ಶಂಕರಪ್ಪ ಅವರು ಸ್ಥಾಪಿಸಿರುವ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪಠ್ಯದ ಜೊತೆಗೆ ವಚನ ಸಾಹಿತ್ಯವನ್ನು ತಪ್ಪದೇ ಅಧ್ಯಯನ ಮಾಡುವ ಮೂಲಕ ಸಮಾಜದಲ್ಲಿ ಸತ್ಪçಜೆಗಳಾಗಬೇಕೆಂದು ಕರೆಕೊಟ್ಟ ಅವರು, ಶರಣರ ಆದರ್ಶಗಳನ್ನು ಮೈಗೂಢಿಸಿಕೊಂಡು ಸಂಸ್ಕಾರವAತರಾಗಿ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.

ದತ್ತಿ ಕಾರ್ಯಕ್ರಮ ಉದ್ಘಾಟಿಸಿದ ಸೋಮವಾರಪೇಟೆ ಜಾನಪದ ಪರಿಷತ್‌ನ ಕಾರ್ಯದರ್ಶಿ ವಿಜಯ್ ಹಾನಗಲ್ ಮಾತನಾಡಿ, ಮನುಷ್ಯನ ಬದುಕಿಗೆ ದಾರಿದೀಪವಾಗಿರುವ ವಚನ ಸಾಹಿತ್ಯವನ್ನು ಇಂದಿನ ಪೀಳಿಗೆಗೆ ಹೆಚ್ಚಾಗಿ ತಿಳಿಸುವ ಕೆಲಸವಾಗಬೇಕಿದೆ. ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರೆದರೂ ಕೂಡ, ನಿಸರ್ಗ ನಮಗೆ ನೀಡಿರುವ ಅಮೂಲ್ಯ ನೀರು, ಗಾಳಿ, ಮಣ್ಣು, ಪರಿಸರ ಇತ್ಯಾದಿ ಸಂಪತ್ತನ್ನು ನಾಶ ಮಾಡದ ಹಾಗೆ ಸಂರಕ್ಷಣೆ ಮಾಡಿದಲ್ಲಿ ಮಾತ್ರ ಮನುಷ್ಯ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.

"ಶರಣ ಸಂಸ್ಕೃತಿ ಪ್ರಸಾರ" ದತ್ತಿ ಉಪನ್ಯಾಸ ನೀಡಿದ ಐಗೂರು ಪಿಯು ಕಾಲೇಜು ಕನ್ನಡ ಉಪನ್ಯಾಸಕ ನಿಶ್ಚಯ್, ಹನ್ನೆರಡನೇ ಶತಮಾನದಲ್ಲಿದ್ದ ಮೇಲು ಕೀಳು, ಭೇದ ಭಾವಗಳನ್ನು ಮೆಟ್ಟಿನಿಲ್ಲುವ ಮೂಲಕ ನೊಂದ ಜನರ ಧ್ವನಿಯಾದ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ, ಅಂಬಿಗರ ಚೌಡಯ್ಯ ಮೊದಲಾದ ಬಸವಾದಿ ಶರಣರ ಹೋರಾಟ ಹಾಗೂ ಕಾಯಕದ ಬಗ್ಗೆ ತಿಳಿಸಿದರು.

ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಜವರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾಲೇಜಿನ ಪ್ರಾಧ್ಯಾಪಕರಾದ ಡಾ. ಕೆ.ಎನ್.ಕುಸುಮ, ಡಾ. ಗೀತಾ, ಎಂ.ಎA. ಸುನೀತಾ, ಎಂ.ಎಸ್. ಶಿವಮೂರ್ತಿ, ಕೋಮಲ, ಗಾಯಿತ್ರಿ ಇದ್ದರು.

ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಕಾಲೇಜು ಪ್ರಾಂಶುಪಾಲರಾದ ಧನಲಕ್ಷಿö್ಮ ಅವರನ್ನು ಸನ್ಮಾನಿಸಲಾಯಿತು.