ಲೋಕಸಭಾ ಚುನಾವಣಾ ಡೈರಿ
ಕೊಡಗು-ಮೈಸೂರು ಲೋಕಸಭಾ ಚುನಾವಣೆಯಲ್ಲಿ ಅಚ್ಚರಿಯ ಬದಲಾವಣೆಯಾಗಿ ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣರಾಜ ಒಡೆಯರ್ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದೆ.
ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಇಂಥಹುದ್ದೇ ಪ್ರಯೋಗವನ್ನು ಹೊಸ ಮುಖಗಳನ್ನು ಹಲವೆಡೆ ಕಣಕ್ಕಿಳಿಸುವ ಮೂಲಕ ಮಾಡಿದ್ದ ಬಿಜೆಪಿಗೆ ಇಂಥ ಪ್ರಯೋಗಗಳೇ ತಿರುಗುಬಾಣವಾಗಿತ್ತು.
ಇದೀಗ ಮತ್ತೊಮ್ಮೆ ರಾಜ್ಯದ ಅನೇಕ ಲೋಕಸಭಾ ಕ್ಷೇತ್ರಗಳಲ್ಲಿ ಮತ್ತೆ ಬಿಜೆಪಿಯ ದೆಹಲಿ ವರಿಷ್ಠರು ಇಂಥ ಸವಾಲಿನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಈ ಚುನಾವಣೆ ಕೇಂದ್ರ ಸರ್ಕಾರಕ್ಕಾಗಿ ನಡೆಯಲಿರುವುದರಿಂದಾಗಿ ಜನ ಪ್ರಧಾನಿ ಮೋದಿಯವರ ಚರಿಷ್ಮ ನೋಡಿಯೇ ಮತಹಾಕಲಿದ್ದಾರೆ ಎಂಬ ಪ್ರಬಲವಾದ ನಂಬಿಕೆ ಬಿಜೆಪಿ ವರಿಷ್ಟರಲ್ಲಿದೆ. ಈ ಧೈರ್ಯದಿಂದಲೇ ಬಿಜೆಪಿ ಅಭ್ಯರ್ಥಿಯ ಬದಲಾವಣೆಗೆ ಕೆಲವು ಕ್ಷೇತ್ರಗಳಲ್ಲಿ ಮುಂದಾಗುವ ಪ್ರಯೋಗಕ್ಕೆ ಮುಂದಾಗಿದ್ದು ಸ್ಪಷ್ಟ.
ಬಿಜೆಪಿ ಹೈಕಮಾಂಡ್ ಎಂಬುದು ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಇದ್ದಂತೆ. ಶಾಲೆಯಲ್ಲಿ ಆಗಬೇಕಾದ ಕೆಲಸಗಳು, ಬದಲಾವಣೆಗಳ ಬಗ್ಗೆ ಇತರ ಶಿಕ್ಷಕರಿಂದ ಸಲಹೆಗಳನ್ನು ಕೇಳುವ ಮುಖ್ಯೋಪಾಧ್ಯಾಯ ಅಂತಿಮವಾಗಿ ತನಗೇನು ಬೇಕೋ, ತನಗೇನು ಅನ್ನಿಸಿದೆಯೋ ಅದನ್ನೇ ಜಾರಿಗೊಳಿಸುತ್ತಾನೆ. ಇಂಥ ನಿರ್ಧಾರ ಶಾಲಾ ಮಕ್ಕಳ ಮೇಲೆ ಉಂಟು ಮಾಡುವ ಪರಿಣಾಮ ಭವಿಷ್ಯದಲ್ಲಿ ನಿರ್ಧಾರವಾಗುತ್ತದೆ.
ಇದೇ ರೀತಿ, ಬಿಜೆಪಿ ಹೈಕಮಾಂಡ್ ಎಂಬುದು ಕೂಡ ಜನರ ಅಭಿಪ್ರಾಯಗಳನ್ನೇ ಪರಿಗಣಿಸದೇ ತನಗೆ ಬಂದAತೆ ನಿರ್ಧಾರಗಳನ್ನು ಜಾರಿಗೊಳಿಸುತ್ತಿದೆ ಎಂಬ ದೂರು ನಿನ್ನೆ ಮೊನ್ನೆಯದ್ದೇನೂ ಅಲ್ಲ.
ಗಮನಿಸಿ ನೋಡಿ. ಡಿ.ವಿ. ಸದಾನಂದಗೌಡ ಈ ರಾಜ್ಯದ ಬಿಜೆಪಿಯ ಅಧ್ಯಕ್ಷರಾಗಿದ್ದವರು. ಮುಖ್ಯಮಂತ್ರಿಯೂ ಆಗಿದ್ದವರು. ಅಂಥಹ ಸದಾನಂದಗೌಡ ಅವರೇ ನನಗೆ ಸ್ಪರ್ಧೆಗೆ ಅವಕಾಶ ನೀಡಿ ಎಂದು ಗೋಗರೆಯುವಂಥ ಸ್ಥಿತಿ ನಿರ್ಮಾಣವಾಯಿತು. ಇದೇ ದಯನೀಯ ಪರಿಸ್ಥಿತಿ ಅಂಥಹುದ್ದೇ ಸ್ಥಾನದಲ್ಲಿದ್ದ ಜಗದೀಶ್ ಶೆಟ್ಟರ್, ನಳೀನ್ ಕುಮಾರ್ ಕಟೀಲು ಅವರಿಗೂ ಆಗಿದ್ದು, ಹಿಂದುತ್ವದ ಪ್ರತಿಪಾದನೆಯಲ್ಲಿ ನನ್ನ ಬಿಟ್ಟರೆ ಯಾರಿದ್ದಾರೆ ಎಂದು ಹೂಂಕರಿಸಿದ್ದ ಪ್ರತಾಪ್ ಸಿಂಹ, ಸಿ.ಟಿ. ರವಿ ಅಂಥವರನ್ನೂ ಹೈಕಮಾಂಡ್ ನಿರ್ಲಕ್ಷö್ಯ ಮಾಡಿದೆ.
ಮೋದಿ ಫೋಟೋ ತೋರಿಸಿ ಎಂಥ ಅಭ್ಯರ್ಥಿಯನ್ನಾದರೂ ಗೆಲ್ಲಿಸಿಕೊಂಡು ಬರುತ್ತೇವೆ ಎಂಬ ಹೈಕಮಾಂಡ್ನ ಖಡಕ್ ನಿಲುವುಗಳೇ, ಅವಕಾಶ ವಂಚಿತರು ಕೂಡ ಬಂಡಾಯ ಏಳದಂತೆ ಮಾಡಿದೆ.
ಪ್ರತಾಪ್ ಸಿಂಹ ತನಗೆ ಅವಕಾಶ ದೊರಕದಿದ್ದಾಗ ರೆಬೆಲ್ ಆಗುವ ಮಾತೇ ಆಡಲಿಲ್ಲ. ಪ್ರತಾಪ್ ಸಿಂಹ ಪರ ಪ್ರತಿಭಟನೆ ಮಾಡಿದ್ದವರು, ಹೇಳಿಕೆ ನೀಡಿದ್ದವರೆಲ್ಲಾ ಯಾವಾಗ ಯದುವೀರ್ಗೆ ಅವಕಾಶ ಸಿಕ್ಕಿತೋ ಆಗಲೇ ಯದುವೀರ್ ಕೀ ಜೈ ಎಂದು ಘೋಷಣೆ ಕೂಗಿದ್ದಾಗಿದೆ.
ಪ್ರತಾಪ್ ಸಿಂಹ ಸ್ಪರ್ಧಿಸಿದ್ದಿದ್ದರೆ ಖಂಡಿತಾ ಬಹಳ ಅಂತರದಲ್ಲಿ ಗೆಲವು ಸಾಧಿಸುತ್ತಿದ್ದರು. ಪ್ರತಾಪ್ ಸಿಂಹ ಅಂಥ ನಾಯಕರು ಕ್ಷೇತ್ರಕ್ಕೆ ಬೇಕಿತ್ತು, ಏನಿಲ್ಲವೆಂದರೂ ಅವರ ವಿರುದ್ಧ ಟೀಕಿಸಲು ಅಸ್ತçಗಳು ಸದಾ ಸಿಕ್ಕುತ್ತಿತ್ತು. ರಾಜಕೀಯ ಸದಾ ಬೆಂಕಿಯ ಹಾಗೇ ಉರಿಯುತ್ತಿರುತ್ತಿತ್ತು ಎಂದು ಹೇಳಿದವರು ಬೇರೆ ಯಾರೂ ಅಲ್ಲ, ಪ್ರತಾಪ್ ವಿರುದ್ಧ ಸದಾ ಟೀಕಿಸುತ್ತಿದ್ದ ಓರ್ವ ಕಾಂಗ್ರೆಸ್ ಮುಖಂಡರು.!
ಯದುವೀರ್ ರಂಗಪ್ರವೇಶ!
ಮೈಸೂರು ಅರಮನೆಯಲ್ಲಿದ್ದ ಯದುವೀರ್ ರಾಜಕೀಯ ಪ್ರವೇಶ ಮಾಡಿದ್ದಾರೆ. ಆದರೆ ಇವರನ್ನು ರಾಜಕೀಯಕ್ಕೆ ಕರೆತರುವ ಯೋಚನೆ ನಿನ್ನೆ ಮೊನ್ನೆ ನಡೆದದ್ದು ಎಂದರೆ ನಂಬಲು ಸಾಧ್ಯವೇ ಇಲ್ಲ. ನೆನಪಿರಲಿ, ಮೂರು ವರ್ಷಗಳ ಹಿಂದೆ ಮೈಸೂರಿನಲ್ಲಿ ನಡೆದ ಯೋಗದಿನಾಚರಣೆಗೆ ಬಂದಿದ್ದ ಮೋದಿ ಆ ಸಂದರ್ಭದಲ್ಲಿ ಅರಮನೆಗೆ ತೆರಳಿ ಪ್ರಮೋದಾ ದೇವಿ ಮತ್ತು ಯದುವೀರ್ ಜತೆ ಮಾತುಕತೆ ನಡೆಸಿದ್ದರು. ಮೂಲಗಳ ಪ್ರಕಾರ ಅಂದೇ ಯದುವೀರ್ಗೆ ಮೋದಿ ಆಹ್ವಾನ ನೀಡಿಯಾಗಿತ್ತು. ಕಳೆದ ವರ್ಷ ಗೃಹಸಚಿವ ಅಮಿತ್ ಷಾ ಕೂಡ ಪ್ರಮೋದಾ ದೇವಿ ಜತೆ ಮಾತನಾಡಿದ್ದರು. ಇದೀಗ ಹೈಕಮಾಂಡ್ ಯಡಿಯೂರಪ್ಪ ಮೂಲಕ ಯದುವೀರ್ ಸ್ಪರ್ಧೆಗೆ ಆಹ್ವಾನ ನೀಡಿ ಅದರಲ್ಲಿ ಸಫಲವಾಗಿದೆ.
ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ನಾಲ್ಕು ಬಾರಿ ಕಾಂಗ್ರೆಸ್ನಿAದ ಸಂಸದರಾಗಿದ್ದರು. ಒಂದು ಬಾರಿ ಬಿಜೆಪಿಯಿಂದ ಶ್ರೀಕಂಠದತ್ತ ಒಡೆಯರ್ ಸ್ಪರ್ಧಿಸಿ ಸೋತಿದ್ದರು. ೨೦೦೪ ರಲ್ಲಿ ಶ್ರೀಕಂಠದತ್ತರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದು ಸೋಲುಕಂಡು ರಾಜಕೀಯದಿಂದಲೇ ದೂರವಾದರು. ಇದಾಗಿ ೩೦ ವರ್ಷಗಳ ಬಳಿಕ, ಮತ್ತೆ ರಾಜವಂಶಸ್ಥರ ರಾಜಕೀಯ ರಂಗಪ್ರವೇಶವಾಗಿದೆ. ಶ್ರೀಕಂಠದತ್ತ ಒಡೆಯರ್ ನಿಧನರಾಗಿ ೧೦ ವರ್ಷಗಳ ಬಳಿಕ ಅರಮನೆಯಲ್ಲಿ ರಾಜಕೀಯದ ಗಾಳಿ ಬೀಸತೊಡಗಿದೆ. ೯ ವರ್ಷಗಳ ಹಿಂದೆ ಒಡೆಯರ್ ಕುಟುಂಬದ ದತ್ತು ಪುತ್ರನಾಗಿ ಅರಮನೆ ಆಡಳಿತ ನಿರ್ವಹಿಸಲು ಪ್ರಾರಂಭಿಸಿದ ಯದುವೀರ್ ಉನ್ನತ ಶಿಕ್ಷಣ ಪಡೆದವರು, ಅನೇಕ ಸೇವಾ ಸಂಸ್ಥೆಗಳ ಮೂಲಕ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ. ಈ ಮೊದಲಿನ ರಾಜವಂಶಸ್ಥರಿಗೆ ಹೋಲಿಸಿದರೆ ಯದುವೀರ್ ಹೆಚ್ಚು ಜನಸ್ಮೇಹಿಯಾಗಿದ್ದಾರೆ. ಕೊಡಗಿನಲ್ಲಿಯೂ ಅನೇಕ ಸ್ನೇಹಿತರನ್ನು ಹೊಂದಿದ್ದಾರೆ.
ಸವಾಲುಗಳೇನು?
ಈ ಮೊದಲು ಎಲ್ಲಿಯೂ ರಾಜಕೀಯ ವೇದಿಕೆಗಳಲ್ಲಿ ಯದುವೀರ್ ಕಾಣಿಸಿಕೊಂಡಿಲ್ಲ. ರಾಜಕೀಯಕ್ಕೆ ಹೊಸಬರಾದ ಯದುವೀರ್ ಯಾವ ರೀತಿ ಸ್ಥಳೀಯವಾಗಿ ಬಿಜೆಪಿ ಮುಖಂಡರ ಅಭಿಪ್ರಾಯ ಪಡೆದು ಸಾಗುತ್ತಾರೆ. ಕಾರ್ಯಕರ್ತರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎಂಬುದು ಮುಖ್ಯವಾಗುತ್ತದೆ. ಅರಮನೆಯಿಂದ ಹೊರತಾಗಿ ಜನರನ್ನು ಯದುವೀರ್ ಎಲ್ಲಿ ಭೇಟಿಯಾಗುತ್ತಾರೆ. ಸಂಸದರಾದಲ್ಲಿ ಇವರನ್ನು ಭೇಟಿ ಮಾಡಲು ಅರಮನೆ ಗೇಟ್ ಸಾರ್ವಜನಿಕರಿಗೆ ತೆರೆಯಲಿದೆಯೇ ಎಂಬೆಲ್ಲಾ ಪ್ರಶ್ನೆಗಳು ಕೇಳಿಬರುತ್ತಿದೆ. ಬೇರೆ ರಾಜಕಾರಣಿಗಳಿಗೆ ಹೋಲಿಸಿದರೆ ಯದುವೀರ್ ರಾಜಕೀಯ ಭಾಷಣಗಳಿಗೆ ಹೇಳಿ ಮಾಡಿಸಿದ ವಾಗ್ಮಿಯಲ್ಲ. ಚುನಾವಣೆಗೆ ಬೇಕಾದ ಸಿಡಿಗುಂಡಿನAಥ ಮಾತುಗಳು ಇವರಿಂದ ಕೇಳಿಬರುವುದು ಸಂಶಯವೇ. ಎಲ್ಲಕ್ಕಿಂತ ಮುಖ್ಯವಾಗಿ ೩೦ ವರ್ಷಗಳ ಹಿಂದೆ ಇದ್ದಂತೆ ಮೈಸೂರು ಪ್ರಾಂತ್ಯದಲ್ಲಿ ರಾಜವಂಶಸ್ಥರು ಎಂದ ಕೂಡಲೇ ಹಿಂದೆ ಮುಂದೆ ನೋಡದೇ ಮತಹಾಕುವ ಮತದಾರರು ಇನ್ನೂ ಉಳಿದುಕೊಂಡಿದ್ದಾರೆಯೇ ಎಂಬುದು ಪ್ರಶ್ನೆಯಾಗಿದೆ. ಕೊಡಗಿನಲ್ಲಿ ರಾಜವಂಶಸ್ಥ ಎಂಬ ಪಟ್ಟ ಯಾವುದೇ ಪರಿಣಾಮವನ್ನು ಮತದಾರರ ಮೇಲೆ ಬೀರುವುದಿಲ್ಲ. ಪ್ರತಾಪ್ ಸಿಂಹ ಬೆಂಬಲಿಗರು ಒಳಏಟು ನೀಡುವ ಸಾಧ್ಯತೆಯೂ ಇಲ್ಲದಿಲ್ಲ. ಪ್ರತಾಪ್ ಸಿಂಹ ಬೆಂಬಲಿಸುತ್ತಲೇ ಬಂದಿದ್ದ ಜೆಡಿಎಸ್ನ ಜಿ.ಟಿ. ದೇವೇಗೌಡ ಬೆಂಬಲಿಗರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದೂ ಪ್ರಶ್ನೆಯಾಗಿದೆ. ಮುಸ್ಲಿಂ, ಅಹಿಂದ ಮತಗಳು ಈಗ ಕಾಂಗ್ರೆಸ್ ಪರವಾಗಿದೆ. ಜತೆಗೆ ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳೂ ಕೂಡ ಕೈ ಪರ ಮತ ಹೆಚ್ಚಳದ ಸಾಧ್ಯತೆಗೆ ಕಾರಣವಾಗಿದೆ. ಕಾಂಗ್ರೆಸ್ನಿAದ ಪ್ರಬಲ ಒಕ್ಕಲಿಗ ಅಭ್ಯರ್ಥಿ ಸ್ಪರ್ಧಿಸಿದ್ದೇ ಆದಲ್ಲಿ ಅದು ಕೂಡ ಬಿಜೆಪಿಗೆ ಸಮಸ್ಯೆಯಾಗಲಿದೆ. ಜೆಡಿಎಸ್ ಕಾರ್ಯಕರ್ತರು ಈ ಮೊದಲಿನ ಚುನಾವಣೆಯಂತೆ ಬಿಜೆಪಿಗೆ ಮತಹಾಕುವರೇ ಎಂಬುದನ್ನೂ ಬಿಜೆಪಿ ಗೆಲವು ಅವಲಂಭಿಸಿದೆ.
ಆದರೆ, ಹುಣಸೂರು, ಪಿರಿಯಾಪಟ್ಟಣ, ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಜೆಡಿಎಸ್ ಮತದಾರರು ಈ ಬಾರಿ ಬಿಜೆಪಿ ಪರ ನಿಂತಿರುವುದು ಯದುವೀರ್ಗೆ ನೆರವಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಮೋದಿ ಕೇಂದ್ರೀಕೃತ ಚುನಾವಣೆಯಲ್ಲಿ ಯದುವೀರ್ ಗೆಲುವಿನ ದಡ ಸೇರುವ ಸಾಧ್ಯತೆಗಳೂ ಇವೆ. ಬಿಜೆಪಿಯಲ್ಲಿದ್ದ ಮಾತ್ರಕ್ಕೆ ರಾಜವಂಶಸ್ಥ ಗೆಲವು ಸಾಧಿಸಲೇಬೇಕು ಎಂದೇನಿಲ್ಲ. ಶ್ರೀಕಂಠದತ್ತ ಒಡೆಯರ್ ಬಿಜೆಪಿಯಿಂದಲೇ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪರಾಜಿತರಾಗಿದ್ದರು. ಆದರೆ ಆಗಕ್ಕೂ ಈಗಕ್ಕೂ ಇರುವ ವ್ಯತ್ಯಾಸ ಎಂದರೆ ಆಗ ಮೋದಿ ಹೆಸರೇ ಇರಲಿಲ್ಲ. ಈಗ ಮೋದಿ ನಾಮ ಬಲವೇ ಅಭ್ಯರ್ಥಿ ಪಾಲಿಗೆ ಬಲವಾಗಿದೆ.
ಕಾಂಗ್ರೆಸ್ ರಣತಂತ್ರ ಬದಲು
ಬಿಜೆಪಿ ಯಾವಾಗ ಯದುವೀರ್ ಹೆಸರನ್ನು ಘೋಷಿಸಿತೋ ಕಾಂಗ್ರೆಸ್ನಲ್ಲಿ ರಣತಂತ್ರ ಬದಲಾಗಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರವಾಗಿರುವ ಮೈಸೂರು ಲೋಕಸಭಾ ಅಖಾಡದಲ್ಲಿಯೇ ಕಾಂಗ್ರೆಸ್ ಸೋಲು ಕಂಡರೆ ಇದು ನೀಡುವ ಸಂದೇಶವೇ ಬೇರೆಯಾಗುತ್ತದೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಪಾಲಿಗೆ ಇಲ್ಲಿ ಜಯ ಅತ್ಯಗತ್ಯವಾಗಿದೆ. ಪ್ರತಾಪ್ ಸಿಂಹ ವಿರುದ್ಧ ಎಂ. ಲಕ್ಷö್ಮಣ್ ನಿಲ್ಲಿಸಿ ಸಿಂಹ ವಿರೋಧಿ ಮತಗಳ ಪ್ರಯೋಜನ ಪಡೆಯುವ ಲೆಕ್ಕಾಚಾರದಲ್ಲಿದ್ದ ಕಾಂಗ್ರೆಸ್ ಈಗ ನಿರಾಶೆ ಅನುಭವಿಸಿದೆ.
ಯದುವೀರ್ ಎದುರಿಗೆ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗ ಮತಗಳ ಮೇಲೆ ಕಾಂಗ್ರೆಸ್ ದೃಷ್ಟಿ ನೆಟ್ಟಿದೆ. ಇತ್ತೀಚಿಗೆ ನಿಧನರಾದ ಕಾಂಗ್ರೆಸ್ ಮುಖಂಡ ಮೇಯರ್ ವಾಸು ಅವರ ಪುತ್ರ ಕವೀಶ್ ಗೌಡ ಮನವೊಲಿಸುವ ಪ್ರಯತ್ನ ಬಿರುಸಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ೫೧ ಸಾವಿರ ಮತಗಳಿಸಿದ ಕವೀಶ್ ಗೌಡ ಸದ್ಯ ಬಿಜೆಪಿ ಪಾಳಯದಲ್ಲಿದ್ದು ಅವರನ್ನು ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್ಸಿಗರು ಮುಂದಾಗಿದ್ದಾರೆ. ಅಂತೆಯೇ ಡಾ. ಶುಶ್ರುತ್ ಗೌಡ ಅವರನ್ನು ಸ್ಪರ್ಧೆಗೆ ಇಳಿಸಿದರೆ ಮುಂದಿನ ಪರಿಣಾಮಗಳ ಬಗ್ಗೆಯೂ ಲೆಕ್ಕಾಚಾರ ನಡೆದಿದೆ. ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ ಕುಮಾರ್ ಸ್ಪರ್ಧಿಸುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಕೊಡಗು-ಮೈಸೂರು ಕ್ಷೇತ್ರದ ಅಭ್ಯರ್ಥಿಯ ಗೆಲುವು ಕಾಂಗ್ರೆಸ್ ಪಾಲಿಗೆ ಅತ್ಯಂತ ಅನಿವಾರ್ಯವಾಗಿದ್ದು, ಹೀಗಾಗಿಯೇ ಇನ್ನೂ ಅಭ್ಯರ್ಥಿ ಆಯ್ಕೆಗಾಗಿ ಕಸರತ್ತು ನಡೆಯುತ್ತಲೇ ಇದೆ. ರಾಜಕೀಯ ವಿಶ್ಲೇಷಣೆ - ಅನಿಲ್ ಎಚ್.ಟಿ.