ಕುಶಾಲನಗರ, ಮಾ. ೧೭: ಲೋಕಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿದ ಬೆನ್ನಲ್ಲೇ ಕೊಡಗು, ಮೈಸೂರು ಗಡಿಭಾಗವಾದ ಕುಶಾಲನಗರ ಚೆಕ್‌ಪೋಸ್ಟ್ನಲ್ಲಿ ಸೂಕ್ಷö್ಮ ಭದ್ರತೆ ಕಲ್ಪಿಸಿ ವಾಹನ ತಪಾಸಣೆ ಆರಂಭಿಸಲಾಗಿದೆ. ವಾಹನಗಳ ಪರಿಶೀಲನೆಗೆ, ಚುನಾವಣಾ ಅಧಿಕಾರಿಯ ಸಿಬ್ಬಂದಿಗಳ ಕರ್ತವ್ಯಕ್ಕೆ ಅಗತ್ಯವಾದ ವ್ಯವಸ್ಥೆ ಕಲ್ಪಿಸಲು ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಕುಶಾಲನಗರ ಪುರಸಭೆಯ ಅಧಿಕಾರಿಗಳು ಪೌರಕಾರ್ಮಿಕರು ಸ್ವಚ್ಛತೆಯೊಂದಿಗೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ದಿನದ ೨೪ ಗಂಟೆಗಳ ಕಾಲ ಜಿಲ್ಲೆಗೆ ಆಗಮಿಸುವ ವಾಹನಗಳ ತಪಾಸಣೆ ಆರಂಭಗೊAಡಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದAತೆ ಗಡಿಯಲ್ಲಿ ವಾಹನಗಳ ತಪಾಸಣಾ ಕೇಂದ್ರದಲ್ಲಿ ಪರಿಶೀಲನೆ ನಡೆಸಲು ಮೂರು ಪಾಳಿಯಲ್ಲಿ ತಂಡಗಳನ್ನು ನಿಯೋಜಿಸಲು ಈಗಾಗಲೇ ಎಲ್ಲಾ ಕಾರ್ಯಯೋಜನೆ ಸಿದ್ಧವಾಗಿದೆ.

ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಮತ್ತು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಶಾಲನಗರ ಪುರಸಭೆ ಮೂಲಕ ಪಟ್ಟಣದಲ್ಲಿ ಸಾರ್ವಜನಿಕವಾಗಿ ಅಳವಡಿಸಿದ್ದ ಬ್ಯಾನರ್ ಮತ್ತು ಇತರ ಭಿತ್ತಿಪತ್ರಗಳನ್ನು ತೆರವುಗೊಳಿಸುವ ಕಾರ್ಯ ನಡೆಯಿತು.