ಮಡಿಕೇರಿ, ಮಾ. ೧೭: ಮಡಿಕೇರಿ ತಾಲೂಕಿನ ಕೆ. ಪೆರಾಜೆ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗೆ ಟೆಂಡರ್ ಮಂಜೂರಾತಿ ಆಗಿದ್ದರೂ ಇದುವರೆಗೂ ಕಾಮಗಾರಿ ಆರಂಭವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು, ಕೂಡಲೇ ರಸ್ತೆ ಅಭಿವೃದ್ಧಿಪಡಿಸದಿದ್ದಲ್ಲಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ. ಪೆರಾಜೆ ಗ್ರಾಮದ ನಿವಾಸಿ ವಿಜಯಕೃಷ್ಣ, ೨೦೨೦ರಲ್ಲಿ ಕೆ.ಪೆರಾಜೆ, ಆಲೆಟ್ಟಿ, ಕಾಪುಮಲೆ ಹಾಗೂ ಕುಂದಲಪಾಡಿ ವಿಎಸ್ಎಸ್ಎನ್ ರಸ್ತೆಯನ್ನು ಸುಮಾರು ೧೨ ಕಿ.ಮೀ ಗ್ರಾಮೀಣ ರಸ್ತೆಯಿಂದ ಜಿಲ್ಲಾ ರಸ್ತೆ ಯನ್ನಾಗಿ ಮೇಲ್ದರ್ಜೆ ಗೇರಿಸಲು ಮಂಜೂರಾತಿ ಆಗಿದೆ.
೨೦೨೨-೨೩ನೇ ಸಾಲಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಸ್ತೆ ಅಭಿವೃದ್ಧಿಗೆ ನಬಾರ್ಡ್ ಯೋಜನೆಯಡಿ ೪ ಕೋಟಿ ಮಂಜೂರಾಗಿದೆ. ಇದೀಗ ಸರ್ಕಾರ ಬದಲಾಗಿದ್ದು, ಕೆ.ಪೆರಾಜೆಯಲ್ಲಿ ಕೈಗೊಳ್ಳಬೇಕಿರುವ ರಸ್ತೆ ಕಾಮಗಾರಿಯನ್ನು ರಾಜಕೀಯ ಒತ್ತಡದಿಂದ ಪಿ. ಪೆರಾಜೆಗೆ ವರ್ಗಾಯಿಸಿರುವುದು ಖಂಡನೀಯ ಎಂದರು.
ಈ ಸಂಬAಧ ಜ. ೨೭ ರಂದು ಪೆರಾಜೆಯಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ರಾಜ್ ಹಾಗೂ ಶಾಸಕ ಪೊನ್ನಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಶಾಸಕರ ನಿವಾಸಕ್ಕೂ ತೆರಳಿ ಮನವಿ ಮಾಡಿದ್ದೇವೆ.
ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಕೆ. ಪೆರಾಜೆಯಲ್ಲಿ ರಸ್ತೆ ಕಾಮಗಾರಿ ಆರಂಭಿಸಬೇಕು. ತಪ್ಪಿದಲ್ಲಿ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಹೇಳಿದರು.
ಮತ್ತೋರ್ವ ನಿವಾಸಿ ಡಿ.ಬಿ. ಮುತ್ತಪ್ಪ ಮಾತನಾಡಿ, ಈ ಭಾಗದಲ್ಲಿ ಸುಮಾರು ೧೦೦ ಮನೆಗಳಿದ್ದು, ರಸ್ತೆ ಡಾಂಬರೀಕರಣವಾಗದೆ ಸ್ಥಳೀಯರು ಸಂಕಷ್ಟ ಪಡುವಂತಾಗಿದೆ. ಮೂಲ ಸ್ಥಳದಿಂದಲೇ ಕಾಮಗಾರಿ ಆರಂಭಿಸುವAತೆ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಪೆರಾಜೆ ಗ್ರಾಮಸ್ಥರಾದ ಬಿ.ಎನ್. ಶಿವರಾಂ, ಡಿ.ಪಿ. ಪ್ರಕಾಶ್, ದೀನರಾಜು ದೊಡ್ಡಡ್ಕ, ಶರತ್ ಕುಮಾರ್ ಹಾಜರಿದ್ದರು.