ಸುAಟಿಕೊಪ್ಪ, ಮಾ. ೧೫: ಮಾದಾಪುರ ಗ್ರಾಮ ಪಂಚಾಯಿತಿಯ ವತಿಯಿಂದ ಆಯೋಜಿತವಾಗಿದ್ದ ಕೋಳಿ, ಕುರಿ, ಮೀನು ಹಾಗೂ ಸಂತೆ ಸುಂಕ ಎತ್ತುವಳಿಯ ಹರಾಜು ಪ್ರಕ್ರಿಯೆಯಲ್ಲಿ ಕೇವಲ ಕುರಿ ಮಾಂಸದ ಮಳಿಗೆ ಮಾತ್ರ ಹರಾಜುಗೊಂಡಿದ್ದು ಉಳಿದ ಕೋಳಿ, ಕುರಿ, ಮೀನು ಹಾಗೂ ಸಂತೆ ಸುಂಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂದೂಡಲಾಯಿತು.
ಮಾದಾಪುರ ಗ್ರಾಮ ಪಂಚಾಯಿತಿಯ ವಾರ್ಷಿಕ ಮಾಂಸದ ಮಳಿಗೆ ಮತ್ತು ಸುಂಕ ಎತ್ತುವಳಿ ಪ್ರಕ್ರಿಯೆಯು ಅಧ್ಯಕ್ಷ ಮನು ಬಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಹರಾಜು ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಡ್ಡುದಾರರು ಭಾಗವಹಿಸಿದ್ದರು. ಈ ವೇಳೆ ಕುರಿ ಮಾಂಸದ ಮಳಿಗೆಯ ಹರಾಜು ಪ್ರಕ್ರಿಯೆ ಸುಗಮವಾಗಿ ನಡೆಯಿತು.
ಆದರೆ ಕೋಳಿ, ಮೀನು, ಸುಂಕ ಎತ್ತುವಳಿ ಹರಾಜು ಪ್ರಕ್ರಿಯೆಯಲ್ಲಿ ವಿರೋಧ ವ್ಯಕ್ತವಾಯಿತು. ಸರ್ಕಾರ ನಿಗದಿಪಡಿಸಿದ ಬಿಡ್ಡಿನ ದರ ಹೆಚ್ಚಾಗಿದೆ. ಇದರಿಂದ ಜಿಎಸ್ಟಿ ಮೊತ್ತವು ಆಧಿಕವಾದ ಕಾರಣ ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಿಂದೇಟು ಹಾಕಿದರು. ಆ ಕಾರಣ ಪಿಡಿಓ ಬಾಲಕೃಷ್ಣ ರೈ ಅವರು ಈ ಹರಾಜು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಘೋಷಿಸಿದರು.
ಈ ವೇಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುರೇಶ್ ಭಾವೆ, ಸದಸ್ಯರಾದ ಕೆ. ಎತೀಫ್, ಪಿ.ಡಿ. ಅಂತೋನಿ, ಮಾನಸ, ನಿರೂಪ, ನೀರಜ, ಸೋಮಣ್ಣ, ಗಿರೀಶ್, ಶೀಲಾ, ದಮಯಂತಿ, ಜ್ಯೋತಿ, ಜೈಸನ್, ಬಿಡ್ಡುದಾರರು ಇದ್ದರು.