ಸೋಮವಾರಪೇಟೆ, ಮಾ. ೧೬: ಪ್ರತಿಯೊಬ್ಬರು ತಮ್ಮ ಸಂಪಾದನೆಯಲ್ಲಿ ಒಂದಷ್ಟು ಹಣವನ್ನು ಸಮಾಜಮುಖಿ ಕೆಲಸಗಳಿಗೆ ನೀಡಿದರೆ ಜೀವನದಲ್ಲಿ ಸಾರ್ಥಕತೆ ಸಿಗುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಅಭಿಪ್ರಾಯಿಸಿದರು.

ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ ಲಿಮಿಟೆಡ್ ಪಣಂಬೂರು, ಜಸ್ಟೀಸ್ ಕೆ.ಎಸ್.ಹೆಗ್ಗಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು ಮತ್ತು ಗ್ರಾಮಾಭಿವೃದ್ಧಿ ಮಂಡಳಿ ಕುಮಾರಳ್ಳಿ-ಬಾಚಳ್ಳಿ ಇವರ ವತಿಯಿಂದ ಶಾಂತಳ್ಳಿ ಜಿ.ಎಂ.ಪಿ. ಶಾಲಾ ಆವರಣದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಎಸಿಎಫ್ ಸಂಸ್ಥೆ ತಮ್ಮ ಲಾಭಾಂಶದಲ್ಲಿ ಒಂದಷ್ಟು ಹಣವನ್ನು ಸಮಾಜಸೇವೆಗೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಎಂಸಿಎಫ್ ಲಿಮಿಟೆಡ್‌ನ ಸಿಇಓ ನಿತೀನ್ ಎಂ. ಕಂಠಕ್ ಮಾತನಾಡಿ, ಎಂಸಿಎಫ್ ವತಿಯಿಂದ ಕೆ.ಎಸ್. ಹೆಗ್ಗಡೆ ಚಾರಿಟೇಬಲ್ ಆಸ್ಪತ್ರೆ ಸಹಯೋಗದೊಂದಿಗೆ ೫೫ಕ್ಕೂ ಹೆಚ್ಚು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿದ್ದೇವೆ. ೧೬ ಸಾವಿರ ಮಂದಿಗೆ ತಪಾಸಣೆ ಮಾಡಲಾಗಿದೆ. ೯ ಸಾವಿರ ಮಂದಿಗೆ ಉಚಿತವಾಗಿ ಗುಣಮಟ್ಟದ ಕನ್ನಡಕ ವಿತರಿಸಲಾಗಿದೆ. ೨ ಸಾವಿರ ಮಂದಿಗೆ ಕಣ್ಣಿನ ಶಸ್ತçಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗಿದೆ ಎಂದು ಹೇಳಿದರು. ಅನೇಕ ಬಡ ಮಂದಿಗೆ ಉಚಿತವಾಗಿ ಶ್ರವಣಸಾಧನವನ್ನು ನೀಡಲಾಗಿದೆ. ಮಂಗಳೂರಿನ ಕೆಲ ಸರ್ಕಾರಿ ಆಸ್ಪತ್ರೆಗಳಿಗೆ ಉಚಿತವಾಗಿ ಸಲಕರಣೆಗಳನ್ನು ನೀಡಿದ್ದೇವೆ. ಸರ್ಕಾರಿ ಶಾಲೆಗಳಿಗೆ ಗ್ರೀನ್ ಬೋರ್ಡ್, ಸ್ವಚ್ಚ ಕುಡಿಯುವ ನೀರಿನ ಘಟಕ ನೀಡಲಾಗಿದೆ ಎಂದರು. ಪ್ರತಿಯೊಬ್ಬರು ಆರೋಗ್ಯದ ಕಡೆಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ.ಲೋಕೇಶ್, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುಧೀರ್, ಜಿಎಂಪಿ ಎಸ್‌ಡಿಎಂಸಿ ಅಧ್ಯಕ್ಷ ಕೆ.ಸಿ.ಗುರುಪ್ರಸಾದ್, ಖಜಾಂಚಿ ರವಿ ಪ್ರಸಾದ್, ಎಂಸಿಎಫ್ ಸಿಎಫ್‌ಓ ಮುರುಳೀಧರ್, ಸಿಎಂಓ ಎಸ್. ಗಿರೀಶ್, ನೇತ್ರತಜ್ಞ ವಿಜಯ್ ಪೈ, ಡಾ.ಯೋಗೇಶ್, ಮಾಜಿ ಸೈನಿಕ ಜಿ.ಡಿ.ಪೂವಯ್ಯ ಇದ್ದರು. ಇದೇ ಸಂದರ್ಭ ಶಾಂತಳ್ಳಿ ಜಿ.ಎಂ.ಪಿ.ಶಾಲೆಗೆ ಎಂಸಿಎಫ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ, ಗ್ರೀನ್‌ಬೋರ್ಡ್ ಹಾಗು ಕುರ್ಚಿಗಳನ್ನು ನೀಡಲಾಯಿತು. ಸುಮಾರು ೩೦೦ ಮಂದಿ ನೇತ್ರ ತಪಾಸಣೆ ಮಾಡಿಸಿಕೊಂಡರು. ಉಚಿತ ಕನ್ನಡಕಗಳನ್ನು ಏಪ್ರಿಲ್ ೮ ರಂದು ಶಾಂತಳ್ಳಿ ಜಿಎಂಪಿ ಶಾಲೆಯಲ್ಲಿ ವಿತರಿಸಲಾಗುವುದು ಎಂದು ಅಯೋಜಕರು ತಿಳಿಸಿದರು.