ಟಿ ಹೆಚ್.ಜೆ. ರಾಕೇಶ್
ಮಡಿಕೇರಿ, ಮಾ. ೧೬: ಮಡಿಕೇರಿ ನಗರ ಅದೆಷ್ಟೋ ಸಮಸ್ಯೆಗಳ ನಡುವೆ ನರಳಾಡುತ್ತಿದೆ. ಒಂದೆಡೆ ಹದಗೆಟ್ಟ ರಸ್ತೆಗಳು, ಇನ್ನೊಂದೆಡೆ ಕಸ ವಿಲೇವಾರಿ ಸಮಸ್ಯೆ, ಮತ್ತೊಂದೆಡೆ ನೀರಿನ, ಸೂರಿನ ಸಮಸ್ಯೆ, ಮಳೆ ಬಂದರೆ ಸಂಭವಿಸುವ ಅಪಾಯ, ಬೀದಿ ದೀಪಗಳಿಲ್ಲ.. ಹೀಗೆ ಹೇಳುತ್ತಾ ಹೋದರೆ ನೂರಾರು ಸಮಸ್ಯೆಗಳನ್ನು ಮಂಜಿನನಗರಿ ಹೊದ್ದು ಮಲಗಿದೆ. ಸಮಸ್ಯೆಗಳನ್ನು ಪರಿಹರಿಸಬೇಕಾದ ಜನಪ್ರತಿನಿಧಿಗಳ ನಡುವಿನ ಭಿನ್ನಾಭಿಪ್ರಾಯ, ಗುಂಪುಗಾರಿಕೆ ಇಂದು ನಡೆದ ಸಭೆಯಲ್ಲಿ ಸ್ಫೋಟಗೊಂಡಿತು. ‘ನರಕ ಸಭೆ’ ಎಂಬ ಸಾರ್ವಜನಿಕರ ವ್ಯಂಗ್ಯದ ಮಾತಿಗೆ ಇಂದು ಅರ್ಥ ಬಂದAತೆ ಜನಪ್ರತಿನಿಧಿಗಳ ನಡೆ ಕಂಡುಬAದಿತು.
ಪರಸ್ಪರ ವಾಗ್ವಾದ, ಕ್ಷಮೆಯಾಚನೆಗೆ ಪಟ್ಟು, ಏಕವಚನ ಪ್ರಯೋಗ, ಗೊಂದಲ, ಗದ್ದಲದ ನಡುವೆ ನಗರಸಭೆ ಸದಸ್ಯರ ಸಭೆ ಕೋಲಾಹಲವನ್ನು ಸೃಷ್ಟಿಸಿ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದೆ. ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ಇಂದು ಆಯೋಜನೆಗೊಂಡಿದ್ದ ಕಾಮಗಾರಿಗೆ ಅನುಮೋದನೆ ನೀಡುವ ಸಭೆಯಲ್ಲಿ ಈ ರೀತಿಯ ಸನ್ನಿವೇಶ ಸೃಷ್ಟಿಯಾಯಿತು.
ತಾ. ೧೫ ರಂದು ಆಯೋಜನೆಗೊಂಡಿದ್ದ ಬಜೆಟ್ ಮಂಡನೆಗೆ ಆಗಮಿಸಿದ ಆಡಳಿತರೂಢ ಬಿಜೆಪಿಯ ಕೆಲ ಸದಸ್ಯರ ನಿರ್ಗಮನದ ಹಿನ್ನೆಲೆ ಶನಿವಾರ ಕಾಮಗಾರಿಗೆ ಅನುಮೋದನೆ ನೀಡುವ ಸಭೆಯನ್ನು ನಡೆಸಲಾಯಿತು. ನಿನ್ನೆ ಸಭಾತ್ಯಾಗ ಮಾಡಿದ ಸದಸ್ಯರು ಇಂದು ಸಭೆಗೆ ಆಗಮಿಸಿದರು. ಪ್ರಾರಂಭದಿAದಲೇ ವಾಗ್ವಾದಕ್ಕಿಳಿದ ಸದಸ್ಯರು ಪೌರಾಯುಕ್ತರ ವರ್ಗಾವಣೆ ವಿಳಂಬಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅಧ್ಯಕ್ಷೆ ಅನಿತಾ ಪೂವಯ್ಯ ವಿರುದ್ಧ ನೇರವಾಗಿ ಕಿಡಿಕಾರಿದರು.
ನಗರಸಭೆಯ ಎಲ್ಲಾ ೨೩ ಸದಸ್ಯರು ‘ಸಿಂಗಲ್ ಅಜೆಂಡಾ’ ಮೂಲಕ ನಿರ್ಣಯ ಮಾಡಿ ಪೌರಾಯುಕ್ತ ವಿಜಯ ಅವರ ವರ್ಗಾವಣೆಗೆ ಸಹಿ ಹಾಕಿ ನೀಡಿದ್ದೇವೆ. ಆದರೆ, ಈ ಸಂಬAಧ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ತಡ ಮಾಡಲಾಗುತ್ತಿದೆ ಎಂದು ಕೆಲ ಬಿಜೆಪಿ ಸದಸ್ಯರು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.
‘ಕಾಂಪ್ರಮೈಸ್ ಆಗಿದ್ದೀರ’
ನಿನ್ನೆ ಸಭೆಯಿಂದ ನಿರ್ಗಮಿಸಿದ ಕೆಲ ಸದಸ್ಯರಿಂದ ‘‘ಅಧ್ಯಕ್ಷರು ಕೆಲ ಸದಸ್ಯರ ಮಾತುಕೇಳಿ ಪೌರಾಯುಕ್ತರ ವರ್ಗಾವಣೆಯನ್ನು ವಿಳಂಬಗೊಳಿಸುತ್ತಿದ್ದಾರೆ. ಈ ಮೂಲಕ ‘ಕಾಂಪ್ರಮೈಸ್’ ಆಗಿದ್ದಾರೆ’’ ಎಂದು ನೇರ ಆರೋಪ ಮಾಡಿ ಕ್ಷಮೆಯಾಚನೆಗೂ ಆಗ್ರಹಿಸಿದ ಘಟನೆ ನಡೆಯಿತು.
ಸಭೆಗೆ ಪೌರಾಯುಕ್ತರ ಅವಶ್ಯಕತೆ ಇಲ್ಲ. ಯಾಕಾಗಿ ಮತ್ತೆ ಅವರನ್ನು ಕೂರಿಸಿಕೊಂಡು ಸಭೆ ಮಾಡುತ್ತಿದ್ದೀರ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್ ಪ್ರಶ್ನಿಸಿದರು. ಅಧಿಕಾರಿ ಇಲ್ಲದೆ ಸಭೆ ಹೇಗೆ ನಡೆಸುವುದು ಎಂದು ಅಧ್ಯಕ್ಷೆ ಅನಿತಾ ಪ್ರತ್ಯುತ್ತರ ನೀಡಿದರು. ಈ ವಿಚಾರ ವಿಕೋಪಕ್ಕೆ ತೆರಳಿ ಪರಸ್ಪರ ವಾಗ್ವಾದ ಸೃಷ್ಟಿಯಾಗಿದೆ.
ಅಧ್ಯಕ್ಷೆ ಅನಿತಾ ಪೂವಯ್ಯ ಪರ ವಹಿಸಿ ಮಾತನಾಡಿದ ಸದಸ್ಯ ಮಹೇಶ್ ಜೈನಿ, ಉಮೇಶ್ ಸುಬ್ರಮಣಿ, ಅರುಣ್ ಶೆಟ್ಟಿ ಅಧ್ಯಕ್ಷರು ಕ್ಷಮೆಯಾಚಿಸಿದರೆ ಸಭೆಯಿಂದ ನಾವುಗಳು ಹೊರ ನಡೆಯುವುದಾಗಿ ಎಚ್ಚರಿಸಿದರು.
ಇದೇ ಸಂದರ್ಭ ಅಧ್ಯಕ್ಷೆ ವಿರುದ್ಧ ಅತೃಪ್ತಗೊಂಡಿರುವ ಸದಸ್ಯರು ಮಾಜಿ ಶಾಸಕರ ನೇತೃತ್ವದಲ್ಲಿ ನಗರದ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ಕೆಲಸದಸ್ಯರ ಸಮ್ಮುಖದಲ್ಲಿ ‘ಕಾಂಪ್ರಮೈಸ್’ ಮಾಡಿಕೊಂಡು ‘ಸೆಟಲ್ಮೆಂಟ್’ ಆಗಿದೆ ಎಂದು ಅಧ್ಯಕ್ಷೆ ವಿರುದ್ಧ ನೇರವಾಗಿ ಆರೋಪ ಮಾಡಿದರು. ಇದನ್ನು ತಳ್ಳಿಹಾಕಿದ ಅನಿತಾ ಪೂವಯ್ಯ ಈ ರೀತಿ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರೂ ಸದಸ್ಯರು ಮಾತ್ರ ಅಧ್ಯಕ್ಷರ ವಿರುದ್ಧ ಕೆಂಡಾಮAಡಲರಾದರು.
ಕೆಲಸದಸ್ಯರ ಕಪಿಮುಷ್ಠಿಯಲ್ಲಿ ಸಿಲುಕಿದ ಅಧ್ಯಕ್ಷರು ವರ್ಗಾವಣೆಗೆ ಆಸಕ್ತಿ ತೋರದೆ ನಾಮಕವಸ್ಥೆಗೆ ಒಂದು ಪತ್ರವನ್ನು ಜಿಲ್ಲಾಧಿಕಾರಿ ಹಾಗೂ ಸರಕಾರಕ್ಕೆ ಕಳುಹಿಸಿದ್ದಾರೆ. ಇದರಿಂದ ಏನು ಪ್ರಯೋಜನವಾಗುವುದಿಲ್ಲ ಎಂದು ಹಿರಿಯ ಸದಸ್ಯರೊಬ್ಬರು ದೂರಿದರು.
ಏಕವಚನಗಳ ಪ್ರಯೋಗ
ಸಭೆಯಲ್ಲಿ ಏಕವಚನ ಪ್ರಯೋಗ, ಪರಸ್ಪರ ಕೆಸರೆರಚಾಟ ಕಂಡುಬAತು. ನಿನ್ನ ಯೋಗ್ಯತೆ ತಿಳಿದಿದೆ, ನಾಚಿಕೆ ಆಗಲ್ವ, ಮಾರ್ಯಾದೆ ಇಲ್ಲವೆ ಎಂಬ ಕಟುಶಬ್ದಗಳು ಮೊಳಗಿದವು.
ಎರಡೂವರೆ ವರ್ಷ ಒಬ್ಬರನ್ನು ನಿಲ್ಲಿಸಿಕೊಂಡು ಅಧಿಕಾರ ಮಾಡಿದ್ದು ಸಾಕು, ಯಾರೋ ಒಬ್ಬರಿಗಾಗಿ ಕಾಮಗಾರಿ ಅನುಮೋದನೆ ಮಾಡೋದು ಬೇಡ, ನಿನ್ನ ಯೋಗ್ಯತೆ ನನಗೆ ಗೊತ್ತಿಲ್ವ, ದುರುಪಯೋಗಗಳು ನಡೆದಿವೆ. ಅಭಿವೃದ್ಧಿ ಬಗ್ಗೆ ನಿನಗೆ ಕಾಳಜಿ ಇಲ್ಲ, ನಿಮ್ಮ ವಾರ್ಡ್ಗೆ ಅನುದಾನ ಪಡೆದುಕೊಂಡಿದ್ದೀರ, ನಮಗೆ ನೀಡಿಲ್ಲ, ನಿಮ್ಮ ಹಣೆಬರಹ ಗೊತ್ತು ಎಂಬೆಲ್ಲ ಪದಪುಂಜಗಳು ಪರಸ್ಪರ ಸದಸ್ಯರ ನಡುವೆ ವಿನಿಮಯವಾದವು. ಆಡಳಿತರೂಢ ಸದಸ್ಯರ ನಡುವಿನ ಈ ಕಿತ್ತಾಟ ವಿಪಕ್ಷದವರಿಗೆ ತಲೆನೋವಾಗಿ ಪರಿಣಮಿಸಿತು.
ಮಹಿಳಾ ಹಾಗೂ ಪುರುಷ ಸದಸ್ಯರ ನಡುವೆ ಏಕವಚನದಲ್ಲಿ ವಾಗ್ವಾದ ಉಂಟಾಯಿತು. ಪೌರಾಯುಕ್ತರ ವರ್ಗಾವಣೆ ವಿಳಂಬಕ್ಕೆ ಅಧ್ಯಕ್ಷರೆ ನೇರ ಕಾರಣ. ಅಭಿವೃದ್ಧಿ ಕಾಳಜಿಯ ಬಗ್ಗೆ ನಮ್ಮನ್ನು ಪ್ರಶ್ನಿಸುವವರು ಮೊದಲು ಅವರ ಬದ್ಧತೆಯನ್ನು ನೋಡಿಕೊಳ್ಳಬೇಕೆಂದು ಸದಸ್ಯರ ವಿರುದ್ಧ ತಿರುಗಿ ಬಿದ್ದರು.
ಪೌರಾಯುಕ್ತರ ವರ್ಗಾವಣೆಯನ್ನು ಮುಂದಿಟ್ಟು ಮಾತನಾಡುವ ಸಂದರ್ಭ ನಗರಸಭೆಯ ಚುನಾಯಿತ ಪ್ರತಿನಿಧಿಗಳಿಬ್ಬರು ನಗರಸಭೆಯ ಮಳಿಗೆಗಳನ್ನು ಬಾಡಿಗೆ ಪಡೆದುಕೊಂಡಿದ್ದಾರೆ. ಪ್ರತಿನಿಧಿಗಳು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅಧ್ಯಕ್ಷೆ ಪರ ನಿಂತಿದ್ದ ಸದಸ್ಯರು ದೂರಿದರು.
ಇದು ಕೆಲಕಾಲ ವಾಗ್ವಾದಕ್ಕೆ ಕಾರಣವಾಯಿತು. ಅದಲ್ಲದೆ ಅಧ್ಯಕ್ಷೆ ಅನಿತಾ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ನಡೆದಿಲ್ಲ ಎಂದು ಆಡಳಿತರೂಢ ಸ್ವಪಕ್ಷೀಯರೆ ಗದಾಪ್ರಹಾರ ನಡೆಸಿ ಪೇಚಿಗೆ ಸಿಲುಕಿಸುವಂತೆ ಮಾಡಿದರು.
ಕೊನೆಯಲ್ಲಿ ಸಭೆಯ ಉದ್ದೇಶದಂತೆ ಕಾಮಗಾರಿಗಳಿಗೆ ಮಂಜೂರಾತಿ ನೀಡಿ ನಗರಸಭೆ ಅನುದಾನದಡಿ ತಲಾ ರೂ. ೫ ಲಕ್ಷ ಹಾಗೂ ಎಸ್.ಎಫ್.ಸಿ. ಅಡಿ ರೂ. ೨.೫೦ ಲಕ್ಷ ಸೇರಿ ಒಟ್ಟು ರೂ. ೭.೫೦ ಲಕ್ಷ ಹಣವನ್ನು ಪ್ರತಿ ವಾರ್ಡ್ ಅಭಿವೃದ್ಧಿಗೆ ನೀಡಲು ಒಪ್ಪಿಗೆ ನೀಡಲಾಯಿತು.