ಕಣಿವೆ, ಮಾ. ೧೫: ಮಾರ್ಚ್ ಮೂರನೇ ವಾರದಲ್ಲಿ ಕಂಡು ಬರುತ್ತಿರುವ ಬಿಸಿಲ ತಾಪ ಭೂಮಿಯ ಮೇಲಿನ ಹಸಿರುಡುಗೆಯನ್ನು ಸುಟ್ಟು ಭಸ್ಮ ಮಾಡಿದೆ.
ಮಾತ್ರವಲ್ಲ, ಹರಿಯುವ ನದಿಯನ್ನು ಹಿಡಿದು ನಿಲ್ಲಿಸಿದೆ. ಹಾಗಾಗಿ ನೀರು ಮತ್ತು ಹಸಿರು ಮೇವಿಗಾಗಿ ಪರದಾಡುವ ಜಾನುವಾರುಗಳ ಗೋಳು ಹೇಳತೀರದಾಗಿದೆ. ಕುಶಾಲನಗರ ಮಡಿಕೇರಿ ರಾಷ್ಟಿçÃಯ ಹೆದ್ದಾರಿಯ ನಡುವಲ್ಲಿಯೇ ವಾಹನಗಳಿಗೆ ಸೈಡು ಬಿಡದೇ ಜಾನುವಾರುಗಳು ರಂಪಾಟ ಮಾಡುತ್ತಿವೆ.
ದಶಕಗಳಿಂದಲೂ ನೀಗದ ಜಾನುವಾರುಗಳ ಈ ಸಮಸ್ಯೆಗೆ ಸ್ಥಳೀಯ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯಾಗಲೀ, ಸಂಚಾರಿ ಪೊಲೀಸ್ ಇಲಾಖೆಯಾಗಲೀ, ಪಶುಪಾಲನಾ ಇಲಾಖೆಯಾಗಲೀ ಯಾರೊಬ್ಬರೂ ಕೂಡ ಪರಿಹಾರ ಕಂಡು ಹಿಡಿಯದಿರುವುದು ಮಾತ್ರ ಬೇಸರದ ಸಂಗತಿ.
ಹೆಚ್ಚುತ್ತಿರುವ ಅಪಘಾತಗಳು
ಬೀಡಾಡಿ ದನಗಳ ಹಾವಳಿಯಿಂದಾಗಿ ಹೆದ್ದಾರಿಯಲ್ಲಿ ಒಂದಲ್ಲ ಒಂದು ರೀತಿಯ ಅಪಘಾತಗಳು ಘಟಿಸುತ್ತಲೇ ಇದ್ದು, ಅಮಾಯಕ ದನಗಳ ಹಾಗೂ ಜನಗಳ ಅಮೂಲ್ಯ ಜೀವ ಹಾನಿಯಾಗುತ್ತಿದೆ.
ಹಾಲನ್ನು ಹಿಂಡಿ ಕೊಟ್ಟಿಗೆ ಯಿಂದ ರಸ್ತೆಗೆ ಓಡಿಸುವ ಗೋವುಗಳ ಪಾಲಕರ ವಿರುದ್ಧ ಕಠಿಣ ಕ್ರಮಗಳಾದಲ್ಲಿ ದನಗಳ ಹಾವಳಿಯನ್ನು ನಿಯಂತ್ರಿಸ ಬಹುದು ಎಂಬ ವಾದಗಳು ಕೇಳಿ ಬರುತ್ತಿವೆ.
ನೀರು ಆಹಾರದ ಕೊರತೆ
ಹೆದ್ದಾರಿಗಳಲ್ಲಿ ಸಾಗುವ ಬೀಡಾಡಿ ದನಗಳನ್ನು ಹಿಡಿದು ಕಟ್ಟೋಣವೆಂದರೆ ಗೋಶಾಲೆ ಇಲ್ಲ. ಜೊತೆಗೆ ಕಟ್ಟಬಹುದಾದ ಗೋವುಗಳಿಗೆ ಹುಲ್ಲು, ನೀರಿನ ಸಮಸ್ಯೆ ಹಾಗೂ ನಿರ್ವಹಣೆಯ ಬಗ್ಗೆ ಸ್ಥಳೀಯ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು ಕೈ ಚೆಲ್ಲಿದ ಮಾತುಗಳಾಡುತ್ತಾರೆ. ಇನ್ನಾದರೂ, ಗುಡ್ಡೆಹೊಸೂರು ಭಾಗದಲ್ಲಿ ಗೋವುಗಳನ್ನು ಸಾಕಿರುವಂತಹ, ಸಾಕಿದ ಗೋವುಗಳನ್ನು ಹೆದ್ದಾರಿ ಹಾಗೂ ಅರಣ್ಯಕ್ಕೆ ಓಡಿಸುವಂತಹ ಗೋ ಪಾಲಕರು ಬಿಸಿಲ ಧಗೆ ಕಡಿಮೆಯಾಗುವವರೆಗೂ ದನಗಳನ್ನು ಕಟ್ಟಿ ಇರಬಹುದಾದ ಒಣಹುಲ್ಲು ಹಾಕಿ ಕುಡಿಯುವ ನೀರು ಕೊಟ್ಟು ನಿರ್ವಹಿಸಬೇಕೆಂಬುದು ಮೂಕ ಪ್ರಾಣಿಗಳ ಪ್ರೇಮಿಗಳ ಒತ್ತಾಯವಾಗಿದೆ.