ಕಣಿವೆ, ಮಾ. ೧೫: ಸಾಮಾನ್ಯವಾಗಿ ಮಹಾಶಿವರಾತ್ರಿ ಹಬ್ಬದ ಬಳಿಕ ಮಳೆ ಸುರಿಯುವುದು ವಾಡಿಕೆ. ಆದರೆ ಈ ಬಾರಿ ಶಿವರಾತ್ರಿ ಕಳೆದು ಹಲವು ದಿನಗಳಾದರೂ ಕೂಡ ಕುಶಾಲನಗರ ತಾಲೂಕಿನಾದ್ಯಂತ ಮಳೆ ಬಂದಿಲ್ಲ.
ಹಾಗಾಗಿ ಸೂರ್ಯನ ಬಿಸಿಲ ತಾಪಕ್ಕೆ ಕಾದು ಕೆಂಪಾಗುತ್ತಿರುವ ಇಳೆಯಲ್ಲಿ ಇರುವ ಕೆರೆ ಕಟ್ಟೆಗಳು ನೀರಿಲ್ಲದೇ ಒಣಗುತ್ತಿವೆ. ಇದರಿಂದಾಗಿ ಜಲಚರಗಳು, ಪಕ್ಷಿಗಳು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ದಾಹ ಉಂಟಾಗುತ್ತಿದೆ.
ದಿನೇ ದಿನೇ ನೀರಿನ ಪ್ರಮಾಣ ಕ್ಷೀಣಿಸಿ ಒಣಗುತ್ತಿರುವ ಕೆರೆ ಕಟ್ಟೆಗಳಲ್ಲಿ ಇರುವಂತಹ ಜಲಚರಗಳು ಪೂರಕವಾದ ಆಮ್ಲಜನಕ ದೊರಕದೇ ಸಾಯುವಂತಹ ದುಸ್ಥಿತಿ ಕಂಡುಬರುತ್ತಿದೆ.
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಭಾರತಿ ಅವರ ಮನೆ ಮುಂದೆ ಇರುವಂತಹ ಬಳ್ಳೂರು ಕೆರೆ ನೀರಿಲ್ಲದೆ ಭಣಗುಡುತ್ತಿದೆ. ಅತ್ತೂರು ಮೀಸಲು ಅರಣ್ಯದ ತಗ್ಗು ಪ್ರದೇಶದ ಹಳ್ಳದ ಸಾಲಿನಿಂದ ಹರಿದು ಬರುವ ಮಳೆಯ ನೀರು ನಿಲುಗಡೆಗೊಂಡು ಕೆರೆಯ ರೂಪ ಪಡೆದಿರುವ ಈ ಕೆರೆ ಜನವಸತಿ ಬೆಳವಣಿಗೆಯಾಗದ ಸುಮಾರು ೪೦ ದಶಕಗಳ ಹಿಂದೆ ಕಾಡಾನೆಗಳ ದಾಹ ತೀರಿಸುವ ಆವಾಸ ತಾಣವಾಗಿತ್ತು.
ಕ್ರಮೇಣ ಜನ ವಸತಿ ಪ್ರದೇಶ ಹೆಚ್ಚಿದಂತೆಲ್ಲಾ ಈ ಕೆರೆ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿತು ಎಂಬುದು ಹಿರಿಯರು ಹೇಳುವ ಮಾತು.