ಮಡಿಕೇರಿ, ಮಾ. ೧೫: ಕೊಡಗು ಜಿಲ್ಲಾ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

೨೦೦೭ನೇ ಸಾಲಿನಲ್ಲಿ ಕಾಂತೂರು - ಮೂರ್ನಾಡು ನಿವಾಸಿ ಪದ್ಮಾವತಿ ಅವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮನೆಯ ಸಾಮಗ್ರಿಗಳನ್ನು ಒಡೆದು ಹಾಕಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಕುರಿತು ದೂರು ಸ್ವೀಕರಿಸಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ತಲೆಮರೆಸಿಕೊಂಡಿದ್ದ ಆರೋಪಿ ನಂಜರಾಯಪಟ್ಟಣ ಗ್ರಾಮ ನಿವಾಸಿಯಾದ ಹೆಚ್.ಯು. ಚಂದ್ರಶೇಖರ್ (೪೯) ಎಂಬವನನ್ನು ಬಂಧಿಸಲಾಗಿದೆ.

೨೦೦೨ನೇ ಸಾಲಿನಲ್ಲಿ ಮಣಿ ಎಂಬಾತ ತನ್ನ ಪತ್ನಿಗೆ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿರುವ ಕುರಿತು ದೂರು ಸ್ವೀಕರಿಸಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ತಲೆಮರೆಸಿಕೊಂಡಿದ್ದ ಆರೋಪಿ ಆರ್ಜಿ ಗ್ರಾಮ ನಿವಾಸಿ ಮಣಿ (೬೦) ಎಂಬುವವನನ್ನು ಬಂಧಿಸಲಾಗಿದೆ.

೨೦೦೨ನೇ ಸಾಲಿನಲ್ಲಿ ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಗುಹ್ಯ ಗ್ರಾಮದ ನಿವಾಸಿ ನೊಂದ ಮಹಿಳೆ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಅತ್ಯಾಚಾರ ಮಾಡಿ ಕೊಲೆ ಬೆದರಿಕೆ ಹಾಕಿರುವ ಕುರಿತು ದೂರು ಸ್ವೀಕರಿಸಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ತಲೆಮರೆಸಿಕೊಂಡಿದ್ದ ಆರೋಪಿ ದೊಡ್ಡಪುಲಿಕೋಟು ಗ್ರಾಮ ನಿವಾಸಿ ಪಣಿಎರವರ ಶಂಕರ (೫೨) ಎಂಬುವವನನ್ನು ಬಂಧಿಸಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ಉಪ ವಿಭಾಗ ಡಿಎಸ್‌ಪಿ ಎಸ್. ಮಹೇಶ್‌ಕುಮಾರ್, ಮಡಿಕೇರಿ ನಗರ ವೃತ್ತನಿರೀಕ್ಷಕ ಪಿ.ಕೆ. ರಾಜು, ಗ್ರಾಮಾಂತರ ವೃತ್ತ ನಿರೀಕ್ಷಕ ಯು. ಉಮೇಶ್, ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.