ಮಡಿಕೇರಿ, ಮಾ. ೧೫: ಕೊಡಗಿನ ಸಂಸ್ಕೃತಿ ಹಾಗೂ ಪ್ರಕೃತಿ ಸಂರಕ್ಷಣೆ ಯೊಂದಿಗೆ ಕೊಡಗಿನ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಲೋಕಸಭಾ ಚುನಾವಣೆಯ ಕೊಡಗು - ಮೈಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಹೇಳಿದರು.

ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ನಗರದ ಕಾವೇರಿ ಹಾಲ್‌ನಲ್ಲಿ ನಡೆದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಚುನಾವಣೆಗೆ ಹೊಸ ಅಭ್ಯರ್ಥಿಯಾದ್ದರಿಂದ ತನ್ನ ಸಾಮರ್ಥ್ಯ ಹಾಗೂ ಯೋಗ್ಯತೆ ಬಗ್ಗೆ ಎಲ್ಲರಲ್ಲೂ ಕುತೂಹಲ, ಅನುಮಾನ ಮೂಡುವುದು ಸಹಜ ಎಂದ ಅವರು ಕೊಡಗಿಗೂ ಮೈಸೂರಿನ ರಾಜರ ಸಂಸ್ಥಾನಕ್ಕೂ ಭಾವನಾತ್ಮಕ ಸಂಬAಧವಿದೆ ಎಂದು ನುಡಿದರು. ತಾನು ಬಾಲ್ಯದಲ್ಲಿ ಕೊಡಗಿನ ಬಹುತೇಕ ಪ್ರದೇಶಗಳಲ್ಲಿ ಓಡಾಡಿದ್ದೇನೆ. ಕೊಡಗಿಗೆ ವೀರಪರಂಪರೆಯ ಇತಿಹಾಸವಿದೆ. ಕೊಡಗನ್ನು ಕೊಡಗಾಗಿಯೆ ಉಳಿಸಿ ಕೊಳ್ಳುವುದು ತನ್ನ ಹೊಣೆಯಾಗಿದೆ. ಮಾನವ - ವನ್ಯಜೀವಿ ಸಂಘರ್ಷ ಪರಿಹಾರಕ್ಕೂ ತಯಾರಿದ್ದೇನೆ ಎಂದು ಯದುವೀರ್ ನುಡಿದರು.

‘ಕಾಂಗ್ರೆಸ್ ಕೆಲಸ ಮಾಡಲಿಲ್ಲ’

ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಮಾತನಾಡಿ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಹೆಸರಿನಲ್ಲಿ ರಾಜಕೀಯ ಮಾಡಿತೆ ಹೊರತು ಹಿಂದುಳಿದ ವರ್ಗಗಳ ಏಳಿಗೆಗೆ ಎಳ್ಳಷ್ಟು ಕೆಲಸ ಮಾಡಲಿಲ್ಲ ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಹಿಂದುಳಿದ ವರ್ಗಗಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಹಿಂದುಳಿದ ವರ್ಗಕ್ಕೆ ಸಂವಿಧಾನ ಬದ್ಧ ಸ್ಥಾನಮಾನ ನೀಡಿದ್ದು, ಕೂಡ ಬಿಜೆಪಿ ಸರ್ಕಾರ ಎಂದು ಹೇಳಿದರು.

(ಮೊದಲ ಪುಟದಿಂದ)

‘ಮೋದಿ ಗೆದ್ದರೆ ಮಾತ್ರ ಏಳಿಗೆ’

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಮಾತನಾಡಿ, ನರೇಂದ್ರ ಮೋದಿಯವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮಾತ್ರ ಭಾರತ ಮತ್ತಷ್ಟು ಏಳಿಗೆಯಾಗಲು ಸಾಧ್ಯ ಎಂದರು. ಮೋದಿಯವರ ಬಹುತೇಕ ಯೋಜನೆಗಳು ಹಿಂದುಳಿದವರು, ಶ್ರಮಿಕರು, ಶೋಷಿತರಿಗಾಗಿ ರೂಪಿಸಲ್ಪಟ್ಟಿವೆ ಎಂದರಲ್ಲದೇ ಎಲ್ಲಾ ವರ್ಗಗಳ ಬಗ್ಗೆ ಕಾಳಜಿ ಹೊಂದಿದ್ದ ಮೈಸೂರು ರಾಜವಂಶದ ಕುಡಿ ನಮ್ಮೆ ಅಭ್ಯರ್ಥಿಯಾಗಿರುವುದು ಹೆಮ್ಮೆಯ ವಿಚಾರವೆಂದರು.

‘ರಾಜರ ಕೊಡುಗೆ ಅಪಾರ’

ಮಾಜಿ ಸಚಿವ ರಾಮದಾಸ್ ಮಾತನಾಡಿ, ಈ ದೇಶದ ಪ್ರಗತಿಗೆ ಮೈಸೂರಿನ ರಾಜವಂಶ ಅಪಾರ ಕೊಡುಗೆಗಳನ್ನು ನೀಡಿದ್ದು, ಅವುಗಳನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ನುಡಿದರು. ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳ ಪರವಾಗಿ ನಿಂತಿದೆ ಎಂದು ಪ್ರತಿಪಾದಿಸಿದರು.

‘ಅಪಪ್ರಚಾರಕ್ಕೆ ಕಿವಿಕೊಡಬೇಡಿ’

ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಮಾತನಾಡಿ, ರಾಜಮನೆತನದವರು ಚುನಾವಣೆಗೆ ನಿಂತಿದ್ದಾರೆ. ಅವರು ಜನರ ಕೈಗೆ ಸಿಗುವುದಿಲ್ಲ ಎಂಬಿತ್ಯಾದಿ ಅಪಪ್ರಚಾರ ನಡೆಯುತ್ತಿದ್ದು, ಅದಕ್ಕೆ ಯಾರೂ ಕಿವಿಕೊಡಬಾರದು. ಯದುವೀರ್ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.

‘ಮೋದಿ ಮತ್ತೆ ಪ್ರಧಾನಿಯಾಗಬೇಕು’

ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ತಾನು ಕೂಡ ಆಕಾಂಕ್ಷಿಯಾಗಿದ್ದೆ; ತನ್ನ ಹೆಸರು ದೆಹಲಿಗೂ ತಲುಪಿತ್ತು. ಕೊನೆಗೆ ಮೈಸೂರು ರಾಜವಂಶಸ್ಥ ಯದುವೀರ್ ಅವರನ್ನು ಪಕ್ಷದಿಂದ ಅಭ್ಯರ್ಥಿಯಾಗಿ ಘೋಷಿಸಲಾಗಿದ್ದು, ಅವರನ್ನು ಅತೀ ಹೆಚ್ಚು ಮತಗಳ ಅಂತರದಿAದ ಗೆಲ್ಲಿಸುತ್ತೇವೆ. ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಮಾತನಾಡಿ, ಹಿಂದುಳಿದ ವರ್ಗಗಳು ಬಲಿಷ್ಠಗೊಂಡರೆ ಬಿಜೆಪಿ ಅಭ್ಯರ್ಥಿಯ ಗೆಲುವು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ರುರವೀಂದ್ರ ರಾಜ್ಯಾಧ್ಯಕ್ಷರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿ, ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಕಾರ್ಯಕರ್ತರು ಶ್ರಮಿಸುವುದರೊಂದಿಗೆ ನರೇಂದ್ರ ಮೋದಿಯವರ ಕೈ ಬಲಪಡಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಹಾಗೂ ಕೊಡಗು ಜಿಲ್ಲಾ ಬಿಜೆಪಿಯಿಂದ ಯದುವೀರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಘು ಕೌಟಿಲ್ಯ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಸದಸ್ಯರಾದ ಸುನಿಲ್ ಸುಬ್ರಮಣಿ, ಎಸ್.ಜಿ. ಮೇದಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ, ಮಾಜಿ ಅಧ್ಯಕ್ಷರುಗಳಾದ ರಾಬಿನ್ ದೇವಯ್ಯ, ಭಾರತೀಶ್, ಮನುಮುತ್ತಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ರವಿಕುಶಾಲಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್, ಓಬಿಸಿ ಮೋರ್ಚಾ ಮಾಜಿ ಅಧ್ಯಕ್ಷ ಆನಂದ ರಘು, ಬಿಜೆಪಿ ಶಿಸ್ತು ಸಮಿತಿ ಪ್ರಮುಖರಾದ ರೀನಾ ಪ್ರಕಾಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ, ಪಕ್ಷದ ಪ್ರಮುಖರಾದ ನಾರಾಯಣ, ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಉಸ್ತುವಾರಿ ವಿಠಲ್ ಪೂಜಾರಿ ಪ್ರಾಸ್ತಾವಿಕ ನುಡಿಯಾಡಿದರು. ತ್ರಿಷಾ ಕಾವೇರಪ್ಪ ಪ್ರಾರ್ಥಿಸಿ, ಸತೀಶ್‌ಕುಂದರ್, ಭವ್ಯಶ್ರೀ ನಿರೂಪಿಸಿದರು. ಎಸ್.ಎನ್. ರಘು ಸ್ವಾಗತಿಸಿ, ರಂಜಿತ್ ವಂದಿಸಿದರು. ಸಮಾವೇಶಕ್ಕೂ ಮೊದಲು ನಗರದ ಹಳೇ ಖಾಸಗಿ ಬಸ್ ನಿಲ್ದಾಣದಿಂದ ಕಾವೇರಿ ಹಾಲ್‌ವರೆಗೆ ಮೆರವಣಿಗೆ ನಡೆಯಿತು. ಸಮಾವೇಶಕ್ಕೆ ಆಗಮಿಸುವ ಮುನ್ನ ಯದುವೀರ್ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಗುಡ್ಡೆಮನೆ ಅಪ್ಪಯ್ಯಗೌಡ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಸುಂಟಿಕೊಪ್ಪ : ಸುಂಟಿಕೊಪ್ಪ ಬಿಜೆಪಿ ಕಾರ್ಯಕರ್ತರು ಯದುವೀರ್‌ಗೆ ಸ್ವಾಗತ ಕೋರಿದರು. ಪಟ್ಟಣದ ಕನ್ನಡ ವೃತ್ತದಲ್ಲಿ ಸ್ವಾಗತ ಕೋರಿದ ವೇಳೆ ಸುಂಟಿಕೊಪ್ಪ ನಗರ ಬಿಜೆಪಿ ಅಧ್ಯಕ್ಷ ಧನುಕಾವೇರಪ್ಪ ಮತ್ತು ಸೋಮವಾರಪೇಟೆ ಮಂಡಲ ಒಬಿಸಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಡಾ.ಶಶಿಕಾಂತರೈ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕರನಾರಾಯಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ನಿರ್ದೇಶಕಿ ಲೀಲಾವತಿ, ಬಿಜೆಪಿ ಹಿರಿಯ ಮುಖಂಡ ವೈ.ಎಂ.ಕರುAಬಯ್ಯ, ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಬಿ.ಕೆ.ಪ್ರಶಾಂತ್, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ವಿಘ್ನೇಶ್, ಸುಂಟಿಕೊಪ್ಪ ಗ್ರಾ.ಪಂ. ಸದಸ್ಯ ಬಿ.ಎಂ.ಸುರೇಶ್, ಕೆದಕಲ್ ಗ್ರಾ.ಪಂ.ಸದಸ್ಯೆ ಪಾರ್ವತಿ ಸೋಮಯ್ಯ, ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಬಿ.ಐ.ಭವಾನಿ, ಸೋಮಯ್ಯ, ಗ್ರಾ.ಪಂ. ಮಾಜಿಉಪಾಧ್ಯಕ್ಷ ಬಿ.ಕೆ.ಮೋಹನ್,೭ನೇಹೊಸಕೋಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ರಮೇಶ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.