ಮಡಿಕೇರಿ, ಮಾ. ೧೫: ನಗರದಲ್ಲಿ ಇಂದು ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಎಲ್ಲ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಸಮಾವೇಶದಲ್ಲಿ ವಿಶೇಷವಾಗಿ ಪಾಲ್ಗೊಂಡ ಮುಂದಿನ ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ಯದುವೀರ್ ಅವರ ಉಪಸ್ಥಿತಿಯಲ್ಲಿ ಜಿಲ್ಲೆಯ ಮಾಜಿ ಬಿಜೆಪಿ ಶಾಸಕರುಗಳು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಪಕ್ಷದ ಹಿರಿಯ ಪದಾಧಿಕಾರಿಗಳು ಒಂದಾಗಿ ಸೇರಿ ಮುಂದಿನ ಚುನಾವಣೆಯನ್ನು ಜೊತೆಯಲ್ಲಿ ಎದುರಿಸುವ ಬಗ್ಗೆ ಕಾರ್ಯಕರ್ತರಿಗೆ ಮನವರಿಕೆ ಮಾಡಿದರು. ಲೋಕಸಭಾ ಚುನಾವಣಾ ಅಭ್ಯರ್ಥಿ ಆಕಾಂಕ್ಷಿ, ಮಾಜಿ ಸಚಿವ ಹಾಗೂ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನಸಭೆಯ ಮಾಜಿ ಸ್ಪೀಕರ್ ಹಾಗೂ ವೀರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಜಿ. ಬೊಪಯ್ಯ, ಮಾಜಿ ಎಂಎಲ್ಸಿ ಎಸ್.ಜಿ. ಮೇದಪ್ಪ, ಮಾಜಿ ಎಂಎಲ್ಸಿ ಎಂ.ಪಿ. ಸುನಿಲ್ ಸುಬ್ರಮಣಿ, ಹಾಲಿ ಎಂಎಲ್ಸಿ ಎಂ.ಪಿ. ಸುಜಾ ಕುಶಾಲಪ್ಪ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ರೀನಾ ಪ್ರಕಾಶ್, ಹಾಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಬಿಜೆಪಿಯ ಪ್ರಮುಖ ಪದಾಧಿಕಾರಿಗಳು ಸೇರಿದಂತೆ ಹಿರಿಯ (ಮೊದಲ ಪುಟದಿಂದ) ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಈ ಸಂದರ್ಭ `ಶಕ್ತಿ`ಯೊಂದಿಗೆ ಮಾತನಾಡಿದ ಅಪ್ಪಚ್ಚು ರಂಜನ್ ಅವರು, ತಾನು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದರೂ ಇದೀಗ ಯದುವೀರ್ ಅವರ ಪ್ರವೇಶದಿಂದ ಪೂರ್ಣ ಪ್ರಮಾಣದಲ್ಲಿ ಶ್ರಮಿಸುವುದಾಗಿ ತಿಳಿಸಿದರು. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಬೋಗಸ್ ರೀತಿಯಾಗಿದ್ದು , ಜಿಲ್ಲೆಯಲ್ಲಿ ಎಲ್ಲ ಫಲಾನುಭವಿಗಳಿಗೆ ಅದರ ಫಲ ದೊರಕುತ್ತಿಲ್ಲ ಎಂಬುದು ಎಲ್ಲೆಡೆಯ ಕೂಗು ಎಂದರು. ಬಿಜೆಪಿಯ ಅವಧಿಯಲ್ಲಿ ನಿಗದಿಯಾಗಿದ್ದ ಕೆಲಸಗಳಿಗೆ ಇದೀಗ ಭೂಮಿ ಪೂಜೆಗಳು ನಡೆಯುತ್ತಿದ್ದು ಜಿಲ್ಲೆಯಲ್ಲಿ ಅಂದಾಜು ೭೦ ಕೋಟಿ ರೂಪಾಯಿ ಗುತ್ತಿಗೆದಾರರಿಗೆ ಪಾವತಿ ಮಾಡಲು ಬಾಕಿ ಇದೆ ಎಂದು ಸರ್ಕಾರದ ವಿರುದ್ಧ ಆರೋಪ ಹೊರಿಸಿದರು.
ಕೆ. ಜಿ. ಬೋಪಯ್ಯ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಎಲ್ಲರ ನಿರೀಕ್ಷೆ ಪ್ರತಾಪ್ ಸಿಂಹ ಅವರದ್ದು ಎಂದಿದ್ದರೂ ಕೂಡ, ಬೇರೆ ಬೇರೆ ಆಯಾಮಗಳಲ್ಲಿ ಮೈಸೂರಿನ ಅರಸರನ್ನು ಬಿಜೆಪಿಯ ವರಿಷ್ಠರು ಆಯ್ಕೆ ಮಾಡಿದ್ದು ಭಾರತದ ಏಕತೆ ಮತ್ತು ಅಖಂಡತೆಗೆ ಬಿಜೆಪಿಯ ಕೇಂದ್ರ ಸರಕಾರ ಮುಂದೆಯೂ ಆಡಳಿತ ನಡೆಸುವ ಅವಶ್ಯಕತೆ ಇದೆ ಎಂದರು. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಚುನಾವಣೆಗೆ ಸೀಮಿತವೇ ಹೊರತು ರಾಷ್ಟçದ ಹಿತ ಚಿಂತನೆಗೆ ಬಂದಾಗ ಮತದಾರ ಮೋದಿ ಅವರನ್ನು ಬಯಸುತ್ತಾರೆ ಎಂದರು.
ಎಂ.ಪಿ.ಸುನಿಲ್ ಸುಬ್ರಮಣಿ ಅವರು ಮಾತನಾಡಿ, ಬಿಜೆಪಿಯ ಎಲ್ಲ ನಾಯಕರು ಒಗ್ಗಟ್ಟಾಗಿ ಈ ಬಾರಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರಲ್ಲದೆ ಜಿಲ್ಲೆಯಲ್ಲಿ ಎಲ್ಲ ಮತದಾರರು ರಾಷ್ಟçದಲ್ಲಿ ಮೋದಿ ಸರಕಾರ ಮತ್ತೆ ಬರಬೇಕೆಂದು ನಿರೀಕ್ಷೆಯಲ್ಲಿದ್ದಾರೆ ಎಂದರು. ಎಂಎಲ್ಸಿ ಎಂ.ಪಿ. ಸುಜಾ ಕುಶಾಲಪ್ಪ ಅವರು ಮಾತನಾಡಿ,ನಮ್ಮ ಕ್ಷೇತ್ರಕ್ಕೆ ಅತ್ಯಂತ ಸಭ್ಯ ಹಾಗೂ ಒಳ್ಳೆಯ ಅಭ್ಯರ್ಥಿ ಪಕ್ಷಕ್ಕೆ ಲಭ್ಯವಾಗಿದ್ದು, ಮಹಾರಾಜರೊಬ್ಬರು ನೇರವಾಗಿ ಜನರ ಸೇವೆಗೆ ಲಭ್ಯವಾಗಲಿದ್ದಾರೆ ಎಂದರು.