ಕುಶಾಲನಗರ, ಮಾ. ೧೩: ಕುಶಾಲನಗರ ತಾಲೂಕು ಆಡಳಿತದ ಆಶ್ರಯದಲ್ಲಿ ಮನೆ ನಿವೇಶನ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಡೆಯಿತು.

ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕಿನಾದ್ಯಂತ ೧೬೭ ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದರು.

ನಂತರ ಮಾತನಾಡಿದ ಅವರು, ಸ್ವಂತ ಮನೆ ಎನ್ನುವುದು ಎಲ್ಲರ ಜೀವನದಲ್ಲಿ ಅತಿ ದೊಡ್ಡ ಕನಸು. ವಿವಿಧ ಯೋಜನೆಗಳಡಿ ಫಲಾನುಭವಿಗಳು ಹಕ್ಕುಪತ್ರ ಪಡೆದುಕೊಳ್ಳಲು ಅವಕಾಶವಿದೆ. ಸರಕಾರ ಯಾವುದೇ ಇರಲಿ, ಅಗತ್ಯ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ರಾಜಕೀಯ ಮಾಡಬಾರದು. ಚುನಾವಣಾ ಸಂದರ್ಭದಲ್ಲಿ ಸವಲತ್ತುಗಳನ್ನು ವಿತರಿಸಿ ಮತ ಕೇಳುವ ಪರಿಪಾಠ ನಿಲ್ಲಬೇಕಿದೆ ಎಂದರು.

ಗ್ಯಾರೆAಟಿ ಯೋಜನೆಗಳ ಅನುಷ್ಠಾನ ಸಮಿತಿ ಕುಶಾಲನಗರ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್, ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಮಾತನಾಡಿದರು.

ತಮ್ಮ ಕಚೇರಿ ಮೂಲಕ ಪಾರದರ್ಶಕವಾಗಿ ಫಲಾನುಭವಿಗಳ ಆಯ್ಕೆ ನಡೆದಿದೆ ಎಂದು ಮಾಹಿತಿ ಒದಗಿಸಿದರು

ಇದೇ ಸಂದರ್ಭ ಹಕ್ಕುಪತ್ರ ಸೇರಿದಂತೆ ಹಾಡಿ ನಿವಾಸಿಗಳಿಗೆ ಜಾತಿ ಪ್ರಮಾಣ ಪತ್ರ ಹಾಗೂ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ ಮಹಿಳೆಯರಿಗೆ ಕೊಡಮಾಡುವ ಟೈಲರಿಂಗ್ ಮಿಷನ್‌ಗಳನ್ನು ವಿತರಣೆ ಮಾಡಲಾಯಿತು.

ವೇದಿಕೆಯಲ್ಲಿ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗೋವಿಂದಪ್ಪ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಮಹಾದೇವಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಸಂಜೀವಯ್ಯ, ಕಾಂಗ್ರೆಸ್ ಮುಖಂಡರಾದ ಪ್ರಮೋದ್ ಮುತ್ತಪ್ಪ, ಮಂಜುನಾಥ್ ಗುಂಡೂರಾವ್, ಜೋಸೆಫ್ ವಿಕ್ಟರ್ ಸೋನ್ಸ್, ನಟೇಶ್ ಗೌಡ, ಜಿಪಂ ಮಾಜಿ ಸದಸ್ಯೆ ಸುನಿತಾ, ಲ್ಯಾಂಪ್ಸ್ ಅಧ್ಯಕ್ಷ ಅರುಣ್ ರಾವ್ ಮತ್ತಿತರರು ಇದ್ದರು.