ಮುಳ್ಳೂರು, ಮಾ. ೧೩: ಶನಿವಾರಸಂತೆ ಸಮಿಪದಲ್ಲಿರುವ ಅರಣ್ಯ ಇಲಾಖೆ ಕಚೇರಿ ಬಳಿಯಿಂದ ದುಂಡಳ್ಳಿ, ಬಿಳಹ ಮಾರ್ಗವಾಗಿ ಹಾಸನ ಜಿಲ್ಲೆಯ ಯಸಳೂರು ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ೮ ಕಿ.ಮೀ.ದೂರದ ಲೋಕೋಪಯೋಗಿ ಇಲಾಖೆಗೆ ಸೇರಿದ ಕಿರಿದಾದ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಲೋಕೋಪಯೋಗಿ ಇಲಾಖೆಯಿಂದ ೯ ಕೋಟಿ ೮೫ ಲಕ್ಷ ಅನುದಾನ ಬಿಡುಗಡೆಗೊಂಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಆದರೆ ಲೋಕೋಪಯೋಗಿ ಇಲಾಖೆಯು ರಸ್ತೆ ಅಗಲೀಕರಣ ಕಾಮಗಾರಿ ಸಂದರ್ಭ ರಸ್ತೆ ಬದಿಯಲ್ಲಿರುವ ಖಾಸಗಿಯವರಿಗೆ ಸೇರಿದ ಜಮೀನು ಸೇರಿದಂತೆ ಅರಣ್ಯ ಇಲಾಖೆಗೆ ಸೇರಿದ ಮರಗಳು ಮತ್ತು ಖಾಸಗಿಯವರಿಗೆ ಸೇರಿದ ಮರಗಳನ್ನು ತೆರವುಗೊಳಿಸುವ ಕುರಿತಾಗಿ ಸರ್ವೆ ಮಾಡಿ ಒಟ್ಟು ೨೦೬ ಮರಗಳನ್ನು ಕಡತಲೆ ಮಾಡಬೇಕಾಗುತ್ತದೆ ಎಂಬ ವರದಿ ನೀಡಿದ್ದು, ಈ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕುರಿತಾಗಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ಮಂಗಳವಾರ ಶನಿವಾರಸಂತೆ ಅರಣ್ಯ ಇಲಾಖೆ ಕಚೇರಿಯಲ್ಲಿ ಸಾರ್ವಜನಿಕ ಪ್ರಮುಖರ ಸಭೆ ಏರ್ಪಡಿಸಲಾಗಿತ್ತು. ಕೊಡಗು ಅರಣ್ಯ ಉಪ ಸಂರಕ್ಷಣಾಧಿಕಾರಿ ಭಾಸ್ಕರ್, ತಾಲೂಕು ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ನಾಯಕ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಬಹುತೇಕ ಸಾರ್ವಜನಿಕ ಪ್ರಮುಖರು ದುಂಡಳ್ಳಿಯಿAದ ಯಸಳೂರು ಮಾರ್ಗವಾಗಿ ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತುಂಬಾ ಕಿರಿದಾಗಿದೆ. ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ಭಾಗದ ಜನರು ಇದೇ ರಸ್ತೆಯನ್ನು ಅವಲಂಬಿಸುತ್ತಾರೆ. ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಗೊಳಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಮತ್ತೆ ಕೆಲವರು ರಸ್ತೆಯನ್ನು ಕಿರಿದಾದ ಕಡೆಯಲ್ಲಿ ಮಾತ್ರ ಅಗಲೀಕರಣಗೊಳಿಸಿ, ಖಾಸಗಿಯವರಿಗೆ ಸೇರಿದ ಜಮೀನು ತೆರವು ಮತ್ತು ಮರ ತೆರವುಗೊಳಿಸುವ ಸಂದರ್ಭ ಸೂಕ್ತ ಪರಿಹಾರ ನೀಡುವಂತೆ ಉಭಯ ಇಲಾಖೆಗಳು ಅಧಿಕಾರಿಗಳಿಗೆ ಮನವಿ ಮಾಡಿದರು. ಸಾರ್ವಜನಿಕರ ಅಭಿಪ್ರಾಯವನ್ನು ಆಲಿಸಿದ ಅರಣ್ಯ ಉಪಸಂರಕ್ಷಣಾಧಿಕಾರಿ ಭಾಸ್ಕರ್ ರಸ್ತೆ ಬದಿಯಲ್ಲಿರುವ ಮರಗಳು ಅರಣ್ಯ ಇಲಾಖೆಗೆ ಸೇರುತ್ತವೆ. ಒಂದು ವೇಳೆ ಖಾಸಗಿ ವ್ಯಕ್ತಿಗಳಿಗೆ ಸೇರಿದ ರೆಡೀಮ್ ಪಹಣೆ ಹೊಂದಿದ್ದರೆ ಅಂಥವರಿಗೆ ಅರಣ್ಯ ಇಲಾಖೆ ಪರಿಹಾರ ನೀಡುವ ಕುರಿತಾಗಿ ಪರಿಶೀಲನೆ ನಡೆಸುತ್ತದೆ ಎಂದು ಭರವಸೆ ನೀಡಿದರು. ಸಭೆಯಲ್ಲಿ ಕೆಲವು ಪರಿಸರವಾದಿಗಳು ರಸ್ತೆ ಅಭಿವೃದ್ಧಿ ಸಂದರ್ಭ ಮರಗಳನ್ನು ತೆರವುಗೊಳಿಸಬಾರದು ಎಂದು ಲಿಖಿತವಾಗಿ ಅರ್ಜಿ ಸಲ್ಲಿಸಿದರು. ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ನಾಯಕ್ ಮಾತನಾಡಿದರು.
ಸಭೆಯಲ್ಲಿ ಸಹಾಯಕ ಸಂರಕ್ಷಣಾಧಿಕಾರಿ ಗೋಪಾಲ್, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ವಿಜಯ್ಕುಮಾರ್, ಶನಿವಾರಸಂತೆ ಆರ್ಎಫ್ಒ ಗಾನಶ್ರೀ ಅರಣ್ಯ ಇಲಾಖೆ ಅಧಿಕಾರಿಗಳು, ಸಾರ್ವಜನಿಕ ಪ್ರಮುಖರು ಹಾಜರಿದ್ದರು.