ಮಡಿಕೇರಿ, ಮಾ. ೧೨: ಮಡಿಕೇರಿ ತಾಲೂಕಿನ ಬಲ್ಲಮಾವಟಿ ಗ್ರಾಮದಲ್ಲಿರುವ ನೇತಾಜಿ ಕೇಂದ್ರ ವಿದ್ಯಾ ಸಂಸ್ಥೆ ಮತ್ತೊಂದು ಖಾಸಗಿ ಸಂಸ್ಥೆಗೆ ಪರಭಾರೆ ಮಾಡುವ ವಿಚಾರಕ್ಕೆ ಸ್ಥಳ ದಾನಿಗಳಾದ ಚಂಗೇಟಿರ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಚಂಗೇಟಿರ ಕುಟುಂಬದ ಆಡಳಿತ ಮಂಡಳಿಯ ಸದಸ್ಯ ಮತ್ತು ಕುಟುಂಬಸ್ಥರಾದ ಚಂಗೇಟಿರ ಲಕ್ಷö್ಮಣ್ ಮಾತನಾಡಿ, ೧೯೬೫ನೇ ಇಸವಿಯಲ್ಲಿ ಬಲ್ಲಮಾವಟಿ ಮತ್ತು ಪೇರೂರು ಗ್ರಾಮದ ನಿವಾಸಿಗಳಾದ ಚಂಗೇಟಿರ ಕುಟುಂಬಸ್ಥರು ಮಕ್ಕಳ ಭವಿಷ್ಯ ಹಿನ್ನೆಲೆ ಸ್ಥಳ ದಾನ ಮಾಡಿದ್ದರು. ಆದರೆ, ಇಂದು ಪ್ರೌಢಶಾಲೆಯಲ್ಲಿ ಮಕ್ಕಳಿಲ್ಲ ಎಂದು ನೆಪವೊಡ್ಡಿ ಬೇರೆ ಸಂಸ್ಥೆಗೆ ಪರಭಾರೆಗೆ ಮುಂದಾಗಿದ್ದಾರೆ. ಇದು ಸರಿಯಲ್ಲ. ಪ್ರಸ್ತುತವಿರುವ ಆಡಳಿತ ಮಂಡಳಿಗೆ ಶಾಲೆ ನಡೆಸಲು ಸಾಧ್ಯವಾಗದಿದ್ದಲ್ಲಿ ಇಲ್ಲಿನ ಸ್ಥಳೀಯ ಗ್ರಾಮಸ್ಥರು, ದಾನಿಗಳ ಸಹಕಾರದಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಕುಟುಂಬಸ್ಥರಾದ ಕುಶಾಲಪ್ಪ ಮಾತನಾಡಿ, ಇದೇ ರೀತಿ ಈ ಹಿಂದೆಯೂ ಒಮ್ಮೆ ಪರಭಾರೆ ಮಾಡಲು ಮುಂದಾದ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಗೆ ಪತ್ರ ಬರೆದು ತಡೆಹಿಡಿಯಲಾಗಿತ್ತು. ಆದರೆ, ಈ ಬಾರಿ ಸ್ಥಳ ದಾನಿಗಳಿಗೆ, ಹಳೆ ವಿದ್ಯಾರ್ಥಿ ಸಂಘಕ್ಕೆ, ಗ್ರಾಮಸ್ಥರಿಗೆ ಗಮನಕ್ಕೆ ಬರದಂತೆ ಪರಭಾರೆಗೆ ಮುಂದಾಗಿದ್ದಾರೆ. ಈ ಸಂಬAಧ ಪತ್ರ ಬರೆದ ಸಂದರ್ಭ ಪ್ರತಿಕ್ರಿಯಿಸಿರುವ ಆಡಳಿತ ಮಂಡಳಿ, ಶಾಲೆಯಲ್ಲಿ ಮಕ್ಕಳಿಲ್ಲ. ಕಟ್ಟಡ ದುಸ್ಥಿತಿಯಲ್ಲಿದೆ ಎಂದು ಸಬೂಬು ನೀಡಿದ್ದಾರೆ. ಆದರೆ, ಇದೇ ಶಾಲೆಯಲ್ಲಿ ಉತ್ತರ ಭಾರತದ ಸುಮಾರು ೨೫ಕ್ಕೂ ಅಧಿಕ ಕಾರ್ಮಿಕರಿಗೆ ತಂಗಲು ಶಾಲಾ ಆಡಳಿತ ಮಂಡಳಿ ಅವಕಾಶ ನೀಡಿದೆ. ಇದು ಯಾವ ಆಧಾರದಲ್ಲಿ ಎಂದು ಪ್ರಶ್ನಿಸಿದ ಅವರು, ಇಂತಹ ಘಟನೆಗಳ ವಿರುದ್ಧ ಸಂಬAಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಾಲೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಆಡಳಿತ ಮಂಡಳಿ ಹೇಳುತ್ತಿದೆ. ಆದರೆ, ಶಾಲೆಯ ಆಸ್ತಿಯಲ್ಲಿ ೫ ಎಕರೆಯಷ್ಟು ಕಾಫಿ, ಮೆಣಸು ಬೆಳೆ ಬೆಳೆಯಲಾಗುತ್ತದೆ. ಆದರೂ ಶಾಲೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ಮಾತು ಎಷ್ಟು ಸತ್ಯ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಚಂಗೇಟಿರ ಕುಟುಂಬದ ಆಡಳಿತ ಮಂಡಳಿ ಅಧ್ಯಕ್ಷ ಸಿ.ಎ.ಜೋಯಪ್ಪ, ಖಜಾಂಚಿ ಅಪ್ಪಯ್ಯ, ಸದಸ್ಯ ರವೀಂದ್ರ ಇದ್ದರು.