ಗೋಣಿಕೊಪ್ಪಲು, ಮಾ. ೧೨ : ಕುಟ್ಟ ಭಾಗದ ಸುಂದರ ಪರಿಸರದ ನಡುವೆ ಅತಿ ಎತ್ತರದ ಗರುಡಗಿರಿಯಲ್ಲಿ ಶ್ರೀ ಕೃಷ್ಣನ ದೇವಾಲಯ ನಿರ್ಮಾಣವಾಗಿದ್ದು ತಾ. ೨೦ ರಿಂದ ೨೨ರವರೆಗೆ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ. ರೂ. ೩.೬೦ ಕೋಟಿ ವೆಚ್ಚದಲ್ಲಿ ದಾನಿಗಳ ಜನಪ್ರತಿನಿಧಿಗಳ ಸಹಕಾರದಿಂದ ೪೦ ವರ್ಷ ಇತಿಹಾಸವಿರುವ ಈ ಜಾಗದಲ್ಲಿ ಇದೀಗ ಶ್ರೀ ಕೃಷ್ಣನ ದೇವಾಲಯ ಸುಮಾರು ೧ ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದೆ.

೪೦ ವರ್ಷಗಳಿಂದ ಕನಸಾಗಿದ್ದ ಶ್ರೀ ಕೃಷ್ಣನ ದೇವಾಲಯವು ಕಳೆದ ಒಂದೂವರೆ ವರ್ಷಗಳ ಹಿಂದೆ ಸ್ಥಾಪನೆಗೊಂಡು ಶ್ರೀ ಕೃಷ್ಣ ದೇವಸ್ಥಾನ ಟ್ರಸ್ಟ್ನ ಆಡಳಿತ ಮಂಡಳಿಯ ಶ್ರಮದೊಂದಿಗೆ ಆರಂಭಿಸಿದ ದೇವಾಲಯದ ಪ್ರಗತಿ ಕಾರ್ಯವು ಇದೀಗ ಸಂಪೂರ್ಣದತ್ತ ಸಾಗಿದ್ದು ತಾ. ೨೦ರಿಂದ ಭಕ್ತರಿಗೆ ಶ್ರೀ ಕೃಷ್ಣನ ದರ್ಶನ ಸಿಗಲಿದೆ. ಅತೀ ಎತ್ತರದ ಪ್ರದೇಶವಾದ ‘ಗರುಡಗಿರಿ’ ಶ್ರೀ ಕೃಷ್ಣನ ಪೂಜಾಕಾರ್ಯ ದಿನಂಪ್ರತಿ ನಡೆಯಲಿದೆ.

ಕಳೆದ ಒಂದೂವರೆ ವರ್ಷದ ಹಿಂದೆ ಸ್ಥಳೀಯ ಕೊಡವ ಸಮಾಜದ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಅಧ್ಯಕ್ಷತೆಯಲ್ಲಿ ರಚನೆಯಾದ ಆಡಳಿತ ಮಂಡಳಿಯಲ್ಲಿ ಕುಟ್ಟ, ಬಾಡಗ, ತೈಲ ಹಾಗೂ ಮಂಚಳ್ಳಿ ಗ್ರಾಮಸ್ಥರು ಒಟ್ಟಾಗಿ ಸೇರಿ ಸಮಿತಿ ರಚನೆಗೊಂಡು ಆ ಮೂಲಕ ದೇವಾಲಯದ ಕೆಲಸಕ್ಕೆ ಮುಂದಾಗಿದ್ದರು. ನಾಡಿನ ಜನತೆಯ ಅಪಾರ ಸಹಕಾರದಿಂದ ಇಂದು ದೇವಾಲಯವು ನಿರ್ಮಾಣಗೊಂಡಿದೆ.

ಕರ್ನಾಟಕ ಕೇರಳ ಗಡಿ ಭಾಗವಾದ ಕುಟ್ಟ ಪಟ್ಟಣದ ಹೃದಯ ಭಾಗದಲ್ಲಿ ಶ್ರೀಕೃಷ್ಣನ ದೇವಾಲಯ ನಿರ್ಮಾಣವಾಗುತ್ತಿದ್ದು, ಈ ದೇವಾಲಯವು ಧಾರ್ಮಿಕ ಕೇಂದ್ರವಾಗಲಿದೆ. ಸುಂದರ ಪರಿಸರದ ನಡುವೆ ಅತೀ ಎತ್ತರದ ಒಂದು ಎಕರೆ ವಿಸ್ತೀರ್ಣದಲ್ಲಿ ಈ ದೇವಾಲಯವು ನಿರ್ಮಾಣವಾಗಿದೆ. ಈಗಾಗಲೇ ದೇವಸ್ಥಾನದ ಕೊನೆಯ ಹಂತದ ಪ್ರಗತಿ ಕಾರ್ಯಗಳು ಭರದಿಂದ ಸಾಗುತ್ತಿವೆ.

ವನಸಿರಿಯ ನಡುವೆ ಸುಂದರ ಜಾಗದಲ್ಲಿ ಸ್ಥಳೀಯ ಗ್ರಾಮಸ್ಥರು ಒಟ್ಟುಗೂಡಿ ಹಲವು ಸುತ್ತಿನ ಸಭೆಗಳನ್ನು ನಡೆಸುತ್ತಲೇ ಗಡಿಭಾಗದಲ್ಲಿ ಧಾರ್ಮಿಕ ಕೇಂದ್ರವೊAದನ್ನು ಆರಂಭಿಸುವ ಯೋಜನೆಗೆ ಇದೀಗ ಕಾಯಕಲ್ಪ ದೊರೆತಿದೆ.

ಪ್ರಸ್ತುತ ದೇವಾಲಯ ಸಮಿತಿಯಲ್ಲಿ ಅಧ್ಯಕ್ಷ ಚೆಕ್ಕೆರ ಜಫ್ಫ್ ಗಣಪತಿ ಉಪಾಧ್ಯಕ್ಷರಾದ ತೀತಿರ ನರೇನ್ ಬಾಲಕೃಷ್ಣ,ಕಾರ್ಯದರ್ಶಿಗಳಾದ ಚೊಡುಮಾಡ ಶರೀನ್ ಸುಬ್ಬಯ್ಯ ಸೇರಿದಂತೆ ೧೭ ಸಮಿತಿ ಸದಸ್ಯರು,ಕಾನೂನು ಸಲಹೆಗಾರರು ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ದೇವಾಲಯ ಸ್ಥಳದಿಂದ ಇಡಿ ಕುಟ್ಟ ಪಟ್ಟಣವನ್ನು ವೀಕ್ಷಿಸಬಹುದಾಗಿದೆ. ಗಿರಿಕಂದರಗಳು ನೋಡುಗರನ್ನು ಗಮನ ಸೆಳೆಯುತ್ತಿದೆ. ಶ್ರೀಕೃಷ್ಣನ ದೇವಾಲಯಕ್ಕೆ ಮೆಟ್ಟಿಲು ಹಾಗೂ ವಾಹನದ ಮೂಲಕ ಪ್ರವೇಶ ಮಾಡಬಹುದಾಗಿದೆ. - ಹೆಚ್.ಕೆ.ಜಗದೀಶ್