ಸೋಮವಾರಪೇಟೆ, ಮಾ. ೧೨: ರಾಜ್ಯ ಜಲ ಸಂಪನ್ಮೂಲ ಇಲಾಖೆಯಿಂದ ತಾಲೂಕಿನ ಹಾನಗಲ್ಲು ಗ್ರಾಮದ ದುದ್ದುಗಲ್ಲು ಶ್ರೀ ಮಲ್ಲಿಕಾರ್ಜುನ ದೇವಾಲಯದ ಅಭಿವೃದ್ಧಿಗೆ ರೂ. ೪.೮೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮತ್ತು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಭೂಮಿಪೂಜೆ ನೆರವೇರಿಸಿದರು. ಇತಿಹಾಸ ಪ್ರಸಿದ್ಧ ಮತ್ತು ಸೋಮವಾರಪೇಟೆ ಭಾಗದ ಪುರಾತನ ದೇವಾಲಯಗಳಲ್ಲಿ ಒಂದಾಗಿರುವ ಶ್ರೀಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯವನ್ನು ಸ್ಥಳೀಯರ ನೆರವಿನೊಂದಿಗೆ ಆದಿಚುಂಚನಗಿರಿ ಮಠವು ಕೈಗೊಂಡಿದ್ದು, ದೇವಾಲಯದ ನೀಲನಕ್ಷೆಯಂತೆ ದುದ್ದುಗಲ್ಲು ಹೊಳೆಯಿಂದ ದೇವಾಲಯದವರೆಗೆ ಮೆಟ್ಟಿಲುಗಳ ನಿರ್ಮಾಣ ಆಗಬೇಕಿದೆ.

ಈ ಹಿನ್ನೆಲೆ ರಾಜ್ಯ ಜಲಸಂಪನ್ಮೂಲ ಇಲಾಖಾ ಸಚಿವ ಡಿ.ಕೆ. ಶಿವಕುಮಾರ್ ಅವರ ಗಮನ ಸೆಳೆದ ಹಿನ್ನೆಲೆ ಕಾಮಗಾರಿಗೆ ೪.೮೦ ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ೭೫೦ ಮೀಟರ್ ಕಾಂಕ್ರೀಟ್ ರಸ್ತೆ, ೨.೫೦ ಕೋಟಿ ವೆಚ್ಚದಲ್ಲಿ ೧೫ ಮೀಟರ್ ಅಗಲದಲ್ಲಿ ಸೋಪಾನಂ ಕಟ್ಟೆ, ೧೬೮ ಮೀಟರ್ ತಡೆಗೋಡೆ, ಫೆನ್ಸಿಂಗ್, ಇಂಟರ್ ಲಾಕ್, ವಾಹನ ನಿಲುಗಡೆಗೆ ಸ್ಥಳಾವಕಾಶ ಸೇರಿದಂತೆ ಇನ್ನಿತರ ಕಾಮಗಾರಿಗಳು ಒಳಗೊಂಡಿವೆ.

ದುದ್ದುಗಲ್ಲು ಹೊಳೆಯ ಅನತಿ ದೂರದಲ್ಲಿರುವ ಶ್ರೀಮಲ್ಲಿಕಾರ್ಜುನ ದೇವಾಲಯವನ್ನು ಆದಿಚುಂಚನಗಿರಿ ಮಠಕ್ಕೆ ಹಸ್ತಾಂತರಿಸಿದ್ದು, ದೇವಾಲಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪ್ರಸ್ತುತ ಗರ್ಭಗುಡಿಯ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ. ದೇವಾಲಯ ನಿರ್ಮಾಣ ವಾಗುವಷ್ಟರಲ್ಲಿ ಉಳಿಕೆ ಕಾಮಗಾರಿಗಳೂ ಆಗಬೇಕಿವೆ. ಅಷ್ಟಮಂಗಲ ಪ್ರಶ್ನೆಯಂತೆ ದೇವಾಲಯ ಮತ್ತು ದುದ್ದುಗಲ್ಲು ಹೊಳೆಗೆ ಸಂಬAಧವಿದ್ದು, ಈ ಹೊಳೆಯಿಂದ ದೇವಾಲಯ ದವರೆಗೆ ಸಂಪರ್ಕ ಕಲ್ಪಿಸಬೇಕಿದೆ. ಈ ಹಿನ್ನೆಲೆ ರಸ್ತೆ, ಮೆಟ್ಟಿಲುಗಳ ನಿರ್ಮಾಣ ಕಾರ್ಯಕ್ಕೆ ಇಲಾಖೆಯಿಂದ ಅನುದಾನ ಒದಗಿದೆ.

ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶ್ರೀ ಶಂಭುನಾಥ ಸ್ವಾಮೀಜಿ ಅವರು, ಶಾಶ್ವತವಾಗುವಂತಹ ಕ್ಷೇತ್ರವನ್ನಾಗಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವನ್ನು ನಿರ್ಮಿಸಲಾಗುವುದು. ಇದರೊಂದಿಗೆ ಮಠವನ್ನೂ ನಿರ್ಮಿಸಿ, ದಾಸೋಹ, ಯಾತ್ರಿ ನಿವಾಸ, ಧಾರ್ಮಿಕ ಕಾರ್ಯಗಳಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ತೀರ್ಥ, ದೈವ, ಗುರು ಇರುವ ಸ್ಥಾನ ಶ್ರೇಷ್ಠವಾಗಿದೆ. ಅಂತಹ ಮೂರು ಸ್ಥಾನಗಳು ಈ ಕ್ಷೇತ್ರದಲ್ಲಿದೆ. ಮುಂದಿನ ದಿನಗಳಲ್ಲಿ ಧಾರ್ಮಿಕ, ಅಧ್ಯಾತ್ಮಿಕ, ಸಾಂಸ್ಕೃತಿಕ ಕ್ಷೇತ್ರವಾಗಿ ಇದನ್ನು ರೂಪುಗೊಳಿಸಲಾಗುವುದು ಎಂದರು.

ಮುAದಿನ ವರ್ಷದ ಶಿವರಾತ್ರಿ ಸಂದರ್ಭ ಕ್ಷೇತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡು ಶಿವರಾತ್ರಿ ಮಹೋತ್ಸವವನ್ನು ಅದ್ಧೂರಿಯಾಗಿ ನಡೆಸಲು ಕಾರ್ಯಯೋಜನೆ ರೂಪಿಸಲಾಗಿದೆ ಎಂದರು.

ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಕಳಪೆ ಕಾಮಗಾರಿಗೆ ಅವಕಾಶ ನೀಡಬಾರದು. ಸರ್ಕಾರದಿಂದ ಹೆಚ್ಚಿನ ಅನುದಾನ ಅವಶ್ಯಕತೆಯಿದ್ದರೆ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ವೇದಿಕೆಯಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದ ಮಿಥುನ್ ಗೌಡ ಹಾನಗಲ್ಲು, ಗ್ರಾಮಾಧ್ಯಕ್ಷ ವಿಕ್ರಾಂತ್, ಸಮಿತಿಯ ಪದಾಧಿಕಾರಿಗಳಾದ ರಾಮಕೃಷ್ಣ, ಬಸಪ್ಪ, ರಾಜು, ಹಾನಗಲ್ಲು ಗ್ರಾ.ಪಂ. ಅಧ್ಯಕ್ಷ ಯಶಾಂತ್‌ಕುಮಾರ್, ಜಿ.ಪಂ. ಮಾಜೀ ಸದಸ್ಯ ಬಿ.ಜೆ. ದೀಪಕ್, ಇಲಾಖೆಯ ಕಾರ್ಯಪಾಲಕ ಅಭಿಯಂತರ ದೇವೇಗೌಡ, ಸಹಾಯಕ ಅಭಿಯಂತರ ಸಿದ್ದರಾಜು, ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಗುತ್ತಿಗೆದಾರ ಜಯರಾಂ ಸೇರಿದಂತೆ ಇತರರು ಉಪಸ್ಥಿತರಿದ್ದರು.