*ಗೋಣಿಕೊಪ್ಪ, ಮಾ. ೧೨: ಅನ್ಯ ಉದ್ದೇಶಕ್ಕೆ ನದಿ ನೀರು ಬಳಕೆಗೆ ನಿಷೇಧ ಹೇರಿರುವ ಜಿಲ್ಲಾಡಳಿತ ನಡೆ ಖಂಡಿಸಿ ತಾ. ೧೫ ರಂದು ರೈತರ ನಡೆ ಜಿಲ್ಲಾಧಿಕಾರಿ ಕಚೇರಿ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ತಿಳಿಸಿದ್ದಾರೆ.
ಜಿಲ್ಲೆಯ ಐದು ತಾಲೂಕುಗಳ ರೈತರು ಪಾಲ್ಗೊಳ್ಳುತ್ತಿದ್ದು, ಪಂಪ್ಸೆಟ್ ಮೂಲಕ ನೀರು ಬಳಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಾರ್ಷಿಕ ಮಳೆ ಕಡಿಮೆಯಾಗಿದ್ದರೂ, ಜಿಲ್ಲಾಡಳಿತ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಕೃಷಿ ಪ್ರಧಾನ ಜಿಲ್ಲೆಗೆ ಸೂಕ್ತ ಯೋಜನೆಗಳು ಅನುಷ್ಠಾನಗೊಂಡಿಲ್ಲ ಎಂದು ಆರೋಪಿಸಿದರು.
ಅಭಿವೃದ್ಧಿ ನೆಪದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಪರಿಸರ ನಾಶವಾಗಿದೆ. ೪೦೦ ಕೆ.ವಿ. ಹೈಟೆನ್ಷನ್ ವಿದ್ಯುತ್ ಮಾರ್ಗಕ್ಕೆ ಮರಗಳು ನಾಶವಾಗಿವೆ. ಭತ್ತ ಬೆಳೆಯುವ ಗದ್ದೆಯನ್ನು ಭೂಪರಿವರ್ತನೆಗೆ ಮೀಸಲಿಟ್ಟಿದೆ. ಇದರಿಂದ ನೀರಿನ ಅಂತರ್ಜಲ ತಳಮಟ್ಟ ಸೇರುತ್ತಿದೆ ಎಂದರು.
ಪ್ರವಾಸೋದ್ಯಮದ ಹೆಸರಿನಲ್ಲಿ ಬೆಟ್ಟ ಅಗೆದು ಪ್ರಕೃತಿ ನಾಶ ಮಾಡಲಾಗಿದೆ. ಅರಣ್ಯದಲ್ಲಿ ಅಭಿವೃದ್ಧಿ ಯೋಜನೆ ಮೂಲಕ ಜಲಮೂಲ ನಾಶಕ್ಕೆ ಕಾರಣವಾಗುತ್ತಿದೆ. ಇಂತಹ ಯೋಜನೆಗಳು ಇಂದು ಜಲಬಿಕ್ಕಟ್ಟು ಎದುರಿಸಲು ಕಾರಣವಾಗಿದೆ ಎಂದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ನಲ್ಲೂರು ಸಂಚಾಲಕ ತಿತರಮಡ ರಾಜ, ಬಾಳೆಲೆ ಸಂಚಾಲಕ ಲೆಹರ್ ಬಿದ್ದಪ್ಪ ಇದ್ದರು.