ಕೂಡಿಗೆ, ಮಾ. ೧೨ : ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಎಂಬುದು ಬಹುದೊಡ್ಡ ಸಮಸ್ಯೆಯಾಗಿದೆ. ಹಾಗಾಗಿಯೇ ಗ್ರಾಮೀಣ ಪ್ರದೇಶದ ಯುವ ಪೀಳಿಗೆಯು ಉದ್ಯೋಗವನ್ನರಸಿಕೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಇದರ ಜೊತೆಗೆ ನಗರ ಸಂಸ್ಕೃತಿಯ ಆಕರ್ಷಣೆ ಕೂಡ ಕಾರಣವಾಗಿದೆ ಎಂದು ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹ್ಮದ್ ತಿಳಿಸಿದರು.

ಸುವರ್ಣ ಕರ್ನಾಟಕ ೫೦ರ ಸಂಭ್ರಮದ ಅಂಗವಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹೆಬ್ಬಾಲೆ ಹೋಬಳಿ ಘಟಕ ಹಾಗೂ ಹೆಬ್ಬಾಲೆ, ತೊರೆನೂರು ಮತ್ತು ಶಿರಂಗಾಲ ಗ್ರಾಮ ಪಂಚಾಯಿತಿಗಳ ಸಹಯೋಗದೊಂದಿಗೆ ಜರುಗಿದ ಜಾನಪದ ಗ್ರಾಮ ಸಿರಿ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ‘ಗ್ರಾಮೀಣ ಜನರ ಬದುಕು ಮತ್ತು ಬವಣೆ’ ಎಂಬ ವಿಷಯದ ಕುರಿತು ಮಾತನಾಡಿದ ಅವರು, ಜಾನಪದ ಸಂಸ್ಕೃತಿ, ಜಾನಪದ ಕ್ರೀಡೆ, ಜಾನಪದ ಹಬ್ಬ, ಜಾನಪದ ವೈದ್ಯ, ಜಾನಪದ ಇವೆಲ್ಲವೂ ಗ್ರಾಮೀಣ ಪ್ರದೇಶದ ಸಾಂಸ್ಕೃತಿಕ ಶ್ರೀಮಂತಿಕೆಗೆ ಕಾರಣವಾಗಿವೆ. ನಗರ ಪ್ರದೇಶಗಳು ಅಭಿವೃದ್ಧಿ ಹೊಂದಿದಷ್ಟು ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಹೊಂದಿಲ್ಲ. ಗ್ರಾಮೀಣ ಪ್ರದೇಶಗಳು ಇಂದಿಗೂ ಅಭಿವೃದ್ಧಿಯಿಂದ ಹಿಂದುಳಿದಿವೆ. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಗ್ರಾಮೀಣ ಪ್ರದೇಶಗಳ ಆರ್ಥಿಕ ಪರಿಸ್ಥಿತಿಯನ್ನು ಉತ್ತೇಜಿಸುವಲ್ಲಿ ಸರ್ಕಾರಗಳು ನಿರಂತರ ಪ್ರಯತ್ನಗಳನ್ನು ಮಾಡುತ್ತಿರಬೇಕು. ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿ ಪ್ರಗತಿ ಹೊಂದಲು ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಹೆಚ್.ಹೆಚ್. ಸುಂದರ ಮಾತನಾಡಿದರು. ಕಾರ್ಯಕ್ರಮದ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಭಾರದ್ವಾಜ ಆನಂದ ತೀರ್ಥ ವಹಿಸಿದ್ದರು.

ಶಿಕ್ಷಕಿ ಕಸ್ತೂರಿ ಸ್ವಾಗತಿಸಿ, ಜಗದೀಶ್ ವಂದಿಸಿದರು. ಕಾರ್ಯಕ್ರಮ ನಿರೂಪಣೆ ರಮೇಶ್ ನೆರವೇರಿಸಿದರು.