ಹರಿಯಾಣದ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್

ಚAಡೀಗಢ, ಮಾ. ೧೨: ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಕುರುಕ್ಷೇತ್ರದ ಸಂಸದ ನಯಾಬ್ ಸಿಂಗ್ ಸೈನಿ ಅವರು ಮಂಗಳವಾರ ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಸೈನಿ ಅವರು ಇಂದು ಬೆಳಿಗ್ಗೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾದ ನಂತರ ಮಧ್ಯಾಹ್ನ ರಾಜಭವನಕ್ಕೆ ತೆರಳಿ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಭೇಟಿ ಮಾಡಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಕೇಂದ್ರ ಸಚಿವ ಅರ್ಜುನ್ ಮುಂಡಾ, ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಹರಿಯಾಣ ಬಿಜೆಪಿ ಉಸ್ತುವಾರಿ ಬಿಪ್ಲಬ್ ದೇಬ್ ಅವರು ಸೈನಿ ಸಾಥ್ ನೀಡಿದರು. ಇಂದು ಸಂಜೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನಯಾಬ್ ಸಿಂಗ್ ಸೈನಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಸೈನಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಲೋಕಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಹರಿಯಾಣ ಮುಖ್ಯಮಂತ್ರಿಯನ್ನು ಬದಲಾಯಿಸಿರುವುದು ಅಚ್ಚರಿ ಮೂಡಿಸಿದೆ. ಅಕ್ಟೋಬರ್‌ನಲ್ಲಿ ಹರಿಯಾಣ ವಿಧಾನಸಭೆ ಚುನಾವಣೆ ನಡೆಯಲಿದೆ.

ಕಾಂಗ್ರೆಸ್ ಕಾರ್ಯಕರ್ತನ ಭೀಕರ ಕೊಲೆ

ಗದಗ, ಮಾ. ೧೨: ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಕೊಂದು ಮರಕ್ಕೆ ನೇತು ಹಾಕಿರುವ ಭೀಕರ ಘಟನೆ ನಡೆದಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಬಳಿ ಜಮೀನೊಂದರಲ್ಲಿ ಮರಕ್ಕೆ ನೇತು ಹಾಕಿದ ಸ್ಥಿತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಶವ ಪತ್ತೆಯಾಗಿದೆ. ಕೊಲೆಯಾದ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಪ್ರಮುಖ ಕಾರ್ಯಕರ್ತ ಡೋಣಿ ಗ್ರಾಮದ ಶರಣಪ್ಪ ಸಂದಿಗೌಡ್ರ ಎಂದು ತಿಳಿದುಬಂದಿದೆ. ಕೊಲೆಗೂ ಮುನ್ನ ಶರಣಪ್ಪ ಸಂದಿಗೌಡ್ರರನ್ನು ಅಟ್ಟಾಡಿಸಿಕೊಂಡು ಹೋಗಿ ಕಣ್ಣಿಗೆ ಖಾರದ ಪುಡಿ ಎರಚಿ ಕೊಲೆ ಮಾಡಿ ನಂತರ ಮರಕ್ಕೆ ನೇತು ಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮುಂಡರಗಿ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ಕುಸುಗಲ್ಲ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ - ಎಫ್.ಐ.ಆರ್.

ಬೆಂಗಳೂರು, ಮಾ. ೧೨: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕನ ವಿರುದ್ಧ ಪೊಲೀಸರು ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ಕಲ್ಲೇಶಯ್ಯ ಸಲ್ಲಿಸಿದ ದೂರಿನ ಆಧಾರದ ಮೇಲೆ ಕಾರ್ಮಿಕ ಕಲ್ಯಾಣ ಮಂಡಳಿ ಅಧ್ಯಕ್ಷ ಜಿಎಸ್ ಮಂಜುನಾಥ್ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಜುನಾಥ್ ಹೇಳಿಕೆಯಿಂದ ಸಮಾಜದಲ್ಲಿ ಶಾಂತಿ ಕದಡುವ ಮೂಲಕ ಪ್ರಧಾನಿ ಹುದ್ದೆಗೆ ಅಪಖ್ಯಾತಿ ಬಂದಿದೆ ಎಂದು ದೂರುದಾರರು ತಿಳಿಸಿದ್ದಾರೆ. ಪೊಲೀಸರು ಮಂಜುನಾಥ್ ವಿರುದ್ಧ ಐಪಿಸಿ ಸೆಕ್ಷನ್ ೫೦೪ ಮತ್ತು ೫೦೬ (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವೇದಿಕೆಯಲ್ಲಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಮಂಜುನಾಥ್, ಚುನಾವಣೆ ಬರುತ್ತಿದ್ದು, ಗ್ಯಾಸ್ ಸಿಲಿಂಡರ್ ಬೆಲೆ ೧೦೦ ರೂ. ಇಳಿಸಲಾಗಿದೆ. ಆತ ಸಿಕ್ಕರೆ ನನ್ನ ಕಾಲಲ್ಲಿ ಏನಿದೆಯೋ ಅದರಲ್ಲೇ ಹೊಡೆಯುತ್ತೇನೆ. ಈಗೇಕೆ ಇಷ್ಟೆಲ್ಲಾ ಮಾಡುತ್ತಿದ್ದೀರಿ? ನಾನು ಇದನ್ನು ಕಾಂಗ್ರೆಸ್ ನಾಯಕನಾಗಿ ಅಲ್ಲ, ಒಬ್ಬ ಸಾಮಾನ್ಯ ಮನುಷ್ಯನಾಗಿ ಕೇಳುತ್ತಿದ್ದೇನೆ. ನೀವೂ ಈ ಪ್ರಶ್ನೆಯನ್ನು ಕೇಳಬೇಕಾಗುತ್ತದೆ. ಇಲ್ಲದಿದ್ದರೆ ಯಾರೂ ನಿಮ್ಮ ಮಾತನ್ನು ಕೇಳುವುದಿಲ್ಲ. ನಾವು ಪ್ರಶ್ನೆಗಳನ್ನು ಕೇಳಲು ಕಲಿಯದಿದ್ದರೆ, ನಾವು ಸಂಪೂರ್ಣವಾಗಿ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ. ೧೫ ದಿನಗಳ ನಂತರ ಚುನಾವಣೆ ನಡೆಯುವಾಗ ೧೦೦ ರೂಪಾಯಿ ಬೆಲೆ ಇಳಿಸಿದರೆ ನಿಮಗೇಕೆ ಖುಷಿ? ಎಂದು ಪ್ರಶ್ನಿಸಿದ್ದಾನೆ.

ವಂದೇ ಭಾರತ್ ರೈಲು ಸೇವೆ ಮಂಗಳೂರಿಗೆ ವಿಸ್ತರಣೆ

ಮಂಗಳೂರು, ಮಾ. ೧೨: ತಿರುವನಂತಪುರ- ಕಾಸರಗೋಡು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ರೈಲನ್ನು ಮಂಗಳೂರು ಸೆಂಟ್ರಲ್ ನಿಲ್ದಾಣದವರೆಗೆ ವಿಸ್ತರಿಸಲಾಗಿದ್ದು, ಈ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಸರೆನ್ಸ್ ಮೂಲಕ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಉದ್ಘಾಟನಾ ಸಮಾರಂಭದ ಸಲುವಾಗಿ ವಂದೇ ಭಾರತ್ ವಿಶೇಷ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಬೆಳಿಗ್ಗೆ ೯.೪೦ಕ್ಕೆ ಹೊರಟು ಕಾಸರಗೋಡನ್ನು ಬೆಳಿಗ್ಗೆ ೧೦.೧೫ಕ್ಕೆ ತಲುಪಿತು. ಅಲ್ಲಿಂದ ೧೦.೩೦ಕ್ಕೆ ಹೊರಟ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ಮಧ್ಯಾಹ್ನದ ವೇಳೆ ತಲುಪಿತು. ರೈಲ್ವೆ ಹೋರಾಟಗಾರರು, ವಿದ್ಯಾರ್ಥಿಗಳು ಈ ವಿಶೇಷ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಮಂಗಳೂರು ಸೆಂಟ್ರಲ್- ತಿರುವನಂತಪುರ ನಡುವೆ ವಂದೇ ಭಾರತ್ ರೈಲಿನ ದೈನಂದಿನ ಸೇವೆ ಬುಧವಾರದಿಂದ (ಮಾ.೧೩) ಆರಂಭವಾಗಲಿದೆ. ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಬೆಳಿಗ್ಗೆ ೬.೨೫ಕ್ಕೆ ಹೊರಡುವ ರೈಲು ತಿರುವನಂತಪುರವನ್ನು ಮಧ್ಯಾಹ್ನ ೩.೦೫ಕ್ಕೆ ತಲುಪಲಿದೆ. ಅಲ್ಲಿಂದ ಸಂಜೆ ೪.೦೫ಕ್ಕೆ ಹೊರಟು ರಾತ್ರಿ ೧೨.೪೦ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ತಲುಪಲಿದೆ. ಈ ರೈಲಿಗೆ ಕಾಸರಗೋಡು, ಕಣ್ಣೂರು, ಕೊಯಿಕ್ಕೋಡ್, ತಿರೂರ್, ಶ್ವರ್ನೂರು ಜಂಕ್ಷನ್, ತ್ರಿಶೂರ್, ಎರ್ನಾಕುಳಂ ಜಂಕ್ಷನ್, ಅಳಪುಝ ಹಾಗೂ ಕೊಲ್ಲಂ ಜಂಕ್ಷನ್‌ಗಳಲ್ಲಿ ನಿಲುಗಡೆ ಇದೆ.

ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ

ಬೆಂಗಳೂರು, ಮಾ. ೧೨: ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ. ೩.೭೫ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ. ೩೮.೭೫ಗೆ ಏರಿಕೆಯಾಗಿದೆ. ಮೂಲವೇತನಕ್ಕೆ ಶೇ. ೩೮.೭೫ ರಷ್ಟು ತುಟ್ಟಿಭತ್ಯೆ ಇತ್ತು. ಇದನ್ನು ಜನವರಿಯಿಂದ ಪೂರ್ವಾನ್ವಯವಾಗುವಂತೆ ಶೇ. ೪೨.೫ಕ್ಕೆ ಹೆಚ್ಚಳ ಮಾಡಲಾಗಿದೆ

ಡ್ರಗ್ಸ್ ಸಾಗಾಟ - ಆರು ಪಾಕಿಸ್ತಾನಿ ಸಿಬ್ಬಂದಿಗಳ ಬಂಧನ

ಅಹಮದಾಬಾದ್, ಮಾ. ೧೨: ಗುಜರಾತ್ ಕರಾವಳಿಯಲ್ಲಿ ೬೦ ಪ್ಯಾಕೆಟ್ ಡ್ರಗ್ಸ್ ಸಾಗಿಸುತ್ತಿದ್ದ ದೋಣಿಯನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಹಡಗಿನಲ್ಲಿದ್ದ ಆರು ಪಾಕಿಸ್ತಾನಿ ಸಿಬ್ಬಂದಿಯನ್ನು ಮಂಗಳವಾರ ಬಂಧಿಸಲಾಗಿದೆ. ಖಚಿತ ಮಾಹಿತಿ ಆಧಾರದ ಮೇಲೆ ಭಾರತೀಯ ಕೋಸ್ಟ್ ಗಾರ್ಡ್, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಅರಬ್ಬಿ ಸಮುದ್ರದಲ್ಲಿ ಅಂರ‍್ರಾಷ್ಟಿçÃಯ ಕಡಲ ಗಡಿ ರೇಖೆ (ಐಎಂಬಿಎಲ್) ಬಳಿ ಜಂಟಿ ಕಾರ್ಯಾಚರಣೆ ನಡೆಸಿ, ಡ್ರಗ್ಸ್ ಸಾಗಿಸುತ್ತಿದ್ದ ದೋಣಿಯನ್ನು ವಶಕ್ಕೆ ಪಡೆದಿದ್ದಾರೆ. ಪೋರಬಂದರ್ ಕರಾವಳಿಯಿಂದ ಸುಮಾರು ೧೮೦ ನಾಟಿಕಲ್ ಮೈಲು ದೂರದಲ್ಲಿ ಸುಮಾರು ೬೦ ಪ್ಯಾಕೆಟ್ ಡ್ರಗ್ಸ್ ಸಾಗಿಸುತ್ತಿದ್ದ ಹಡಗನ್ನು ವಶಪಡಿಸಿಕೊಳ್ಳಲಾಗಿದೆ. ಆರು ಪಾಕಿಸ್ತಾನಿ ಸಿಬ್ಬಂದಿಗಳೊAದಿಗೆ ದೋಣಿಯನ್ನು ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆಯಲಾಗಿದೆ.

ಸಿಎಎ ಅನುಷ್ಠಾನ ತಡೆಗೆ ಅರ್ಜಿ

ನವದೆಹಲಿ, ಮಾ. ೧೨: ಪೌರತ್ವ ತಿದ್ದುಪಡಿ ಕಾಯ್ದೆ- ೨೦೧೯ರ (ಸಿಎಎ) ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಅರ್ಜಿಗಳು ಇತ್ಯರ್ಥ ಆಗುವವರೆಗೂ ಪೌರತ್ವ ತಿದ್ದುಪಡಿ ನಿಯಮಗಳ (೨೦೨೪) ಅನುಷ್ಠಾನವನ್ನು ತಡೆಹಿಡಿಯಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮಂಗಳವಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಕುರಿತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಅರ್ಜಿ ಸಲ್ಲಿಸಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಜನರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ನಿರ್ದೇಶಿಸಬೇಕು ಎಂದೂ ಅದು ಕೋರಿದೆ. ಮುಸ್ಲಿಂ ಸುಮುದಾಯದವರು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅನುಮತಿ ನೀಡುವಂತೆ ಮತ್ತು ಅವರ ಅರ್ಹತೆಯ ಬಗ್ಗೆ ವರದಿ ಸಲ್ಲಿಸುವಂತೆ ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದೂ ಅದು ಮನವಿ ಮಾಡಿದೆ.