ಶನಿವಾರಸಂತೆ, ಮಾ. ೧೧: ವಿದ್ಯಾಸಂಸ್ಥೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಕಾರ್ಯಕ್ರಮ ನಡೆಸುವುದರಿಂದ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಆಸಕ್ತಿ, ಅಭಿರುಚಿ ಹಾಗೂ ಅಭಿಮಾನ ಮೂಡುತ್ತದೆ ಎಂದು ಕೊಡಗು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಶನಿವಾರಸಂತೆಯ ಶ್ರೀ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಶನಿವಾರಸಂತೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶ್ರೀವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ದಿ. ಬಿ.ಎಸ್. ಬೀರಪ್ಪ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ೩೦ ದತ್ತಿ ಸ್ಥಾಪನೆಯಾಗಿದ್ದು ೫೦-೬೦ ದತ್ತಿ ಸ್ಥಾಪನೆಯ ಗುರಿ ಹೊಂದಲಾಗಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಶ್ರೀವಿಘ್ನೇಶ್ವರ ಬಾಲಿಕಾ ವಿದ್ಯಾಸಂಸ್ಥೆ ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್ ಮಾತನಾಡಿ, ಕಸಾಪ ದತ್ತಿ ಪ್ರಶಸ್ತಿ ಸ್ಫೂರ್ತಿ ನೀಡುವ ಕಾರ್ಯಕ್ರವಾಗಿದ್ದು ಹೆಣ್ಣುಮಕ್ಕಳಿಗೆ ಪ್ರೋತ್ಸಾಹದಾಯಕವಾಗಿದೆ ಎಂದರು.

ಶ್ರೀವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆ ಅಧ್ಯಾಪಕ ಕೆ.ಪಿ.ಜಯಕುಮಾರ್ “ಮಹಿಳೆ ಮತ್ತು ಶಿಕ್ಷಣ’’ದ ಬಗ್ಗೆ ಉಪನ್ಯಾಸ ನೀಡಿ ಪುರುಷ ಪ್ರಧಾನ ಸಮಾಜ ಗೃಹಿಣಿ ಹೆಣ್ಣನ್ನು ನಿರುದ್ಯೋಗಿ ಎಂಬAತೆ ಬಿಂಬಿಸುತ್ತಿದೆ.ಹೆಣ್ಣು ಶಕ್ತಿ ದೇವತೆಯಾಗಿದ್ದು ಆಕೆಯಿಲ್ಲದ ಪುರುಷನ ಜೀವನ ಪರಿಪೂರ್ಣ ಎನಿಸುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ೨೦೨೨-೨೩ ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಹೆಚ್. ಆಶಿಫಾ ದತ್ತಿ ದಾನಿ ಎಚ್.ಬಿ. ಜಯಮ್ಮ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್ ಹಾಗೂ ಅಧ್ಯಾಪಕ ಕೆ.ಪಿ. ಜಯಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಚ್.ಬಿ. ಜಯಮ್ಮ ಮಾತನಾಡಿ, ವಿಘ್ನೇಶ್ವರ ವಿದ್ಯಾಸಂಸ್ಥೆಯಲ್ಲಿ ೧೦ ನೇ ತರಗತಿಯಲ್ಲಿ ಕನ್ನಡದಲ್ಲಿ ಅಧಿಕ ಅಂಕ ಗಳಿಸುವ ವಿದ್ಯಾರ್ಥಿನಿಗೆ ಪ್ರಶಸ್ತಿ ನೀಡಲು ರೂ.೧೦ ಸಾವಿರ ದತ್ತಿ ಇಡುವುದಾಗಿ ಘೋಷಿಸಿದರು. ಅಧ್ಯಕ್ಷತೆ ವಹಿಸಿದ್ದ ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ಮಾತನಾಡಿ, ಕಸಾಪ ದತ್ತಿ ಪ್ರಶಸ್ತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾಹರೀಶ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಎಸ್.ಐ. ಮುನೀರ್ ಅಹಮ್ಮದ್, ರೇವತಿ ರಮೇಶ್, ತಾಲ್ಲೂಕು ಕಸಾಪ ಪ್ರಾಧಾನ ಕಾರ್ಯದರ್ಶಿಗಳಾದ ಜ್ಯೋತಿಕಾ ಅರುಣ್, ವೀರರಾಜು, ಕಾರ್ಯಕಾರಿ ಸಮಿತಿ ನಿರ್ದೇಶಕರಾದ ಶ.ಗ.ನಯನತಾರಾ, ರುಬಿನಾ, ಮಾಜಿ ಅಧ್ಯಕ್ಷ ಜೆ.ಸಿ.ಶೇಖರ್, ಕೊಡ್ಲಿಪೇಟೆ ಹೋಬಳಿ ಕಸಾಪ ಅಧ್ಯಕ್ಷ ಶಾಂತಮಲ್ಲಪ್ಪ, ಶನಿವಾರಸಂತೆ ಹೋಬಳಿ ಕಸಾಪ ಅಧ್ಯಕ್ಷ ಬಿ.ಬಿ.ನಾಗರಾಜ್, ಮಾಜಿ ಅಧ್ಯಕ್ಷ ಸಿ.ಎಂ. ಪುಟ್ಟಸ್ವಾಮಿ, ಕಾರ್ಯದರ್ಶಿ ಮೋಹನ್, ನಿರ್ದೇಶಕರಾದ ಶಿವಪ್ಪ, ಪ್ರಕಾಶ್ಚಂದ್ರ, ಸದಸ್ಯರಾದ ರುಕ್ಮಿಣಿ, ಆಶಾಪುಟ್ಟಸ್ವಾಮಿ, ಸುನಂದಾ, ಉಪನ್ಯಾಸಕ ಸರ್ಫ್ ರಾಜ್ ಇತರರು ಉಪಸ್ಥಿತರಿದ್ದರು. ಶ್ರೀವಿಘ್ನೇಶ್ವರ ಬಾಲಿಕಾ ವಿದ್ಯಾಸಂಸ್ಥೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ತಾಲೂಕು ಕಸಾಪ ನಿರ್ದೇಶಕಿ ರುಬಿನಾ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜ್ಯೋತಿಕಾ ಅರುಣ್ ಕಾರ್ಯಕ್ರಮ ನಿರ್ವಹಿಸಿದರು.