ಶನಿವಾರಸಂತೆ, ಮಾ. ೧೧ : ಪಟ್ಟಣದ ಶ್ರೀ ಮಂಜುನಾಥ ಸ್ವಾಮಿ ಪಾದಯಾತ್ರಾ ಸಮಿತಿ ಹಾಗೂ ಶನಿವಾರಸಂತೆ ವಲಯ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹಮ್ಮಿಕೊಂಡಿರುವ ೨೬ನೇ ವರ್ಷದ ಪಾದಯಾತ್ರೆಗೆ ಶ್ರೀವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ಕಲ್ಯಾಣ ಮಂಟಪದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಸಿದ್ಧಲಿಂಗಪುರದ ಮಂಜುನಾಥ ಸ್ವಾಮಿ ಮಠದ ರಘುನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಪಾದಯಾತ್ರಿಗಳಿಗೆ ಸಾಂಕೇತಿಕವಾಗಿ ಕೇಸರಿ ಶಾಲನ್ನು ನೀಡಿ ಪಾದಯಾತ್ರೆಗೆ ಚಾಲನೆ ನೀಡಿದರು. ನಂತರ ಶ್ರೀಗಣಪತಿ-ಚಂದ್ರಮೌಳೇಶ್ವರ-ಪಾರ್ವತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಲಾಯಿತು.
ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ೬೫ ಪುರುಷರು ಮತ್ತು ೪೫ ಮಹಿಳೆಯರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ಶನಿವಾರಸಂತೆಯಿAದ ಚಂಗಡಹಳ್ಳಿ, ಕೂಡುರಸ್ತೆ, ವನಗೂರು, ಬಿಸ್ಲೆ, ಸುಬ್ರಹ್ಮಣ್ಯ ರಸ್ತೆ ಮಾರ್ಗವಾಗಿ ಮಾ.೭ ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಲಿದ್ದಾರೆ. ಪಾದಯಾತ್ರೆ ಸಂದರ್ಭ ಪಾದಯಾತ್ರಿಗಳ ಜತೆಯಲ್ಲಿ ಶನಿವಾರಸಂತೆ ವಲಯ ಅರಣ್ಯ ಇಲಾಖೆ ಅರಣ್ಯಾಧಿಕಾರಿ ಗಾನಶ್ರೀ, ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ ಹಾಗೂ ಸಿಬ್ಬಂದಿ ತ್ಯಾಗರಾಜ ಕಾಲೋನಿಯ ವಿಜಯ ವಿನಾಯಕ ದೇವಸ್ಥಾನದಿಂದ ಕಾಜೂರು ಸೇತುವೆಯವರೆಗೆ ಪರಿಸರ ಜಾಗೃತಿ ಜಾಥಾ ನಡೆಸಿ ರಸ್ತೆ ಬದಿಯಲ್ಲಿ ಹಾಕಿದ್ದ ಕಸವನ್ನು ತೆಗೆದು ಶ್ರಮದಾನ ಮಾಡಿದರು. ಪಿಎಸ್ಐ ರವಿಶಂಕರ್ ಹಾಗೂ ಸಿಬ್ಬಂದಿ ಹಾಗೂ ಮಲೆನಾಡು ರಕ್ಷಣಾ ಸೇನೆ ಜಿಲ್ಲಾ ಅಧ್ಯಕ್ಷ ರಕ್ಷಿತ್ ಗೌಡ, ಇತರ ಪದಾಧಿಕಾರಿಗಳು, ಪಟ್ಟಣದ ಮುಖ್ಯರಸ್ತೆಯಿಂದ ಸಮೀಪದ ದುಂಡಳ್ಳಿ ಗ್ರಾಮದವರೆಗೆ ರಸ್ತೆ ಬದಿಯಲ್ಲಿ ಬಿದ್ದಿದ್ದ ತ್ಯಾಜ್ಯಗಳನ್ನು ಹೆಕ್ಕಿ ಚೀಲಕ್ಕೆ ತುಂಬಿಸುತ್ತಾ ಶ್ರಮದಾನ ಮಾಡಿದರು. ಮುಖಂಡರಾದ ಎಸ್.ಎನ್.ರಘು, ಹರೀಶ್, ಮಹೇಶ್, ಎಚ್.ಆರ್.ಹರೀಶ್, ಸೋಮಶೇಖರ್ ಪೂಜಾರಿ, ಪ್ರವೀಣ್, ಪಾದಯಾತ್ರಿ ಸಮಿತಿಯ ರಾಜು, ಜಯಪ್ಪ ಇತರರು ಪಾಲ್ಗೊಂಡಿದ್ದರು.