ಐಗೂರು, ಮಾ. ೧೦: ಐಗೂರಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಯಡವನಾಡು ಮೀಸಲು ಅರಣ್ಯದಿಂದ ಕಾಡಾನೆಗಳು ಗ್ರಾಮಗಳಿಗೆ ಲಗ್ಗೆ ಇಡದಂತೆ ಈ ಹಿಂದೆ ಆನೆಗಳು ಸಂಚರಿಸಲು ಬಿಟ್ಟಿದ್ದ ನಾಲ್ಕು ಮುಖ್ಯದ್ವಾರಗಳ ಸ್ಥಳಗಳಲ್ಲಿ ಇಲಾಖೆ ವತಿಯಿಂದ ಬಲವಾದ ಕಬ್ಬಿಣದ ಗೇಟುಗಳನ್ನು ಅಳವಡಿಸುವ ಕೆಲಸವು ಸಾಗುತ್ತಿದೆ.

ಇತ್ತೀಚೆಗೆ ಈ ಭಾಗದಲ್ಲಿ ಮದವೇರಿದ ಕಾಡಾನೆಯೊಂದು ಹಗಲಿನ ವೇಳೆ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದು, ಸಾರ್ವಜನಿಕರು ಶಾಲಾ ಮಕ್ಕಳು ಆತಂಕಗೊAಡಿದ್ದರು. ಇದರ ಜೊತೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ಕೈಗೊಂಡಾಗ ಇಲಾಖಾ ಸಿಬ್ಬಂದಿಯ ಬೈಕ್ ಮತ್ತು ಟಾಟಾ ಕಾಫಿ ತೋಟದ ಗೇಟನ್ನು ಜಖಂಗೊಳಿಸಿ ಸಿಬ್ಬಂದಿಗಳನ್ನು ಅಟ್ಟಾಡಿಸಿ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾದ ಘಟನೆ ಇತ್ತೀಚೆಗೆ ನಡೆದಿತ್ತು. ರೈಲ್ವೇ ಕಂಬಿ ಅಳವಡಿಸಿದ್ದರೂ ೪ ಕಡೆಗಳಲ್ಲಿ ಆನೆಗಳು ನಾಡಿಗೆ ಬಂದಲ್ಲಿ ಕಾಡಿಗ ಹಿಂತಿರುಗಲೆAದು ಜಾಗ ಬಿಡಲಾಗಿತ್ತು. ಇದರ ಬಗ್ಗೆ ‘ಶಕ್ತಿ’ ಇತ್ತೀಚೆಗೆ ವರದಿ ಪ್ರಕಟಿಸಿದ್ದು, ಈ ಜಾಗಗಳಲ್ಲಿ ಗೇಟ್ ಅಳವಡಿಸುವ ಕಾರ್ಯ ಅರಣ್ಯ ಇಲಾಖೆ ವತಿಯಿಂದ ನಡೆಯುತ್ತಿದೆ.

ನಾಲ್ಕು ಮುಖ್ಯ ದ್ವಾರಗಳಾದ ಅರಣ್ಯ ಇಲಾಖೆಯ ವಸತಿಗೃಹದ ಮುಂಭಾಗದ ದ್ವಾರ, ಮುಕ್ಕಾಟಿರ ಭಾಗದ ದ್ವಾರ, ಮಚ್ಚಂಡ ಅಶೋಕನವರ ತೋಟದ ಭಾಗದ ದ್ವಾರ ಮತ್ತು ಸಜ್ಜಳ್ಳಿ ಹಾಡಿಯ ಭಾಗದ ದ್ವಾರಗಳನ್ನು ಮುಚ್ಚಲು ಈಗಾಗಲೇ ಕಬ್ಬಿಣದ ಗೇಟುಗಳು ತಯಾರಾಗಿದ್ದು ಮುಖ್ಯ ದ್ವಾರಗಳಿಗೆ ಗೇಟುಗಳನ್ನು ಅಳವಡಿಸುವ ಕೆಲಸ ಪ್ರಾರಂಭಗೊAಡಿದೆ.

-ಸುಕುಮಾರ