ವೀರಾಜಪೇಟೆ, ಮಾ. ೧೧: ವೀರಾಜಪೇಟೆ ಚಿಕ್ಕಪೇಟೆಯಲ್ಲಿರುವ ಜಯಪ್ರಕಾಶ್ ನಾರಾಯಣ ಸ್ಮಾರಕ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಬಿ.ಎಸ್.ಲಾಲ್ ಕುಮಾರ್ ಅವರು ೩೦ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು ಶಾಲಾ ಆಡಳಿತ ಮಂಡಳಿ ಹಾಗೂ ಶಾಲೆಯ ವತಿಯಿಂದ ಶಾಲಾ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಜಯಪ್ರಕಾಶ್ ನಾರಾಯಣ ಪ್ರೌಢಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ತ್ರಿಶು ಗಣಪತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತರಾದ ಮುಖ್ಯ ಶಿಕ್ಷಕ ಬಿ.ಎಸ್. ಲಾಲ್ ಕುಮಾರ್ ಹಾಗೂ ಗೀತಾ ಲಾಲ್ ಕುಮಾರ್ ಅವರಿಗೆ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವಿಕರಿಸಿದ ಲಾಲ್ಕುಮಾರ್ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿ ಸಾಗಿಬಂದ ಹಾದಿಯ ಬಗ್ಗೆ ನೆನಪಿಸಿಕೊಂಡರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಪ್ರಕಾಶ್, ಶಾಲಾ ಆಡಳಿತ ಮಂಡಳಿ ನಿರ್ದೇಶಕರಾದ ಎಂ.ಎA. ಉತ್ತಪ್ಪ, ಆಶಾ ಸುಬ್ಬಯ್ಯ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ, ಸಂಪನ್ಮೂಲ ವ್ಯಕ್ತಿ ಕೆ.ಸಿ. ಗೀತಾಂಜಲಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಗಾಯತ್ರಿ, ಹಳೆ ವಿದ್ಯಾರ್ಥಿ ನೀತು ಮಾತನಾಡಿದರು. ಮುಖ್ಯ ಶಿಕ್ಷಕ ರಾಜೇಗೌಡ ಸ್ವಾಗತಿಸಿದರು. ಶಿಕ್ಷಕಿ ಕವಿತಾ ನಿರೂಪಿಸಿದರೆ, ನಂದೀಶ್ ವಂದಿಸಿದರು. ಈ ಸಂದರ್ಭ ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.