ಸೋಮವಾರಪೇಟೆ, ಮಾ. ೧೧: ಎಲ್ಲಾ ಅಂಗಡಿ ಮುಂಗಟ್ಟು, ಕಚೇರಿ ಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯ ವಾಗಿ ಅಳವಡಿಸುವಂತೆ ಆಗ್ರಹಿಸಿ ‘ಕನ್ನಡ ಬಳಸಿ.., ಇಲ್ಲವೇ ಕರ್ನಾಟಕ ಬಿಟ್ಟು ತೊಲಗಿ’ ಎಂಬ ಘೋಷಣೆ ಯೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದಲ್ಲಿ ಜಾಥಾ ನಡೆಸಿದರು.

ಕೊಡಗು ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪಟ್ಟಣದಲ್ಲಿ ಜನಜಾಗೃತಿ ಜಾಥಾ ನಡೆಯಿತು. ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್ ನೇತೃತ್ವದಲ್ಲಿ ಪಟ್ಟಣದಲ್ಲಿ ಜಾಥಾ ನಡೆಸಿದ ಕಾರ್ಯಕರ್ತರು, ಕನ್ನಡ ನಾಮಫಲಕ ವನ್ನು ಕಡ್ಡಾಯವಾಗಿ ಅಳವಡಿಸು ವಂತೆ ಆಗ್ರಹಿಸಿದರಲ್ಲದೆ, ತಪ್ಪಿದ್ದಲ್ಲಿ ಫಲಕಗಳಿಗೆ ಮಸಿ ಬಳಿಯುವ ಎಚ್ಚರಿಕೆ ನೀಡಿದರು.

ಈ ಸಂದರ್ಭ ಮಾತನಾಡಿದ ಕೆ.ಎನ್. ದೀಪಕ್, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರ, ಕಾರ್ಯಕರ್ತರ ತ್ಯಾಗ, ಛಲ ಬಿಡದ ಹೋರಾಟ ಪರಿಣಾಮ ಡಿಸೆಂಬರ್ ೨೭ರ ಐತಿಹಾಸಿಕ ಹೋರಾಟ ನಡೆದಿದೆ. ನಂತರ ಕಾರ್ಯಕರ್ತರ ಮೇಲೆ ಹತ್ತಾರು ಪ್ರಕರಣಗಳನ್ನು ಹೂಡಿ ಜೈಲಿಗೆ ಕಳುಹಿಸಲಾಯಿತು. ಆದರೆ, ಜೈಲು, ಕೋರ್ಟ್, ಕೇಸು ಇತ್ಯಾದಿ ಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಎಂದೂ ಅಂಜುವುದಿಲ್ಲ ಎಂದರು.

ಜಾಥಾದಲ್ಲಿ ಕರವೆ ನಗರ ಘಟಕದ ಅಧ್ಯಕ್ಷ ಬಿ.ಎಸ್. ಮಂಜುನಾಥ್, ತಾಲೂಕು ಘಟಕದ ಉಪಾಧ್ಯಕ್ಷ ಚಂದ್ರು, ಆಟೋ ಚಾಲಕರ ಸಂಘದ ಅಧ್ಯಕ್ಷ ಗಂಗಾಧರ್, ಪದಾಧಿಕಾರಿಗಳಾದ ವೆಂಕಟೇಶ್, ರಾಮಚಂದ್ರ, ಸಂತೋಷ್ ಸೇರಿದಂತೆ ಇತರರು ಹಾಜರಿದ್ದರು.