(ವಿಶೇಷ ವರದಿ: ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಮಾ. ೧೦: ನರರೋಗ, ಹೃದಯ ಕಾಯಿಲೆ, ಸೆಪಿಸ್ಸ್ ನ್ಯುಮೋನಿಯಾ, ಅತಿಸಾರ ಕಾಮಾಲೆ, ಜನನ ಸಮಯದಲ್ಲಿ ಉಸಿರುಗಟ್ಟುವಿಕೆ, ಅವಧಿಪೂರ್ಣ ಜನುಮ, ಶಿಶುವಿನ ಕಡಿಮೆ ತೂಕದಿಂದ ಉಂಟಾಗುವ ಸಮಸ್ಯೆ ಹೀಗೆ ನಾನಾ ಕಾರಣಗಳಿಂದ ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿಯ ಅಂಕಿ ಅಂಶಗಳ ಪ್ರಕಾರ ೨೦೧೯ ರಿಂದ ೨೦೨೪ ಜನವರಿವರೆಗೆ ೨೯೯ ಶಿಶುಗಳು ಪ್ರಪಂಚ ನೋಡುವ ಮೊದಲೇ ಮರಣ ಹೊಂದಿವೆ.

ಕೊಡಗು ಜಿಲ್ಲೆಯಲ್ಲಿ ವಾರ್ಷಿಕವಾಗಿ ಸರಾಸರಿ ೬೫೦೦ ಹೆರಿಗೆ ಆಗುತ್ತದೆ. ಇದರಲ್ಲಿ ಪ್ರತೀ ಸಾವಿರ ಹೆರಿಗೆ ಪ್ರಕರಣಗಳಲ್ಲಿ ಕಳೆದ ಐದು ವರ್ಷಗಳಲ್ಲಿ ೮ ರಿಂದ ೯ ನವಜಾತ ಶಿಶುಗಳು ಸಾವನ್ನಪ್ಪುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿವೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ವಾರ್ಷಿಕವಾಗಿ ಆಗುತ್ತಿರುವ ಹೆರಿಗೆಗಳ ಸಂಖ್ಯೆ ಕಡಿಮೆ ಇದೆ.೫ ಲಕ್ಷದ ೫೫ ಸಾವಿರ ಜನಸಂಖ್ಯೆ ಇರುವ ಕೊಡಗು ಜಿಲ್ಲೆಯಲ್ಲಿ ಶಿಶುಮರಣ ಸಂಖ್ಯೆ ಸರಾಸರಿ ೯ ರ ಅನುಪಾತದಲ್ಲಿವೆ.

ದೊರಕದ ಸೂಕ್ತ ಚಿಕಿತ್ಸೆ!

ಕೊಡಗು ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರ ಮತ್ತು ಸಿಬ್ಬಂದಿಗಳ ಕೊರತೆ ಇದೆ. ವೈದ್ಯರ ಅಲಭ್ಯ ಮತ್ತು ರಾತ್ರಿ ವೇಳೆಯಲ್ಲಿ ಜಿಲ್ಲೆಯ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಾದಿಯರೇ ಹೆರಿಗೆ ಪ್ರಕರಣಗಳು ನಿಭಾಯಿಸುತ್ತಾರೆ.

ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಸಂಭವಿಸಿರುವ ಶಿಶುಮರಣ ಪ್ರಕರಣಗಳಲ್ಲಿ ತಾಯಿಯ ನಿರ್ಲಕ್ಷö್ಯ ಮಗುವಿನ ತೂಕ ಕಡಿಮೆ, ಉಸಿರಾಟ ಸಮಸ್ಯೆ, ಹೆರಿಗೆ ಸಮಯದಲ್ಲಿ ಸೂಕ್ತ ರೀತಿಯಲ್ಲಿ ದೊರಕದ ಚಿಕಿತ್ಸೆ ಹೀಗೆ ನಾನಾ ಕಾರಣಗಳಿಂದ ಶಿಶುಮರಣ ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸಿವೆ. ಹೆರಿಗೆ ದಿನ ಹತ್ತಿರ ಬರುವ ಆಸ್ಪತ್ರೆಗೆ ದಾಖಲಾಗುವ ಗರ್ಭಿಣಿಯರನ್ನು ಕೊನೆಯ ಕ್ಷಣದಲ್ಲಿ ಇತರೆ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆ ಕಳುಹಿಸುವ ಸಂದರ್ಭದಲ್ಲಿ ಕೂಡ ಶಿಶುಮರಣ ಸಂಭವಿಸಿವೆ.

ತಾಯಿಯಲ್ಲಿ ಅತೀ ಹೆಚ್ಚು ರಕ್ತಸ್ರಾವ ಉಂಟಾಗಿರುವ ಪ್ರಕರಣಗಳಲ್ಲಿ ಕೂಡ ಶಿಶಮರಣ ಹೆಚ್ಚಿನ ಸಂಖ್ಯೆಯಲ್ಲಿ ಉಂಟಾಗಿವೆ. ಅದಲ್ಲದೆ ಕೊಡಗಿನ ಕೆಲವೊಂದು ಹಾಡಿಗಳಲ್ಲಿ ತಾವೇ ಸ್ವತಃ ಹೆರಿಗೆ ಮಾಡಿಸಿಕೊಂಡ ಪ್ರಕರಣಗಳಲ್ಲಿ ಕೂಡ ಶಿಶುಮರಣಗಳು ಉಂಟಾಗಿವೆ.

ರಾಷ್ಟಿçÃಯ ಆರೋಗ್ಯ ಮಿಷನ್ ಜಾರಿಯಾದ ಬಳಿಕ ತಾಯಿ-ಶಿಶುವಿನ ಆರೋಗ್ಯ ಸುಧಾರಣೆಗೆ ಮಹತ್ತರ ಯೋಜನೆಗಳನ್ನು ಆರೋಗ್ಯ ಇಲಾಖೆ ಕೈಗೊಳ್ಳಲಾಗಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗರ್ಭಧರಿಸಿದ ಆರಂಭಿಕ ಹಂತದಲ್ಲಿಯೇ ಹೆಸರು ನೋಂದಾಯಿಸಿಕೊAಡು ಅವರಿಗೆ ಪೋಷಕಾಂಶಯುಕ್ತ ಆಹಾರ, ಮಾತ್ರೆಗಳನ್ನು ಒದಗಿಸಲಾಗುತ್ತಿದ್ದರು ಕೂಡ ಕೊಡಗು ಜಿಲ್ಲೆಯಲ್ಲಿ ವಾರ್ಷಿಕವಾಗಿ ಕೇವಲ ೬೫೦೦ ಹೆರಿಗೆ ಆಗುತ್ತಿದ್ದರೂ ಕೂಡ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಶಿಶುಗಳ ಮರಣವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶಗಳನ್ನು ಒಳಗೊಂಡಿರುವ ಪ್ರದೇಶ. ರಾತ್ರಿ ವೇಳೆಯಲ್ಲಿ ಕಾಡು ಪ್ರಾಣಿಗಳ ನಡುವೆ, ತುರ್ತು ಸಂದರ್ಭದಲ್ಲಿ ಆಸ್ಪತ್ರೆ ಸೇರುವುದು ಗ್ರಾಮೀಣ ಭಾಗದಲ್ಲಿ ಸಾಹಸಮಯ ಕೆಲಸ. ಈಗೇ ನಾನ ಕಾರಣಗಳಿಂದ ಜಿಲ್ಲೆಯಲ್ಲಿ ಶಿಶುಮರಣ ನಿಯಂತ್ರಣಕ್ಕೆ ಬರುತ್ತಿಲ್ಲ.

ಕೋವಿಡ್ ಸಮಯದಲ್ಲಿ ಅತೀ ಹೆಚ್ಚು ಶಿಶುಮರಣ!

ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಕೋವಿಡ್ ಸಂದರ್ಭದಲ್ಲೇ ಅತೀ ಹೆಚ್ಚು ಶಿಶುಮರಣ ಸಂಭವಿಸಿದ್ದು, ಕೋವಿಡ್ ಸಂದರ್ಭದಲ್ಲಿ ಬಹುತೇಕ ಉಸಿರಾಟ ತೊಂದರೆಯಿAದಲೇ ಶಿಶುಗಳು ಮೃತಪಟ್ಟಿವೆ. ೨೦೧೯-೨೦ನೇ ಸಾಲಿನಲ್ಲಿ ೭೧ ಮತ್ತು ೨೦೨೦-೨೧ನೇ ಸಾಲಿನಲ್ಲಿ ೭೫ ಶಿಶುಗಳು ಸಾವನ್ನಪ್ಪಿವೆ. ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಹೆರಿಗೆ ವೇಳೆಯಲ್ಲಿ ೧೯ ತಾಯಿಂದಿರು ಕೂಡ ಮೃತಪಟ್ಟಿದ್ದು, ೨೦೧೯-೨೦ರಲ್ಲಿ ೦೨, ೨೦೨೦-೨೧ನೇ ಸಾಲಿನಲ್ಲಿ ೦೪, ೨೦೨೧-೨೨ನೇ ಸಾಲಿನಲ್ಲಿ ೦೪, ೨೦೨೨-೨೩ನೇ ಸಾಲಿನಲ್ಲಿ ೬ ಮತ್ತು ೨೦೨೩ ಏಪ್ರಿಲ್‌ನಿಂದ ೨೦೨೪ಜನವರಿವರೆಗೆ ೩ ತಾಯಂದಿರು ಹೆರಿಗೆ ವೇಳೆಯಲ್ಲಿ ಮೃತಪಟ್ಟಿದ್ದಾರೆ.

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ೨೦೨೩ ಏಪ್ರಿಲ್ ನಿಂದ ೨೦೨೪ ಜನವರಿ ವರೆಗೆ ೪,೪೫೬ ನವಜಾತ ಶಿಶುಗಳು ಮೃತಪಟ್ಟಿವೆ. ೨೦೨೦-೨೧ರಲ್ಲಿ ೬೨೯೩, ೨೦೨೧-೨೨ ರಲ್ಲಿ ೬,೭೨೨ ಹಾಗೂ ೨೦೨೨-೨೩ನೇ ಸಾಲಿನಲ್ಲಿ ೭,೪೭೧ ಶಿಶುಗಳು ಮೃತಪಟ್ಟಿವೆ. ರಾಷ್ಟಿçÃಯ ಆರೋಗ್ಯ ನೀತಿ ೨೦೧೭ರ ಅನ್ವಯ ಎಲ್ಲಾ ರಾಜ್ಯಗಳಿಗೆ ೨೦೨೫ರ ವೇಳೆಗೆ ನವಜಾತ ಶಿಶುಮರಣ ದರವನ್ನು ೧೬ಕ್ಕಿಂತ(ಪ್ರತೀ ಸಾವಿರ ಜೀವಂತ ಜನನಗಳಿಗೆ) ಕಡಿಮೆ ಸಾಧಿಸಲು ಗುರಿ ನಿಗದಿಪಡಿಸಿದೆ. ಪ್ರಸ್ತುತ ರಾಜ್ಯದಲ್ಲಿ ಶಿಶುಮರಣ ದರವು ೧೪(ಪ್ರತೀ ೧೦೦೦ ಜೀವಂತ ಜನನಗಳಿಗೆ) ಇದೆ.