ಭಾಗಮಂಡಲ, ಮಾ. ೯: ಬಿಸಿಲಿನ ಬೇಗೆ ಕಾವೇರಿಯ ತವರಾದ ಭಾಗಮಂಡಲಕ್ಕೂ ತಟ್ಟಿದೆ. ಭಾಗಮಂಡಲದಲ್ಲಿ ಕಾವೇರಿಯ ಜಲಮೂಲಗಳು ಬತ್ತುತ್ತಿವೆ. ಮಳೆಗಾಗಿ ಪ್ರಾರ್ಥನೆ ಸಲ್ಲಿಸುವಂತಹ ಸನ್ನಿವೇಶ ಎದುರಾಗಿದೆ. ಪ್ರತಿವರ್ಷ ೨೫೦ ರಿಂದ ೩೦೦ ಇಂಚು ಮಳೆಯಾಗುವ ಭಾಗಮಂಡಲದಲ್ಲಿ ಇದೀಗ ಬೇಸಿಗೆಯಲ್ಲಿ ನೀರು ಬತ್ತುತ್ತಿದೆ. ಜೊತೆಗೆ ವಾತಾವರಣವೂ ಕೂಡ ಏರುಪೇರಾಗಿದೆ. ಜಲಮೂಲಗಳು ಬತ್ತುತ್ತಿರುವುದರಿಂದ ವಾತಾವರಣ ೩೫ -೩೭ ಡಿಗ್ರಿ ಸೆಲ್ಸಿಯಸ್ನಷ್ಟಿದೆ. ಕೇರಳದ ಹವಾಮಾನ ಭಾಗಮಂಡಲದಲ್ಲಿ ಗೋಚರಿಸುತ್ತಿದೆ.
ತ್ರಿವೇಣಿ ಸಂಗಮದಲ್ಲಿ ಕಾವೇರಿಯ ನದಿ ನೀರಿನ ಪ್ರಮಾಣ ತೀವ್ರ ಕಡಿಮೆಯಾಗಿದೆ. ತ್ರಿವೇಣಿ ಸಂಗಮದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದರಿಂದ ನೀರಿನ ಶೇಖರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಸ್ನಾನಕ್ಕೆ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಭಕ್ತರಿಗೆ ಪಿಂಡ ಪ್ರದಾನ ಮಾಡುವುದು ಕಷ್ಟಕರವಾಗಿದೆ. ಅಭಿವೃದ್ಧಿ ಕಾರ್ಯಗಳು ಮುಕ್ತಾಯಗೊಳ್ಳುವ ಹಂತದಲ್ಲಿದೆ. ಬಳಿಕ ನೀರಿನ ಶೇಖರಣೆ ಮಾಡಿ ಸ್ನಾನಕ್ಕೆ ಅವಕಾಶ ಕಲ್ಪಿಸಿಕೊಡುವ ಸಾಧ್ಯತೆಯಲ್ಲಿದೆ. ತ್ರಿವೇಣಿ ಸಂಗಮದಲ್ಲಿ ಎರಡು ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ತ್ರಿವೇಣಿ ಸಂಗಮ ಆಕರ್ಷಣೀಯ ಸ್ಥಳವಾಗಲಿದೆ. ಎರಡು ರಸ್ತೆಯ ಬಳಿ ಕಮಾನು ನಿರ್ಮಿಸಲಾಗುತ್ತಿದೆ. ರಾತ್ರಿ ವೇಳೆ ತ್ರಿವೇಣಿ ಸಂಗಮಕ್ಕೆ ನಿಷೇಧ ಮಾಡಲಾಗುತ್ತದೆ. ಭಾಗಮಂಡಲದ ಭಗಂಡೇಶ್ವರ ದೇವಾಲಯ ಮುಚ್ಚಿದ ಸಂದರ್ಭದಲ್ಲಿ ತ್ರಿವೇಣಿ ಸಂಗಮಕ್ಕೂ ತೆರಳದಂತೆ ಮಾಡಲಾಗುವುದು. ಕಲ್ಲಿನ ಚಪ್ಪಡಿ ಹಾಗೂ ನೆಲಹಾಸು ಇದ್ದುದನ್ನು ತೆಗೆದು ಜಾರದ ರೀತಿ ಗ್ರಾನೈಟ್ ಅಳವಡಿಸಿಕೊಳ್ಳಲಾಗುತ್ತಿದೆ. ತ್ರಿವೇಣಿ ಸಂಗಮದ ಸುತ್ತ ಆಕರ್ಷಣೀಯ
(ಮೊದಲ ಪುಟದಿಂದ) ಹೂವಿನ ಅಲಂಕಾರಗಳ ಉದ್ಯಾನ ನಿರ್ಮಿಸಲಾಗುತ್ತಿದೆ. ಸುತ್ತಲೂ ಕಬ್ಬಿಣದ ಗ್ರಿಲ್ಗಳನ್ನು ಅಳವಡಿಸಿ ಇನ್ನಷ್ಟು ಅಂದ ಹೆಚ್ಚಿಸಲಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ ಕುಳಿತು ವೀಕ್ಷಣೆಗೆ ಯೋಜನೆ ರೂಪಿಸಲಾಗಿತ್ತು. ಆದರೆ ಕುಳಿತು ನೋಡುವ ವ್ಯವಸ್ಥೆಯನ್ನು ಈಗ ಕಲ್ಪಿಸಲಾಗುತ್ತಿಲ್ಲ. ಕಮಾನಿಗೆ ಹಂಚು ಮತ್ತು ಕಲ್ಲುಗಳಿಂದ ಅಳವಡಿಸಿ ಸುಂದರವಾಗಿ ಕಾಣುವಂತೆ ಮಾಡಲಾಗುತ್ತಿದೆ. ನದಿಯ ಬಳಿ ನಿಂತು ನೋಡಲು ಅವಕಾಶ ಕಲ್ಪಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಇದು ಧಾರ್ಮಿಕ ತಾಣವಾಗಿ ಕಂಗೊಳಿಸಲಿದೆ. ಸಂಗಮದ ಸುತ್ತಲೂ ನಿರ್ಮಿಸಲಾಗಿರುವ ಉದ್ಯಾನವನ ಈಗ ಆಕರ್ಷಕವಾಗಿ ಕಂಡರೂ ಮಳೆಗಾಲದಲ್ಲಿ ತನ್ನ ಆಕರ್ಷಣೆಯನ್ನು ಉಳಿಸಿಕೊಳ್ಳಲಿದೆಯೇ ಎಂಬುದು ಪ್ರಶ್ನೆಯಾಗಿದೆ. ರಾತ್ರಿ ಅಲ್ಲಲ್ಲಿ ಅಲಂಕೃತ ಲೈಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ರಾತ್ರಿ ಕೂಡ ತ್ರಿವೇಣಿ ಸಂಗಮ ಕಂಗೊಳಿಸಲಿದೆ. -ಸುನಿಲ್ ಕುಯ್ಯಮುಡಿ