ವೀರಾಜಪೇಟೆ, ಮಾ. ೬: ವೀರಾಜಪೇಟೆ ಪುರಸಭೆ ವ್ಯಾಪ್ತಿಯ ೧೮ ವಾರ್ಡ್ಗಳಿಗೆ ಕುಡಿಯುವ ನೀರು, ವಿದ್ಯುತ್ ದೀಪ, ಶೌಚಾಲಯ, ರುದ್ರಭೂಮಿ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಪುರಸಭೆ ಆಡಳಿತಾಧಿಕಾರಿ ನರ್ವಾಡೆ ವಿನಾಯಕ್ ಕರ್ಭಾರಿ ಅವರ ಅಧ್ಯಕ್ಷತೆಯಲ್ಲಿ ಪುರಸಭೆ ಸಭಾಂಗಣದಲ್ಲಿ ನಡೆದ ೨೦೨೪-೨೫ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಸದಸ್ಯ ಡಿ.ಪಿ. ರಾಜೇಶ್ ಮಾತನಾಡಿ, ನಗರದ ಬಹುತೇಕ ವಾರ್ಡ್ಗಳಲ್ಲಿ ಮುಖ್ಯ ರಸ್ತೆಗಳಲ್ಲಿ ವಿದ್ಯುತ್ ದೀಪಗಳಿಲ್ಲ. ಪ್ರತಿ ತಿಂಗಳು ವಿದ್ಯುತ್ ಬಿಲ್ ಮಾತ್ರ ಹೆಚ್ಚುತ್ತಿದ್ದು, ವಿದ್ಯುತ್ ದೀಪಗಳು ಉರಿಯುತ್ತಿಲ್ಲ. ಟೆಂಡರ್ ಕರೆದು ಗುತ್ತಿಗೆ ನೀಡಲಾಗಿದ್ದ ವ್ಯಕ್ತಿ ಕೆಲಸ ಮಾಡುತ್ತಿಲ್ಲ. ದೂರವಾಣಿ ಮೂಲಕ ಸದಸ್ಯರುಗಳಿಗೆ ಸಿಗುತ್ತಿಲ್ಲ ಎಂದರು.

ಸದಸ್ಯೆ ಎಂ.ಕೆ. ದೇಚಮ್ಮ ಮಾತನಾಡಿ, ೭ನೇ ವಾರ್ಡ್ ಮೊಗರಗಲ್ಲಿ ಕೊಳಚೆ ಪ್ರದೇಶ ಎಂದು ಗುರುತಿಸಲಾಗಿದ್ದು. ಅಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಪಕ್ಕದ ೮ ಮತ್ತು ೯ನೇ ವಾರ್ಡ್ಗಳಿಗೂ ವಾರದಲ್ಲಿ ಎರಡು ಬಾರಿ ಮಾತ್ರ ಕುಡಿಯುವ ನೀರು ಬರುತ್ತದೆ. ಇದರಿಂದ ಅಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗಿದೆ. ವೀರಾಜಪೇಟೆ ನಗರದ ಎಲ್ಲಾ ರಸ್ತೆಗಳಲ್ಲಿಯೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಬೀಡಾಡಿ ದನಗಳು ಮುಖ್ಯ ರಸ್ತೆಯಲ್ಲಿ ಓಡಾಡುವುದರಿಂದ ವಾಹನಗಳು ಸಂಚರಿಸಲು ಸಮಸ್ಯೆಯಾಗುತ್ತಿದ್ದು, ಇದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಎಸ್.ಹೆಚ್. ಮತೀನ್ ಈ ಹಿಂದೆ ಶಾಸಕರು ಸಭೆ ಕರೆದು ಅಭಿವೃದ್ಧಿ ಕೆಲಸಗಳನ್ನು ನಡೆಸುವಂತೆ ಹೇಳಿದ್ದರೂ ಅಧಿಕಾರಿಗಳು ಸಿಬ್ಬಂದಿ ಗಮನ ಹರಿಸಿಲ್ಲ ಎಂದು ಆರೋಪಿಸಿದರು.

ಸದಸ್ಯ ಪಿ. ರಂಜಿ ಪೂಣಚ್ಚ ಮಾತನಾಡಿ, ರಸ್ತೆಬದಿ ಚರಂಡಿಗಳು ಗಬ್ಬೆದ್ದು ನಾರುತ್ತಿವೆ. ಅಲ್ಲಲ್ಲಿ ಕಸದ ರಾಶಿ ಇದೆ. ವೀರಾಜಪೇಟೆ ವ್ಯಾಪ್ತಿಯಲ್ಲಿರುವ ರುದ್ರ ಭೂಮಿಗಳಿಗೆ ಕಾಯಕಲ್ಪ ಸಿಕ್ಕಿಲ್ಲ ಎಂದರು. ಸದಸ್ಯ ಮಹ್ಮದ್ ರಾಫಿ ಮಾತನಾಡಿ, ವಾರ್ಡ್ಗಳಲ್ಲಿ ಎರಡು ಮೂರು ಮಂದಿ ಮಾತ್ರ ಕೆಲಸ ಮಾಡುತ್ತಾರೆ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತಿಲ್ಲ. ಪೌರ ಕಾರ್ಮಿಕರನ್ನು ಸರಿಯಾಗಿ ಬಳಿಸಿಕೊಳ್ಳುತ್ತಿಲ್ಲ ಎಂದು ದೂರಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಆಡಳಿತಾಧಿಕಾರಿ ಉಪವಿಭಾಗಾಧಿಕಾರಿ ನರ್ವಾಡೆ ವಿನಾಯಕ್ ಕರ್ಭಾರಿ ಅವರು ಮಾತನಾಡಿ ಇಂದು ನಡೆದ ಚರ್ಚೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಬಗ್ಗೆ ಸದಸ್ಯರು ಮಾತನಾಡಿದ್ದು, ಕೆಲವೇ ದಿನಗಳಲ್ಲಿ ಆಯವ್ಯಯ ಸಭೆಯನ್ನು ಕರೆಯಲಾಗುವುದು. ಸದಸ್ಯರು ಮತ್ತು ಅಧಿಕಾರಿಗಳು ಸೇರಿ ಉತ್ತಮ ರೀತಿಯಲ್ಲಿ ಪುರಸಭೆ ವ್ಯಾಪ್ತಿಯ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದಾಗಿ ತಿಳಿಸಿದರು.

ಈ ಸಂದರ್ಭ ಸದಸ್ಯ ಸಿ.ಕೆ. ಪ್ರಥ್ವಿನಾಥ್ ಮಾತನಾಡಿ ಪುರಸಭೆ ವ್ಯಾಪ್ತಿಯಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ರೂ.೨ ಸಾವಿರ ನೀಡುತ್ತಿದ್ದು, ಅದನ್ನು ೩ ಸಾವಿರಕ್ಕೆ ಏರಿಸುವಂತೆ ಮನವಿ ಮಾಡಿದರು.

ಮುಖ್ಯಾಧಿಕಾರಿ ಚಂದ್ರ ಕುಮಾರ್ ಮಾತನಾಡಿ ವಿದ್ಯುತ್ ಅಡಚಣೆ ಇದ್ದಾಗ ಜನರೇಟರ್ ಇದ್ದರೂ ಕಾರಣಾಂತರದಿAದ ಕುಡಿಯುವ ನೀರಿನ ಸಮಸ್ಯೆ ಆಗಬಹುದು. ಈಗಾಗಲೇ ಬಿಸಿಲಿನ ತಾಪ ಹೆಚ್ಚಾಗಿದ್ದು ಎಲ್ಲಾ ಜನರಿಗೂ ಕುಡಿಯುವ ನೀರಿನ ಸೌಲಭ್ಯ ನೀಡಬೇಕು. ಸಾರ್ವಜನಿಕರು ಕುಡಿಯುವ ನೀರನ್ನು ಹೂ ತೋಟಕ್ಕೆ ಬಿಡುವುದು, ವಾಹನಗಳನ್ನು ತೊಳೆಯುವುದು, ಪೈಪ್‌ಗಳಲ್ಲಿ ನೀರನ್ನು ವ್ಯರ್ಥ ಮಾಡುವುದು ಕಂಡು ಬಂದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಸಭೆಯಲ್ಲಿ ಸದಸ್ಯರಾದ ಮಹದೇವ್, ರಜನಿಕಾಂತ್, ಸುನಿತ ಜೂನ, ಆಶಾ ಸುಬ್ಬಯ್ಯ, ಅನಿತಾ, ಅಬ್ದುಲ್ ಜಲೀಲ್ ಮಾತನಾಡಿದರು.